ಜನಗಣತಿ ಕಾರ್ಯ ಅಗತ್ಯ ಸಹಕಾರಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮನವಿ

No comments
           ಮಡಿಕೇರಿ TOC:-ದೇಶದಾದ್ಯಂತ ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿಯನ್ನು ನಡೆಸಲಾಗುತ್ತದೆ. ಜನಗಣತಿ ಕಾರ್ಯವನ್ನು ರಾಷ್ಟ್ರದಲ್ಲಿ 1881 ರಲ್ಲಿ ಪ್ರಾರಂಭಿಸಿದ್ದು, ಪ್ರಸ್ತುತ 2021 ರಲ್ಲಿ ನಡೆಯುವ ಜನಗಣತಿಯು 15ನೇ  ಜನಗಣತಿಯಾಗಿದೆ.
ಜನಗಣತಿಯಲ್ಲಿ ಸಂಗ್ರಹಿಸಲಾಗುವ ಮಾಹಿತಿಯು ಮಹತ್ವವುಳ್ಳದ್ದಾಗಿದ್ದು, ಸಂಗ್ರಹವಾಗುವ ದತ್ತಾಂಶದಿಂದ ದೇಶದಲ್ಲಿನ ಹಲವು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಪ್ರಗತಿ ತಿಳಿಯಬಹುದಾಗಿದೆ. ಅಲ್ಲದೆ ಈ ದತ್ತಾಂಶ ಆಧಾರವಾಗಿಟ್ಟುಕೊಂಡು ಮುಂದಿನ 10 ವರ್ಷಗಳಲ್ಲಿ ಸರ್ಕಾರದ ಮಟ್ಟದಲ್ಲಿ ಯೋಜನೆ ತಯಾರಿಸಲು ಉಪಯೋಗಿಸಲಾಗುತ್ತದೆ. ಜನಗಣತಿಯು ಚುನಾವಣೆಯಂತೆಯೆ ದೇಶದ ಪ್ರಜಾಪ್ರಭುತ್ವದ ಮಹತ್ವದ ಕಾರ್ಯಚರಣೆಯಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.   
2021 ರ ಜನಗಣತಿ ಕಾರ್ಯವು ದೇಶದಾದ್ಯಂತ ಪ್ರಾರಂಭವಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ 2020ರ ಏಪ್ರಿಲ್ 15 ರಿಂದ ಮೇ 29 ರವರೆಗೆ ಮೊದಲ ಹಂತದಲ್ಲಿ ಮನೆ ಪಟ್ಟಿ ಮತ್ತು ಮನೆಗಳ ಗಣತಿ ಕಾರ್ಯ ತಯಾರಿ ಕಾರ್ಯ ಕೊಡಗು ಜಿಲ್ಲೆಯಾದ್ಯಂತ ನಡೆಯಲಿದೆ.
ಜಿಲ್ಲಾಧಿಕಾರಿಯವರು ಜಿಲ್ಲೆಯ ಪ್ರಧಾನ ಜನಗಣತಿ ಅಧಿಕಾರಿಯಾಗಿದ್ದು ಹಾಗೂ ಅಪರ ಜಿಲ್ಲಾಧಿಕಾರಿ ಅವರು ಜಿಲ್ಲಾ ಜನಗಣತಿ ಅಧಿಕಾರಿಗಳಾಗಿದ್ದಾರೆ. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು, ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಮಾಹಿತಿ ತಂತ್ರಜ್ಞಾನ ಅಧಿಕಾರಿಗಳು ಅಪರ ಜಿಲ್ಲಾ ಜನಗಣತಿ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಉಪ ವಿಭಾಗಾಧಿಕಾರಿಯವರು ಉಪ ವಿಭಾಗದ ಜನಗಣತಿ ಅಧಿಕಾರಿಗಳಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 7 ಜನಗಣತಿ ಚಾರ್ಜ್ ಅಧಿಕಾರಿಗಳನ್ನು ಈಗಾಗಲೇ ನೇಮಕ ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳಿಗೆ ತಹಶೀಲ್ದಾರರು ಚಾರ್ಜ್ ಅಧಿಕಾರಿಗಳಾಗಿದ್ದಾರೆ. ನಗರ/ಪಟ್ಟಣ ಪ್ರದೇಶಗಳಿಗೆ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಚಾರ್ಜ್ ಅಧಿಕಾರಿಗಳಾಗಿದ್ದಾರೆ.
2011ರ ಜನಗಣತಿಯಂತೆ ಜಿಲ್ಲೆಯಲ್ಲಿ ಒಟ್ಟು 1163 ಗಣತಿ ಬ್ಲಾಕ್‍ಗಳಿದ್ದು, ಪ್ರಸ್ತುತ ಜನಗಣತಿಯಲ್ಲಿ ಅವುಗಳ ಸಂಖ್ಯೆ ಹೆಚ್ಚಾಗುವ ಸಾದ್ಯತೆ ಇದೆ. ಜಿಲ್ಲೆಯಲ್ಲಿ 1020 ಗಣತಿದಾರರನ್ನು ಮತ್ತು 169 ಮೇಲ್ವಿಚಾರಣಾಧಿಕಾರಿಗಳನ್ನು ನೇಮಕಮಾಡಲಾಗುತ್ತದೆ. ಶಾಲಾ ಶಿಕ್ಷಕರನ್ನು ಜನಗಣತಿ ಕಾರ್ಯಕ್ಕೆ ನೇಮಿಸಿಕೊಳ್ಳಲಾಗುವುದು. ಗಣತಿದಾರರ ಮತ್ತು ಮೇಲ್ವಿಚಾರಕರ ನೇಮಕಾತಿ ಪ್ರಕ್ರಿಯೆಯನ್ನು ಜನವರಿ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದ್ದಾರೆ. 
ಪ್ರಸ್ತುತ ಮನೆಪಟ್ಟಿ ಕಾರ್ಯಾಚರಣೆ ಮತ್ತು ಜನಗಣತಿಯನ್ನು ಡಿಜಿಟಲ್ ಮೋಡ್ ಮೂಲಕ ಗಣತಿಗಾಗಿಯೇ ಸಿದ್ಧಪಡಿಸಲಾದ ಮೊಬೈಲ್ ತಂತ್ರಾಂಶದ ಮೂಲಕ ನಡೆಸಲಾಗುವುದು. ಪ್ರಾಥಮಿಕ ಶಾಲಾ ಶಿಕ್ಷಕರನ್ನು ಗಣತಿದಾರರನ್ನಾಗಿ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ ಮಾಡಿಕೊಳ್ಳಲು ಚಾರ್ಜ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.
2020ರ ಏಪ್ರಿಲ್ 15 ರಿಂದ ಮೇ 29ರ ವರೆಗೆ ಮನೆ ಪಟ್ಟಿ ಕಾರ್ಯಾಚರಣೆಯನ್ನು ಹಾಗೂ 2021ರ ಫೆಬ್ರವರಿ 9 ರಿಂದ 28ರ ವರಗೆ ಜನಗಣತಿ ಕಾರ್ಯ ನಡೆಸಲಾಗುವುದು. ಮನೆಪಟ್ಟಿ ಕಾರ್ಯಾಚರಣೆಗಾಗಿ ಪ್ರತಿ ಗಣತಿದಾರರಿಗೆ 150-180 ಮನೆಗಳು ಹಾಗೂ ಅಂದಾಜು 650 ರಿಂದ 800 ಜನಸಂಖ್ಯೆ ಬರುವ ರೀತಿಯಲ್ಲಿ ಬ್ಲಾಕ್‍ಗಳ ವಿಂಗಡಣೆ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಿ ಸಿದ್ಧಪಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಫೆಬ್ರವರಿ ಮಾಹೆಯಲ್ಲಿ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ತರಬೇತಿಯನ್ನು ಈಗಾಗಲೇ ವಿವರವಾಗಿ ತರಬೇತಿ ಪಡೆದಿರುವ ಮಾಸ್ಟರ್ ಟ್ರೈನರ್‍ಗಳಿಂದ ನೀಡಲಾಗುವುದು.
ಒಟ್ಟಾರೆ 2021ರ ಜನಗಣತಿ ಅಂಗವಾಗಿ ಪ್ರಸ್ತುತ ನಡೆಸಲಾಗುವ ಮನೆಪಟ್ಟಿ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲಾ ಪೂರ್ವ ಸಿದ್ದತೆಗಳನ್ನು ಸಕಾಲದಲ್ಲಿ ಕೈಗೊಳ್ಳಲು ಹಾಗೂ ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಸಾರ್ವಜನಿಕರು ಎಲ್ಲಾ ಮಾಹಿತಿಗಳನ್ನು ಒದಗಿಸಿ ಜಿಲ್ಲೆಯಲ್ಲಿ ಗಣತಿ ಕಾರ್ಯವು ಯಶಸ್ವಿಯಾಗಿ ಪೂರ್ಣಗೊಳಿಸಲು ಸಹಕಾರ ನೀಡುವಂತೆ ಜಿಲ್ಲಾ ಪ್ರಧಾನ ಜನಗಣತಿ ಅಧಿಕಾರಿಯವರು ಹಾಗೂ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದ್ದಾರೆ.

No comments

Post a Comment