ಮಡಿಕೇರಿ TOC:-ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಜನಾಂಗದವರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಅಬಿsವೃದ್ದಿಗೆ ಇಲಾಖೆಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿವರ ಇಂತಿದೆ.
ವಿದ್ಯಾರ್ಥಿ ನಿಲಯಗಳ ವಿವರ:-ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು-17, ಸೇರ್ಪಡೆ-597, ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು-04, ಸೇರ್ಪಡೆ- 287, ವಸತಿ ಶಾಲೆ-1, ಸೇರ್ಪಡೆ- 54, ಮೊರಾರ್ಜಿ ದೇಸಾಯಿ ವಸತಿ ಶಾಲೆ/ಕಾಲೇಜು-01, ಸೇರ್ಪಡೆ-350, ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ (ಸಹ ಶಿಕ್ಷಣ ಮತ್ತು ಬಾಲಕಿಯರ)-02, ಸೇರ್ಪಡೆ-211 ವಿದ್ಯಾಸಂಸ್ಥೆಗಳು ಕಾರ್ಯನಿರ್ವಹಿಸಿರುತ್ತದೆ. ನಿಲಯಾರ್ಥಿಗಳಿಗೆ ಉಚಿತ ಬೋಧನೆ, ಊಟ, ವಸತಿ, ಸಮವಸ್ತ್ರ, ಲೇಖನಾ ಸಾಮಾಗ್ರಿ ಹಾಗೂ ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ನೀಡಲಾಗುತ್ತಿದೆ.
ಅಂತರ್ ಜಾತಿ ವಿವಾಹವಾದ ದಂಪತಿಗಳಿಗೆ ಧನ ಸಹಾಯ:-ಅಂತರ ಜಾತಿ ವಿವಾಹವಾದ ದಂಪತಿಗಳಲ್ಲಿ ಒಬ್ಬರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಮತ್ತೊಬ್ಬರು ಹಿಂದುಳಿದ ವರ್ಗದ ಜನಾಂಗದವರಾಗಿರಬೇಕು. ಪರಿಶಿಷ್ಷ ಜಾತಿಯ ಹೆಣ್ಣು ಹಿಂದು ಸವರ್ಣೀಯ ಗಂಡನ್ನು ವಿವಾಹವಾದಲ್ಲಿ ಈ ದಂಪತಿಗಳಿಗೆ ರೂ.3 ಲಕ್ಷ ಹಾಗೂ ಇತರೆ ಸವರ್ಣೀಯ ಜಾತಿಯ ಹೆಣ್ಣು ಪರಿಶಿಷ್ಟ ಜಾತಿಯ ಗಂಡನ್ನು ವಿವಾಹವಾದಲ್ಲಿ ರೂ.2,50 ಲಕ್ಷ ಗಳನ್ನು 02 ಕಂತುಗಳಲ್ಲಿ ಆದಾಯದ ಮಿತಿ ರೂ.5 ಲಕ್ಷ ಒಳಗಿರುವ ದಂಪತಿಗಳಿಗೆ ಪ್ರೋತ್ಸಾಹ ಧನವನ್ನು ಮಂಜೂರು ಮಾಡಲಾಗುತ್ತದೆ ಹಾಗೂ ಅಕ್ಟೋಬರ್-2019ರ ಅಂತ್ಯಕ್ಕೆ ರೂ.72 ಲಕ್ಷ ಖರ್ಚು ಭರಿಸಿ 49 ದಂಪತಿಗಳಿಗೆ ಪ್ರೋತ್ಸಾಹ ಧನ ಮಂಜೂರು ಮಾಡಲಾಗಿದೆ.
ಸಮುದಾಯದ ಒಳಗೆ ಅಂತರ್ ಜಾತಿ ವಿವಾಹವಾದಲ್ಲಿ ಪ್ರೋತ್ಸಾಹ ಧನ:-ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕ, ಯುವತಿಯರು ಸಮುದಾಯದ ಒಳಗೆ ಅಂತರ್ ಜಾತಿ ವಿವಾಹವಾದಲ್ಲಿ ಅಂತವರಿಗೆ ರೂ. 2 ಲಕ್ಷ ಪ್ರೋತ್ಸಾಹ ಧನವನ್ನು ಮಂಜೂರು ಮಾಡಲಾಗುತ್ತದೆ. ಈ ಯೋಜನೆಯಡಿ ಪ್ರೋತ್ಸಾಹ ಧನ ಪಡೆಯಲು ದಂಪತಿಗಳ ವಾರ್ಷಿಕ ಆದಾಯವು ರೂ. 2 ಲಕ್ಷಗಳನ್ನು ಮೀರತಕ್ಕದಲ್ಲ.
ಮರು ಮದುವೆಯಾಗುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿಧವೆಯರಿಗೆ ಪ್ರೋತ್ಸಾಹ ಧನ:-ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿಧವೆಯರು ಮರು ವಿವಾಹವಾದಲ್ಲಿ ಅವರಿಗೆ ರೂ. 3 ಲಕ್ಷಗಳ ಪ್ರೋತ್ಸಾಹ ಧನ ನೀಡಲಾಗುವುದು.
ಸರಳ ವಿವಾಹ ಯೋಜನೆಯಡಿ ಆರ್ಥಿಕ ನೆರವು:-ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ದಂಪತಿಗಳಿಗೆ ಸರಳ ವಿವಾಹ ಯೋಜನೆಯಡಿ ರೂ.50 ಸಾವಿರ ಆರ್ಥಿಕ ನೆರವು ಮಂಜೂರು ಮಾಡಲಾಗುತ್ತದೆ. ಸಾಮೂಹಿಕ ವಿವಾಹಗಳಲ್ಲಿ ಕನಿಷ್ಠ 10 ಜೋಡಿಗಳು ಭಾಗವಹಿಸಬಹುದಾಗಿದ್ದು, ವಧುವಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 42 ವರ್ಷಗಳು ಹಾಗೂ ವರನಿಗೆ ಕನಿಷ್ಠ 21 ವರ್ಷದಿಂದ ಗರಿಷ್ಠ 45 ವರ್ಷ ವಯಸ್ಸು ಆಗಿರಬೇಕು. ವಧು ಮತ್ತು ವರನ ಒಟ್ಟಾರೆ ವಾರ್ಷಿಕ ಆದಾಯವು ರೂ.2 ಲಕ್ಷಗಳನ್ನು ಮೀರಿರಬಾರದು.
ದೇವದಾಸಿಯರ ಮಕ್ಕಳ ಮದುವೆಗಾಗಿ ಪ್ರೋತ್ಸಾಹ ಧನ 2018-19ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗುರುತಿಸಲ್ಪಟ್ಟ ದೇವದಾಸಿಯರ ಗಂಡು ಮಕ್ಕಳು ಇತರೆ ಜಾತಿ ಹುಡುಗಿಯನ್ನು ವಿವಾಹವಾದಲ್ಲಿ ರೂ.3 ಲಕ್ಷ ಹಾಗೂ ದೇವದಾಸಿಯರ ಹೆಣ್ಣು ಮಕ್ಕಳು ಇತರೆ ಜಾತಿಯ ಹುಡುಗನನ್ನು ವಿವಾಹವಾದ ಪ್ರಕರಣಗಳಿಗೆ ರೂ.5 ಲಕ್ಷಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ.
ನಗದು ಬಹುಮಾನ:-ಪರಿಶಿಷ್ಠ ಜಾತಿಯ ವಿದ್ಯಾರ್ಥಿಗಳು ಇತರೆ ವಿದ್ಯಾರ್ಥಿಗಳಿಗಿಂತ ವಾರ್ಷಿಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದು ಪ್ರಥಮ ದರ್ಜೆಯಲ್ಲಿ, ಪ್ರಥಮ ಬಾರಿಯಲ್ಲಿ ತೇರ್ಗಡೆ ಪಡೆದಿರುವವರಿಗೆ ದ್ವಿತೀಯ ಪಿಯುಸಿ ಮತ್ತು ಡಿಪ್ಲೋಮಾ ರೂ.20 ಸಾವಿರ, ಡಿಗ್ರಿ, ಬಿಎ, ಬಿಎಸ್‍ಸಿ, ಬಿ.ಕಾಂ. ರೂ.25 ಸಾವಿರ, ಸ್ನಾತಕೋತ್ತರ ಪದವಿ ಎಂ.ಎ, ಎಂ.ಎಸ್.ಸಿ ರೂ. 30 ಸಾವಿರ, ತಾಂತ್ರಿಕ ಪದವಿ, ವೈದ್ಯಕೀಯ ಪದವಿ, ಕೃಷಿ ಮತ್ತು ಪಶು ಸಂಗೋಪನೆ ರೂ,35 ಸಾವಿರ ಪ್ರೋತ್ಸಾಹ ಬಹುಮಾನವನ್ನು ಆನ್‍ಲೈನ್ ಮೂಲಕ ಮಂಜೂರು ಮಾಡಲಾಗುತ್ತದೆ.
ಎಸ್‍ಎಸ್‍ಎಲ್‍ಸಿ ಪ್ರೋತ್ರಾಹ ಧನ:-ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ, ಪ್ರಥಮ ಬಾರಿಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ಶೇ.60 ರಿಂದ ಶೇ. 74.5 ರವರೆಗೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ರೂ.7 ಸಾವಿರ, ಶೇ.75 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ರೂ.15 ಸಾವಿರಗಳನ್ನು ಆನ್‍ಲೈನ್ ಮೂಲಕ ಮಂಜೂರು ಮಾಡಲಾಗುವುದು. 2019-20 ನೇ ಸಾಲಿಗೆ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದು ಪ್ರಥಮ ದರ್ಜೆಯಲ್ಲಿ, ಪ್ರಥಮ ಬಾರಿಯಲ್ಲಿ ತೇರ್ಗಡೆ ಹೊಂದಿದ 303 ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸಿರುತ್ತಾರೆ.
ಕಾನೂನು ಪದವೀಧರರಿಗೆ ಶಿಷ್ಯವೇತನ:-ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ ನ್ಯಾಯಾಂಗ ಆಡಳಿತದಲ್ಲಿ ಹೆಚ್ಚು ಜ್ಞಾನಗಳಿಸಲು ನೆರವಾಗುವಂತೆ ತರಬೇತಿ ನೀಡಲಾಗುತ್ತದೆ. ಈ ತರಬೇತಿಯ ಅವಧಿಯು 02 ವರ್ಷದ್ದಾಗಿದ್ದು, ಈ ಅವಧಿಯಲ್ಲಿ ತಿಂಗಳಿಗೆ ರೂ. 10 ಸಾವಿರದಂತೆ ಶಿಷ್ಯವೇತನ ನೀಡಲಾಗುವುದು. ಸೆಪ್ಟೆಂಬರ್-2019ರ ಅಂತ್ಯಕ್ಕೆ 1.95 ಲಕ್ಷ ಬಿಡುಗಡೆಯಾಗಿದ್ದು, 1.00 ಲಕ್ಷ ಅನುದಾನ ಖರ್ಚು ಭರಿಸಿ 06 ಮಂದಿ ಕಾನೂನು ಪದವೀಧರರಿಗೆ ಶಿಷ್ಯವೇತನ ಮಂಜೂರು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಭಾರತಿ ಅವರು ತಿಳಿಸಿದ್ದಾರೆ.

No comments
Post a Comment