ಗೃಹ ರಕ್ಷಕರ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ


TOCಮಡಿಕೇರಿ :-ಜಿಲ್ಲಾ ಮಟ್ಟದ ಗೃಹ ರಕ್ಷಕರ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭವು ಶುಕ್ರವಾರ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ನಡೆಯಿತು. ಸಮಾರೋಪದ ಅಂತಿಮ ಸುತ್ತಿನಲ್ಲಿ ಹಗ್ಗ ಜಗ್ಗಾಟ ಮತ್ತು ಓಟ ಸ್ಪರ್ಧೆ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರು ಕ್ರೀಡಾಕೂಟದ ಉತ್ಸವದಂತೆ ವೃತ್ತಿಯಲ್ಲಿಯೂ ಲವಲವಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.

ವೃತ್ತಿಯಲ್ಲಿ ದಕ್ಷತೆ ಹೆಚ್ಚಿಸಿಕೊಂಡು ಶಿಸ್ತಿನಿಂದ ಕಾರ್ಯನಿರ್ವಹಿಸಬೇಕು. ಸೇವಾ ಮನೋಭಾವ ಇರಬೇಕು ಎಂದರು. ಗೃಹರಕ್ಷಕ ದಳದ ಸಮವಸ್ತ್ರಕ್ಕೆ ತನ್ನದೇ ಆದ ಗೌರವವಿದ್ದು, ಅದನ್ನು ಕಾಪಾಡಿಕೊಂಡು ಹೋಗಬೇಕು. ವೃತ್ತಿಯಲ್ಲಿ ಯಶಸ್ಸಿನ ಜೊತೆಗೆ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಟರಾದ ಬಿ.ಪಿ.ದಿನೇಶ್ ಕುಮಾರ್ ಅವರು ಮಾತನಾಡಿ ಸೋಮವಾರಪೇಟೆ ಮತ್ತು ಇತರೆ ಕಡೆಗಳಲ್ಲಿ ಗೃಹ ರಕ್ಷಕ ದಳಕ್ಕೆ ಕಚೇರಿ ಅಗತ್ಯವಿದ್ದು, ಅಗತ್ಯ ಸಹಕಾರಕ್ಕೆ ಉಪ ವಿಭಾಗಾಧಿಕಾರಿಯವರಲ್ಲಿ ಮನವಿ ಮಾಡಿದರು.
ಗೃಹ ರಕ್ಷಕ ದಳದವರು ಪೊಲೀಸ್ ಇಲಾಖೆಯಲ್ಲಿ ಸುಮಾರು 100 ಕ್ಕೂ ಹೆಚ್ಚು ಜನರು ಶ್ರದ್ಧೆ ಹಾಗೂ ಶಿಸ್ತಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ರೀಡಾ ಚಟುವಟಿಕೆಗಳಲ್ಲಿ ಲವಲವಿಕೆಯಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಆ ನಿಟ್ಟಿನಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಅವರು ಹೇಳಿದರು.
ಡಿಎಆರ್ ವಿಭಾಗದ ಪೊಲೀಸ್ ನಿರೀಕ್ಷಕರಾದ ಎಸ್.ರಾಚಯ್ಯ ಅವರು ಮಾತನಾಡಿ ಗೃಹರಕ್ಷಕ ದಳದವರು ಒಂದೆಡೆ ಸೇರಲು ಕ್ರೀಡಾಕೂಟ ಸಹಕಾರಿಯಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪೊಲೀಸ್ ನಿರೀಕ್ಷಕರಾದ ದಿವಾಕರ ಅವರು ಮಾತನಾಡಿ ಕ್ರೀಡಾಕೂಟದಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕ್ರೀಯಾಶೀಲತೆಗೆ ಕ್ರೀಡೆ ಸಹಕಾರಿಯಾಗಿದೆ ಎಂದು ಅವರು ಹೇಳಿದರು.
ತೀರ್ಪುಗಾರರಾದ ಹರೀಶ್ ಸರಳಾಯ, ಕೃಷ್ಣ, ಲೋಕೇಶ್ ಇತರರು ಇದ್ದರು.