TOC ಮಡಿಕೇರಿ :-ಜಿಲ್ಲೆಯ ಅರಣ್ಯ ಇಲಾಖೆ ವಿಷಯಗಳ ಬಗ್ಗೆ ಅರಣ್ಯ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಿರಲಾಲ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಉಪಸ್ಥಿತಿಯಲ್ಲಿ ಸಮನ್ವಯ ಸಭೆ ನಡೆಯಿತು.
ನಗರದ ಅರಣ್ಯ ಭವನದಲ್ಲಿ ಶನಿವಾರ ನಡೆದ ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಪ್ರಮುಖವಾಗಿ ವಿರಾಜಪೇಟೆಯಿಂದ ಕೇರಳ ಸಂಪರ್ಕ ಕಲ್ಪಿಸುವ ಮಾಕುಟ್ಟ ರಸ್ತೆಯು ಮಳೆಗಾಲದ ಸಂದರ್ಭದಲ್ಲಿ ಬರೆಕುಸಿತ ಉಂಟಾಗಿ ಸಾರಿಗೆ ಸಂಚಾರಕ್ಕೆ ವ್ಯತ್ಯಯ ಉಂಟಾಗುತ್ತಿದೆ. ಆದ್ದರಿಂದ ರಸ್ತೆ ಸರಿಪಡಿಸಲು ಅಗತ್ಯ ಸಹಕಾರ ನೀಡಬೇಕಿದೆ ಎಂದರು.
ರಾಜ್ಯದ ಕೇರಳ ಗಡಿ ಭಾಗ ಸಂಪರ್ಕ ಕಲ್ಪಿಸುವ ಪೆರುಂಬಾಡಿ ಬಳಿ ಸೇತುವೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಈ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿದೆ. ಈ ಸೇತುವೆ ನಿರ್ಮಾಣ ಮಾಡುವುದರಿಂದ ಕಣ್ಣೂರು ಅಂತರರಾಷ್ಟ್ರೀಯ ವಿಮಾನಕ್ಕೆ ತೆರಳಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಅವರು ಗಮನ ಸೆಳೆದರು.
ಧಾರಾಕಾರ ಮಳೆಯಿಂದಾಗಿ ಪ್ರವಾಹ ಸಂದರ್ಭದಲ್ಲಿ ಕೊಚ್ಚಿ ಹೋಗಿ ರಸ್ತೆ ಹಾಗೂ ಸೇತುವೆ ಬಳಿ ಮರಗಳು ಬಿದ್ದಿರುತ್ತವೆ. ಈ ಮರಗಳನ್ನು ತೆರವುಗೊಳಿಸಬೇಕಿದೆ. ಆದರೆ ಈ ಕಾರ್ಯವಾಗುತ್ತಿಲ್ಲ ಎಂದು ಅನೀಸ್ ಕಣ್ಮಣಿ ಜಾಯ್ ಅವರು ಹೇಳಿದರು.
ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಮಾಂದಲಪಟ್ಟಿ ರಸ್ತೆ ಸರಿಪಡಿಸಬೇಕಿದೆ. ಆದರೆ ಅರಣ್ಯ ಇಲಾಖೆಯವರು ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲು ಬಿಡುತ್ತಿಲ್ಲ. ಇದನ್ನು ಸರಿಪಡಿಸದಿದ್ದಲ್ಲಿ ಸಮಸ್ಯೆಗಳು ತಲೆದೋರಲಿವೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರ ಗಮನಕ್ಕೆ ತಂದರು.
ನಿಸರ್ಗಧಾಮದಲ್ಲಿ ತೂಗು ಸೇತುವೆ ಸರಿಪಡಿಸಬೇಕಿದ್ದು, ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ಗಮನ ಸೆಳೆದರು.
ಹಾಗೆಯೇ ಜಿಲ್ಲೆಯ ನಾಗರಹೊಳೆ ವ್ಯಾಪ್ತಿ ಸೇರಿದಂತೆ ಜಿಲ್ಲೆಯ ಎಲ್ಲಾ ಹಾಡಿ ಜನರಿಗೆ ಈಗಾಗಲೇ ಅರಣ್ಯ ಹಕ್ಕುಪತ್ರ ನೀಡಿರುವ ಆದಿವಾಸಿ ಕುಟುಂಬಗಳಿಗೆ ಮನೆ, ವಿದ್ಯುತ್ ಸಂಪರ್ಕ, ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಯಾವುದೇ ರೀತಿಯಲ್ಲಿ ತಗಾದೆ ತೆಗೆಯಬಾರದು ಎಂದರು.
ಹಕ್ಕು ಪತ್ರ ನೀಡಿರುವವರಿಗೆ ಈಗಾಗಲೇ ಮನೆ ನಿರ್ಮಾಣಕ್ಕೆ ಆದೇಶ ಪತ್ರ ನೀಡಲಾಗಿದೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಅವರು ವಿಷಯ ಪ್ರಸ್ತಾಪಿಸಿದರು.
ಈ ವಿಚಾರಗಳನ್ನು ಆಲಿಸಿದ ಕೊಡಗು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಿರಲಾಲ್ ಅವರು ಮಾಕುಟ್ಟ ರಸ್ತೆ ಸರಿಪಡಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್‍ಗಳು ಆಗಮಿಸುವ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಅಗತ್ಯ ಸಹಕರಿಸುವಂತೆ ನಿರ್ದೇಶನ ನೀಡಿದರು.
ಪ್ರಕೃತಿ ವಿಕೋಪದಿಂದಾಗಿ ರಸ್ತೆ ಹಾಗೂ ಸೇತುವೆ ಬಳಿ ಬಿದ್ದಿರುವ ಮರಗಳನ್ನು ಅರಣ್ಯ ಇಲಾಖೆಯಿಂದ ತೆರವುಗೊಳಿಸಲಾಗುವುದು. ಈ ಕಾರ್ಯವನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ತಿಳಿಸಿದರು.
ಮಾಂದಲಪಟ್ಟಿಯಲ್ಲಿ ರಸ್ತೆ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಎಲ್ಲಾ ರೀತಿಯ ಸಹಕಾರ ನೀಡಲಿದ್ದಾರೆ ಎಂದರು.
ಅರಣ್ಯ ಹಕ್ಕುಪತ್ರ ನೀಡಿರುವ ಹಾಡಿ ಕುಟುಂಬಗಳಿಗೆ ಮನೆ ನಿರ್ಮಾಣ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಅರಣ್ಯ ಇಲಾಖೆಯಿಂದ ಯಾವುದೇ ರೀತಿಯ ಆಕ್ಷೇಪ ಇರುವುದಿಲ್ಲ ಎಂದು ಹಿರಲಾಲ್ ಅವರು ತಿಳಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಕಾರ್ಯ ನಿರ್ವಹಿಸಬೇಕು. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುವುದು. ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸ್ಪಂದಿಸದಿದ್ದರೆ ನನ್ನ ಗಮನಕ್ಕೆ ತರುವಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಹೇಳಿದರು.
ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ನಾರಾಯಣ ಸ್ವಾಮಿ ಅವರು ಪ್ರವಾಹದಿಂದ ರಸ್ತೆ ಹಾಗೂ ಸೇತುವೆ ಬಳಿ ಬಿದ್ದಿರುವ ಮರಗಳನ್ನು ಸ್ಥಳದಲ್ಲಿಯೇ ಹರಾಜು ಮಾಡಿದರೆ ಹೇಗೆ ಎಂದು ಅವರು ಸಲಹೆ ಮಾಡಿದರು.
ಅರಣ್ಯ ಇಲಾಖೆ ಅಧಿಕಾರಿಗಳು ದೂರು ಬರದಂತೆ ನೋಡಿಕೊಳ್ಳಬೇಕು. ಸಮಯೋಚಿತವಾಗಿ ಕರ್ತವ್ಯ ನಿರ್ವಹಿಸಬೇಕು. ಅದನ್ನು ಬಿಟ್ಟು ಕಿರಿಕಿರಿ ಮಾಡಿಕೊಳ್ಳುವುದು ಸರಿಯಲ್ಲ. ಆ ನಿಟ್ಟಿನಲ್ಲಿ ಜನರಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸುವಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಸಲಹೆ ಮಾಡಿದರು.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ನಾರಾಯಣ ಸ್ವಾಮಿ ಅವರು ಮಾತನಾಡಿ ಹಾಡಿ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದರ ಜೊತೆಗೆ ಕಾಡು ಪ್ರಾಣಿಗಳಿಂದ ರಕ್ಷಣೆ ನೀಡುವ ನಿಟ್ಟಿನಲ್ಲಿ ಗಮನಹರಿಸಬೇಕಿದೆ ಎಂದು ಅವರು ಸಲಹೆ ಮಾಡಿದರು.
ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ಅವರು ನಾಗರಹೊಳೆಯ ಗಿರಿಜನ ಹಾಡಿ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡಬೇಕು. ಮನೆ ನಿರ್ಮಾಣ, ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಿರಲಾಲ್ ಅವರು ಅರಣ್ಯ ಹಕ್ಕು ಕಾಯ್ದೆಯಡಿ ಮರು ಪರಿಶೀಲನೆಗೆ ವಾಪಸ್ಸು ಕಳುಹಿಸಿರುವ ಅರ್ಜಿಗಳನ್ನು ಮತ್ತೊಮ್ಮೆ ಕೂಲಂಕುಷವಾಗಿ ಪರಿಶೀಲಿಸಿ ಕಾನೂನು ಪ್ರಕಾರ ನ್ಯಾಯ ಒದಗಿಸುವಂತೆ ಅವರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ಈಗಾಗಲೇ ಅರಣ್ಯ ಹಕ್ಕುಪತ್ರ ನೀಡಿರುವುದಕ್ಕೆ ಆರ್‍ಟಿಸಿ ನೀಡಬೇಕಿದೆ. ಆ ನಿಟ್ಟಿನಲ್ಲಿ ಸರ್ವೇ ಕಾರ್ಯ ಕೈಗೊಳ್ಳಲಾಗುವುದು. ನಾಗರಹೊಳೆ ವ್ಯಾಪ್ತಿಯ ಸಮಸ್ಯೆಗಳಿರುವ ಹಾಡಿ ಕುಟುಂಬಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕಿದ್ದು, ಯಾವುದೇ ರೀತಿ ತೊಂದರೆ ನೀಡಬಾರದು ಎಂದರು.
ಜಿಲ್ಲೆಯಲ್ಲಿ ಅರಣ್ಯ ಹಕ್ಕುಪತ್ರ ನೀಡಿರುವ ಕುಟುಂಬಗಳಿಗೆ ಮನೆ ನಿರ್ಮಾಣ ಸೇರಿದಂತೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ಮೂರು ತಿಂಗಳಿಗೊಮ್ಮೆ ಸಮನ್ವಯ ಸಭೆ ನಡೆದು ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ ಎಂದರು.
ಹಿರಲಾಲ್ ಅವರು ಮಾತನಾಡಿ ಶನಿವಾರ ನಡೆದ ಸಭೆಯ ನಿರ್ಧಾರಗಳು ಒಂದು ತಿಂಗಳಲ್ಲಿ ಕಾರ್ಯ ರೂಪಕ್ಕೆ ಬರಬೇಕು. ಆ ನಿಟ್ಟಿನಲ್ಲಿ ಎಲ್ಲಾ ಹಂತದ ಅಧಿಕಾರಿಗಳು ತ್ವರಿತ ಕ್ರಮಕೈಗೊಳ್ಳುವಂತೆ ಅವರು ಸೂಚಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಭಾಕರನ್, ಶಿಂಧೆ, ಕಾರ್ಯಪ್ಪ, ಶಿವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸೀಮಾ, ದಯಾನಂದ, ರೋಷನ್, ಆಂಥೋನಿ, ಸೆಸ್ಕ್ ಇಇ ಸೋಮಶೇಖರ, ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ತಮ್ಮಯ್ಯ, ಲೋಕೋಪಯೋಗಿ ಇಲಾಖೆಯ ಎಇಇ ಸುರೇಶ್, ಶಿವರಾಮು, ವೇಣುಗೋಪಾಲ್, ತಾ.ಪಂ.ಇಒಗಳಾದ ಲಕ್ಷ್ಮಿ, ಸುನಿಲ್ ಕುಮಾರ್, ತಾಲ್ಲೂಕು ಸಮಾಜ ಕಲ್ಯಾಣಾದಿಕಾರಿ ಶೇಖರ್ ಇತರರು ಇದ್ದರು.

No comments
Post a Comment