ಎಮ್ಮೆಮಾಡು ಸೂರ್ಯ ಫ್ರೆಂಡ್ಸ್ ತಂಡಕ್ಕೆ ನಾಪೋಕ್ಲು ಯೂತ್ ಕಾಂಗ್ರೆಸ್ ಕಪ್ ವಾಲಿಬಾಲ್ ಪ್ರಶಸ್ತಿ : ಕೆ.ಕೆ.ಆರ್ ನೈಟ್ ರೈಡರ್ಸ್ ತಂಡ ರನ್ನರ್ಸ್

No comments
ವರದಿ :ಝಕರಿಯ ನಾಪೋಕ್ಲು 

ನಾಪೋಕ್ಲು : ನಾಪೋಕ್ಲು ಸಮೀಪದ  ಚೆರಿಯಪರಂಬು ಜನರಲ್ ಕೆ ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ  ಯುತ್ ಕಾಂಗ್ರೆಸ್ ನಾಪೋಕ್ಲು ಬ್ಲಾಕ್  ಹಾಗೂ ಚೆರಿಯಪರಂಬು ಕಲ್ಲುಮೊಟ್ಟೆ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ  ಮೊದಲನೇ ವರ್ಷದ ಯೂತ್ ಕಾಂಗ್ರೆಸ್ ಕಪ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯಾಟದಲ್ಲಿ ಸೂರ್ಯ ಫ್ರೆಂಡ್ಸ್ ಎಮ್ಮೆಮಾಡು ತಂಡ- ಕೆ.ಕೆ.ಆರ್ ನೈಟ್ ರೈಡರ್ಸ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಕೆ.ಕೆ.ಆರ್ ನೈಟ್ ರೈಡರ್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಗೊಂಡಿತು.

 ಕೊಡಗಿನ 8 ತಂಡಗಳು ಭಾಗವಹಿಸಿದ ಪಂದ್ಯಾವಳಿಯಲ್ಲಿ ಮೂವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಅತಿಥಿ ಆಟಗಾರರನ್ನು ಒಳಗೊಂಡ ಎಲ್ಲಾ ತಂಡಗಳು ಅತ್ಯುತ್ತಮ ಪ್ರದರ್ಶನವನ್ನು ನೀಡಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ  ಕ್ರೀಡಾಭಿಮಾನಿಗಳ ಗಮನ ಸೆಳೆದರು.
 ಇದಕ್ಕೂ  ಮೊದಲು ನಡೆದ ಉದ್ಘಾಟನಾ ಸಮಾರಂಭದಲ್ಲಿ ಕೊಡಗು ಜಿಲ್ಲಾ ಯುವ ಕಾಂಗ್ರೆಸ್ಸಿನ ಅಧ್ಯಕ್ಷ  ಮಿಥುನ್ ಗೌಡ ಹಾಗೂ ರಾಷ್ಟ್ರೀಯ ಯೂಥ್ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಮಾಹಿನ್ ಖಾನ್ ಚೆಂಡಿನ ಪ್ರಯೋಗದೊಂದಿಗೆ  ಪಂದ್ಯಾವಳಿಗೆ ಚಾಲನೆ ನೀಡಿದರು.
 ಬಳಿಕ ಮಾತನಾಡಿದ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಗೌಡ ಇಂದು ಜಾತಿ ಮತ ಭೇದವಿಲ್ಲದೆ ಇರುವ ಒಂದು ಸ್ಥಳವೆಂದರೆ ಕ್ರೀಡಾಕೂಟ ಮಾತ್ರವಾಗಿದೆ, ಕ್ರೀಡಾಕೂಟ ಹೊರತಾಗಿ ಬಾಕಿ ಇರುವ ಎಲ್ಲಾ ಸ್ಥಳದಲ್ಲೂ ಜಾತಿ ಮತದ ಆಧಾರದ ಮೇಲೆ ಕಾರ್ಯಕ್ರಮ ನಡೆಯುವಂತ ಪರಿಸ್ಥಿತಿ ದೇಶದಲ್ಲಿ ಮೂಡಿದೆ, ನಮ್ಮ ಜಿಲ್ಲೆಯಿಂದ ವಿವಿಧ ಕ್ರೀಡೆಗೆ ಹಲವಾರು ಕ್ರೀಡಾಪಟುಗಳನ್ನು ದೇಶಕ್ಕೆ  ನೀಡಿದೆ. ಇಂತಹ ಕ್ರೀಡಾಕೂಟವನ್ನು ಆಯೋಜಿಸುವುದರಿಂದ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ಮುಂದೆ ಬರಲುಸಾಧ್ಯವಾಗಲಿದೆ ಎಂದರು.
 ಡಿಸಿಸಿ ಕೊಡಗು ಜಿಲ್ಲೆಯ ಉಪಾಧ್ಯಕ್ಷರಾದ ಎಂ. ಎಚ್.ಅಬ್ದುಲ್ ರೆಹ್ಮಾನ್ ಮಾತನಾಡಿ ನಾಪೋಕ್ಲು ನಾಲ್ಕುನಾಡು ವಿಭಾಗದಿಂದ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟಕ್ಕೆ ಹಲವಾರು ಕ್ರೀಡಾಪಟುಗಳನ್ನು ನೀಡಿದೆವಿವಿಧತೆಯಲ್ಲಿ ಏಕತೆಯನ್ನು ಕಾಣುವ ನಮ್ಮ ಭಾರತ ದೇಶಕ್ಕೆ ಮುಖ್ಯವಾದ ಒಂದು ಕೊಡುಗೆ ಅಂದರೆ ಅದು ಕ್ರೀಡೆಯಾಗಿದೆ. ಕ್ರೀಡೆಯಲ್ಲಿ ಯಾವುದೇ ಧರ್ಮವನ್ನು ಕಾಣಲು ಸಾಧ್ಯವಿಲ್ಲ ಕ್ರೀಡಾಪಟುವನ್ನು ಮಾತ್ರ ಜನರು ಪ್ರೀತಿಸುತ್ತಾರೆ, ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಇಂತಹ ಕ್ರೀಡಾಕೂಟ ಎಲ್ಲರನ್ನು ಅನ್ಯೋನ್ಯತೆ ಹಾಗೂ ಸಹೋದರತೆಯಿಂದ ಬಾಳಲು ಪ್ರೇರೇಪಿಸುತ್ತದೆ ಎಂದರು.
 ಯೂತ್ ಕಾಂಗ್ರೆಸ್ಸಿನ ರಾಷ್ಟ್ರೀಯ ಕಾರ್ಯದರ್ಶಿ ಮಾಹಿನ್ ಖಾನ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ. ಇಸ್ಮಾಯಿಲ್,ಗ್ರಾ. ಪಂ. ಅಧ್ಯಕ್ಷೆ ಎಚ್. ಎಸ್. ಪಾರ್ವತಿ, ಪ್ರಾಸ್ತಾವಿಕವಾಗಿ ಮಾತನಾಡಿ ಕ್ರೀಡಾಪಟುಗಳಿಗೆ ಶುಭ ಕೋರಿದರು.

ಸನ್ಮಾನ ಕಾರ್ಯಕ್ರಮ:

ಕಾರ್ಯಕ್ರಮದಲ್ಲಿ ವಾಲಿಬಾಲ್ ಭಾರತ ತಂಡದ  ನಾಯಕ ಕಾರ್ತಿಕ್ ಅವರನ್ನು ನಾಪೋಕ್ಲು ಯೂತ್ ಕಾಂಗ್ರೆಸ್ಸಿನ ಅಧಿಕಾರಿಗಳು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
 ಇದೇ ಸಂದರ್ಭ ಪಂದ್ಯಾವಳಿಗೆ ಅತಿಥಿಗಳಾಗಿ ಆಗಮಿಸಿದ ಗಣ್ಯರಿಗೆ  ಪಂದ್ಯಾವಳಿಯಲ್ಲಿ ಭಾಗವಹಿಸಿದ ತಂಡಗಳಿಗೆ ಹಾಗೂ ಹಿರಿಯ ಆಟಗಾರರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
 ಪಂದ್ಯಾವಳಿಯಲ್ಲಿ ಬೆಸ್ಟ್ ಅಟೆಕರ್ ಪ್ರಶಸ್ತಿಯನ್ನು  ಇಂಡಿಯನ್ ರೈಲ್ವೆಯ ಆಟಗಾರ ಫೈಸಲ್ ಪಡೆದುಕೊಂಡರು. ಬೆಸ್ಟ್ ಬ್ಲಾಕರ್ ಪ್ರಶಸ್ತಿಯನ್ನು ಭಾರತ ತಂಡದ ನಾಯಕ ಕಾರ್ತಿಕ್ ಪಡೆದರು. ಬೆಸ್ಟ್ ಶೆಟ್ಟರ್ ಬಹುಮಾನವನ್ನು ಕರ್ನಾಟಕ ಪೋಸ್ಟಲ್ ತಂಡದ ಆಟಗಾರ ಪವನ್ ಕುಮಾರ್ ಪಡೆದುಕೊಂಡರು. ಪಂದ್ಯಾವಳಿಯ  ಆಲ್ ಫೌಂಡರ್  ಪ್ರಶಸ್ತಿಯನ್ನು ಕರ್ನಾಟಕ ತಂಡದ ನಾಯಕ ರೈಷನ್ ರೆಬೆಲೋ ಪಡೆದರೆ, ಬೆಸ್ಟ್ ಲಿಬರೋ ಪ್ರಶಸ್ತಿಯನ್ನು  ಕೆಕೆಆರ್ ತಂಡದ ಅಮ್ಮಿ ಅವರು ಭಾಜನರಾದರು.
 ಪಂದ್ಯಾವಳಿಯ ತೀರ್ಪುಗಾರರಾಗಿ ವಾಲಿಬಾಲ್ ರಾಷ್ಟೀಯ ತೀರ್ಪುಗಾರರಾದ  ಕೇರಳದ ಟಿಲ್ಜೊಹಾಗೂ ಜೋಸೆಫ್ ಮತ್ತು ನಾಪೋಕ್ಲುವಿನ ಅಬ್ಬಾಸ್ ಕಾರ್ಯ ನಿರ್ವಹಿಸಿದರು.
 ಪಂದ್ಯಾವಳಿಯ ವೀಕ್ಷಕ ವಿವರಣೆಯನ್ನು ವಿರಾಜಪೇಟೆಯ ರಾಹುಲ್, ಹನೀಫ್ ಎಡಪಾಲ ಹಾಗೂ ಝುಬೈರ್ ಎಮ್ಮೆಮಾಡು ನೀಡಿದರು.
ಈ ಸಂದರ್ಭ ಪಂದ್ಯಾಟದ ಆಯೋಜಕ ಹಾಗೂ ನಾಪೋಕ್ಲು ಬ್ಲಾಕ್ ಯುತ್ ಕಾಂಗ್ರೆಸ್ ಅಧ್ಯಕ್ಷ ಪರವಂಡ ಸಿರಾಜ್, ಕೆ ವೈ ಸಿ ಸಿ ರಾಜ್ಯ ಉಸ್ತುವಾರಿ ಐಮನ್ ಖಾನ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ. ಹಂಸ, ವಿರಾಜಪೇಟೆ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಫಾರೂಕ್, ಅಬ್ದುಲ್ ಲತೀಫ್ ಬೇತ್ರಿ, ಗ್ರಾ.ಪಂ.ಉಪಾಧ್ಯಕ್ಷ ಟಿ.ಎ ಮಹಮ್ಮದ್,ಹೊದ್ದೂರು ಗ್ರಾ. ಪಂ. ಸದಸ್ಯ ಮೊಯ್ದು,ಗ್ರಾ. ಪಂ.ಮಾಜಿ ಅಧ್ಯಕ್ಷ ಸಲೀಂ ಹ್ಯಾರಿಸ್,ನಾಸಿರ್ ಮಕ್ಕಿ,ಸೇರಿದಂತೆ ಮತ್ತಿತರ ಮುಖಂಡರು,ನಾಪೋಕ್ಲು ಯೂತ್ ಕಾಂಗ್ರೆಸ್ಸಿನ ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು.

No comments

Post a Comment