ಅಣಬೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಿ: ಬಿ.ಎ.ಹರೀಶ್

No comments
        ಮಡಿಕೇರಿ TOC :-ಅಣಬೆಯಂತಹ ಉಪ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗುವಂತಾಗಬೇಕು ಎಂದು ಜಿ.ಪಂ. ಅಧ್ಯಕ್ಷರಾದ ಬಿ.ಎ.ಹರೀಶ್ ಅವರು ಸಲಹೆ ಮಾಡಿದ್ದಾರೆ.
ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ, ಕೃಷಿ ಮತ್ತು ತೋಟಗಾರಿಕಾ ವಿಸ್ತರಣಾ ಶಿಕ್ಷಣ ಘಟಕ ಇವರ ಸಹಯೋಗದೊಂದಿಗೆ ತಾಲೂಕು ಪಂಚಾಯಿತಿ ಯೋಜನೆಯಲ್ಲಿ ರೈತ /ರೈತ ಮಹಿಳೆಯರಿಗೆ ಅಣಬೆ ಕೃಷಿ ಬೇಸಾಯದ ಬಗ್ಗೆ ನಗರದ ಕೃಷಿ ವಿಸ್ತರಣಾ ಶಿಕ್ಷಣ ಘಟಕದಲ್ಲಿ ಶುಕ್ರವಾರ ನಡೆದ ಅಣಬೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 
ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಿಂದ ವ್ಯಾಪಕ ಮಳೆಯಾಗುತ್ತಿರುವುದರಿಂದ ಕಾಫಿ ಪಸಲು ಕೈಗೆ ಸಿಗುತ್ತಿಲ್ಲ. ಆದ್ದರಿಂದ ಕಾಳು ಮೆಣಸು, ಕಿತ್ತಳೆ, ಬಾಳೆ, ಅಣಬೆ, ಹೀಗೆ ಉಪ ಕೃಷಿ ಕಸುಬುಗಳನ್ನು ಕೈಗೊಂಡಾಗ ಆರ್ಥಿಕವಾಗಿ ಕೈ ಹಿಡಿಯಲಿವೆ ಎಂದು ಜಿ.ಪಂ. ಅಧ್ಯಕ್ಷರು ಹೇಳಿದರು. 
  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತೆಕ್ಕಡೆ ಶೋಭಾ ಮೋಹನ್ ಅವರು, ರೈತರು ಬೇಸಾಯದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿಯೂ ಸಹ ಕಾಫಿ, ಭತ್ತ, ಅಡಿಕೆ ಬೆಳೆಯನ್ನು ಬೆಳೆಯುವುದು ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯ ಬೆಳೆ ಬೆಳೆಯುವುದು ಒಳ್ಳೆಯದು ಎಂದರು.

ಸರ್ಕಾರದ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳುವಂತಾಗಬೇಕು. ರೈತರು ಮಿಶ್ರ ಬೆಳೆ ಬೆಳೆಯಬೇಕು. ಅಣಬೆ ಬೆಳೆ ಕೂಡ ಇದಕ್ಕೆ ಪೂರಕವಾಗಿದೆ. ನಾನೂ ಸಹ ಅಣಬೆ ಬೆಳೆಯಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು. 
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಕೆ.ಎಸ್.ಚಂದ್ರಶೇಖರ್ ಅವರು ಮಾತನಾಡಿ ಅಣಬೆ ಪೌಷ್ಟಿಕ ಆಹಾರವಾಗಿದ್ದು, ಪ್ರೋಟೀನ್ ಅಂಶ ಹೆಚ್ಚಾಗಿದೆ. ಆದ್ದರಿಂದ ಅಣಬೆಯನ್ನು ಉಪ ಕಸುಬು ಆಗಿ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ಅವರು ಹೇಳಿದರು. 
ಅಣಬೆ ಬೆಳೆಯುವ ಬಗ್ಗೆ ತರಬೇತಿ ಪಡೆದು ವಾಣಿಜ್ಯ ಬೆಳೆಯಾಗಿ ಅಣಬೆಯನ್ನು ಬೆಳೆಯುವಂತಾಗಬೇಕು ಎಂದು ಅವರು ಸಲಹೆ ಮಾಡಿದರು. 
ಅಣಬೆ ಬೇಸಾಯಕ್ಕೆ 1.50 ಲಕ್ಷ ರೂ.ವರೆಗೆ ಸಹಾಯಧನ ಕಲ್ಪಿಸಲಾಗುತ್ತದೆ. ಈ ಅವಕಾಶವನ್ನು ಸದುಪಯೋಗಪಡಿಸಿ ಕೊಳ್ಳುವಂತಾಗಬೇಕು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರು ತಿಳಿಸಿದರು.
ತೋಟಗಾರಿಕಾ ಬೆಳೆಗಾರರು ಉಪ ಬೆಳೆಗೆ ಹೆಚ್ಚು ಒತ್ತು ನೀಡಬೇಕು. ಕೃಷಿ ಯಾಂತ್ರೀಕರಣಕ್ಕೆ ಸಹಾಯಧನವಿದ್ದು, ಇವುಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು.                 
ಬೇಸಾಯ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾದ ಡಾ.ಬಸವಲಿಂಗಯ್ಯ ಅವರು ಮಾತನಾಡಿ ಭತ್ತ ಬೇಸಾಯ, ಜೇನು ಕೃಷಿ ಜೊತೆಗೆ ಅಣಬೆ ಬೇಸಾಯದಲ್ಲಿ ಕೃಷಿಕರು ತೊಡಗಿಸಿಕೊಳ್ಳುವಂತಾಗಬೇಕು ಎಂದು ಅವರು ಸಲಹೆ ಮಾಡಿದರು. 
ತಾ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮುದ್ದಂಡ ರಾಯ್ ತಮ್ಮಯ್ಯ, ಮಡಿಕೇರಿ ತಾಲ್ಲೂಕು ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷರಾದ ಅಯ್ಯಲಪಂಡ ಕವಿತ ಭೀಮಯ್ಯ, ತೋಟಗಾರಿಕಾ ಸಹಾಯಕ ಪ್ರಾಧ್ಯಾಪಕರಾದ ಡಾ.ವಿದ್ಯಾಶ್ರೀ, ಹಾರ್ಟಿಕ್ಲಿನಿಕ್ ವಿಷಯ ತಜ್ಞರಾದ ಡಾ.ಬಿ.ಸಿ.ನಾಚಪ್ಪ, ಇತರರು ಇದ್ದರು. ಸಹಾಯಕ ತೋಟಗಾರಿಕ ಅಧಿಕಾರಿ ಎಸ್.ವಿ.ರಾಮದಾಸ್ ಅವರು ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

No comments

Post a Comment