ಮಾನವೀಯ ಮೌಲ್ಯಕ್ಕೆ ಬೆಲೆ ತುಂಬಿದ ಮಡಿಕೇರಿಯ ಸಹೃದಯಿ ಬಂಧುಗಳು
ಮಡಿಕೇರಿ (Times Of Coorg) : ಕೊಡಗಿನ ಪಟ್ಟಣಗಳಲ್ಲಿ ಅಲೆದಾಡುತ್ತಾ, ಜನರು ಕೊಟ್ಟದನ್ನು ತಿನ್ನುತ್ತಾ, ಎಲ್ಲೆಂದರಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಅವರ ಕುಟುಂಬದವರಿಗೆ ಒಪ್ಪಿಸಿದ ಮಾನವೀಯ ಘಟನೆಯೊಂದು ನಗರದಲ್ಲಿ ನಡೆದಿದೆ.
ಮಡಿಕೇರಿ, ಕುಶಾಲನಗರ ಹೀಗೆ ಪಟ್ಟಣಗಳಲ್ಲಿ ದಿಕ್ಕು ದೆಸೆ ಇಲ್ಲದೆ ಅಲೆದಾಡುತ್ತಿದ್ದ ದೇವಣ್ಣ ಎಂಬ ವ್ಯಕ್ತಿಯನ್ನು ಮಡಿಕೇರಿಯ ಸಮಾಜ ಸೇವಕರ ನೆರವಿನಿಂದ ಮತ್ತೆ
ಅವರ ಕುಟುಂಬದವರ
ಕೈಗೆ ಒಪ್ಪಿಸಲಾಗಿದೆ.
ಮಾನಸಿಕವಾಗಿ ಸ್ವಲ್ಪಮಟ್ಟಿಗೆ ಸಮಸ್ಯೆ ಇದ್ದ ಈ ವ್ಯಕ್ತಿ ಯಾರಿಗೂ ತೊಂದರೆ ನೀಡದೆ ತನ್ನಷ್ಟಕ್ಕೆ ತಾನು ಅಲೆದಾಡುತ್ತಾ, ಯಾರಾದರು ಏನಾದರು ಕೊಟ್ಟರೆ ತಿನ್ನುತ್ತಾ, ಅಂಗಡಿ ಮಳಿಗೆಗಳ ಬಳಿ ವಿಶ್ರಮಿಸುತ್ತಾ ಇರುತ್ತಿದ್ದರು. ಹೀಗೆ
ಈತ ಅಲೆದಾಡುತ್ತಾ ಮಡಿಕೇರಿ ನಗರದ ಮೈತ್ರಿ ವೃತ್ತದ ಬಳಿ ಇರುವ ಮೋನೀಷ್ ಕ್ಯಾಂಟಿನ್ ಬಳಿ ಕುಳಿತಿದ್ದಾನೆ ಇದನ್ನು ಕಂಡ ಅಲ್ಲಿನ ಮಾಲೀಕರಾದ ಪೊನ್ನು ಅವರು ಕೂಡಲೆ ದೂರವಾಣಿ ಕರೆ ಮೂಲಕ ಈ ಬಗ್ಗೆ ಶಕ್ತಿ ವೃದ್ಧಾಶ್ರಮದ ಮೇಲ್ವಿಚಾರಕರಾದ ಸತೀಶ್ ಅವರಿಗೆ ತಿಳಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಸತೀಶ್, ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ ಅವರಿಗೆ ವಿಚಾರ ತಿಳಿಸಿ, ಅವರ ಮಾರ್ಗದರ್ಶನದೊಡನೆ, ಮಡಿಕೇರಿಯ ಬ್ಲಡ್ ಡೋನರ್ಸ್ ನ ಅಧ್ಯಕ್ಷರಾದ ವಿನು, ಸಂಘಟನಾ ಕಾರ್ಯದರ್ಶಿ ಸಮೀರ್, ಕೀರ್ತಿ ಹಾಗು ಪತ್ರಕರ್ತ ಚಂದನ್ ನಂದರಬೆಟ್ಟು ಅವರೊಡನೆ ಮೈತ್ರಿಗೆ ಬಂದು ಚಳಿಯಿಂದ ನಡುಗುತ್ತಿದ್ದ ವ್ಯಕ್ತಿಗೆ ಚಹಾ ಕುಡಿಸಿ ಆತನನ್ನು ಮಾತನಾಡಿಸಲು ಪ್ರಯತ್ನಿಸಿದಾಗ ಆತ ಸಮರ್ಪಕ ಉತ್ತರ ನೀಡಲಿಲ್ಲ. ಈ ಕಾರಣದಿಂದ ದೇವಣ್ಣ ಅವರನ್ನು ಪುಟ್ಟಣ್ಣ ಎಂಬುವವರ ಆಟೋ ಮುಖಾಂತರ ಕರೆದೊಯ್ದು, ಮಡಿಕೇರಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಅಸ್ಪತ್ರೆಯಲ್ಲಿ ಆತನನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿ, ಓಳರೋಗಿಯಾಗಿ ದಾಖಲಿಸಿಕೊಂಡು, ಮೂರು ದಿನಗಳ ಕಾಲ ನಿಗಾ ವಹಿಸಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಸಾಧ್ಯವಾದಷ್ಟು ಸಹಜ ಸ್ಥಿತಿಗೆ ತರುವ ಪ್ರಯತ್ನವನ್ನು ಆಸ್ಪತ್ರೆಯ ಸಿಬ್ಬಂದಿ ಮಾಡಿದರು. ಈ ನಡುವೆ ದೇವಣ್ಣನ ಕುಟುಂಬದ ಕುರಿತು, ನಂಜನಗೂಡಿನ ಸಮಾಜಸೇವಕರಾದ ಅಶೋಕ್ ಅವರಿಂದ ಮಾಹಿತಿ ಕಲೆ ಹಾಕಿದ ಸತೀಶ್ ಹಾಗು ತಂಡ, ಮಾನಸಿಕವಾಗಿ ಸುಧಾರಿಸಿದ್ದ ದೇವಣ್ಣರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿಕೊಂಡು, ಸರಕಾರಿ ಆಸ್ಪತ್ರೆಯ ಆಂಬುಲನ್ಸ್ ಮೂಲಕ ಅವರ ಸ್ವಗ್ರಾಮವಾದ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇಬೂರ್ ಎಂಬ ಸ್ಥಳಕ್ಕೆ ಮಡಿಕೇರಿಯ ಸಂದೀಪ್.ಟಿ.ಜಿ ಅವರೊಡನೆ ತೆರಳಿ ಕುಟುಂಬಸ್ಥರಿಗೆ ದೇವಣ್ಣನನ್ನು ಒಪ್ಪಿಸಿದ್ದಾರೆ. ಹೀಗೆ ಕುಟುಂಬದಿಂದ ತಪ್ಪಿ ಹೋಗಿದ್ದ ವ್ಯಕ್ತಿಯೋರ್ವ ಮತ್ತೆ ತನ್ನವರನ್ನು ಸೇರುವಂತಾಗಿದೆ.
ಈ ನೆರವಿನ ಕಾರ್ಯದಲ್ಲಿ ಶಕ್ತಿ ವೃದ್ಧಾಶ್ರಮದ ಮೇಲ್ವಿಚಾರಕರಾದ ಸತೀಶ್, ಮಡಿಕೇರಿ ನಗರದ ಪೋಲೀಸ್ ವೃತ್ತ ನಿರಿಕ್ಷಕರಾದ ಅನೂಪ್ ಮಾದಪ್ಪ, ಕೊಡಗು ಬ್ಲಡ್ ಡೋನರ್ಸ್ ಅಧ್ಯಕ್ಷರಾದ ವಿನು, ಬ್ಲಡ್ ಡೋನರ್ಸ್ ಸಂಘಟನಾ ಕಾರ್ಯದರ್ಶಿ ಸಮೀರ್, ಕೀರ್ತಿ, ಪತ್ರಕರ್ತ ಚಂದನ್ ನಂದರಬೆಟ್ಟು, ಹೋಟೆಲ್ ಮಾಲೀಕರಾದ ಪೊನ್ನು ಹಾಗು ಸಂದೀಪ್.ಟಿ.ಜಿ. ಭಾಗಿಯಾಗಿದ್ದರು.


No comments
Post a Comment