ಮಾಂದಾಲ್ಪಟ್ಟಿ: ಹಳದಿ ಬಣ್ಣದ ನೋಂದಣಿ ಫಲಕ ವಾಹನಗಳ ಸಂಚಾರಕ್ಕೆ ಅವಕಾಶ

      TOCಮಡಿಕೇರಿ :--ತಾಲ್ಲೂಕಿನ ಪ್ರವಾಸಿ ತಾಣ ಮಾಂದಾಲ್ಪಟ್ಟಿಗೆ ಹಳದಿ ಬಣ್ಣದ ನೋಂದಣಿ ಫಲಕ (ಯಲ್ಲೊ ಬೋರ್ಡ್) ಹೊಂದಿರುವ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಮಾಡಲು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. 
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಂದಲ್ಪಟ್ಟಿಗೆ ತೆರಳುವ ವಾಹನಗಳ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
      ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸಮಿತಿ ಸದಸ್ಯರಿಂದ ಮಾಹಿತಿ ಪಡೆದು ಮಾತನಾಡಿ ಹಳದಿ ಬಣ್ಣದ ನಂಬರಿನ ಫಲಕ ವಾಹಗಳಿಗೆ ಮಾತ್ರ ಮಾಂದಾಲ್ಪಟ್ಟಿ ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಸಮಿತಿ ನೀಡುವ ನಿಬಂಧನೆಗಳನ್ನು ಚಾಲಕರು ಪಾಲಿಸಬೇಕು ಎಂದು ನಿರ್ದೇಶನ ನೀಡಿದರು.   
     ಪ್ರವಾಸಿಗರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.
   ಮಾಂದಾಲ್ಪಟ್ಟಿಗೆ ತೆರಳುವ ಹಳದಿ ಬಣ್ಣದ ನೋಂದಣಿ ಫಲಕ ವಾಹನಗಳ ಸಂಬಂಧ ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆಯಲ್ಲಿ ಗುರುತಿನ ಚೀಟಿ ಪಡೆಯುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. 
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ಮಾಂದಲ್ಪಟ್ಟಿಗೆ ತೆರಳುವ ರಸ್ತೆ ಮಾರ್ಗ ಸ್ಪೀಡ್ ಬ್ರೇಕರ್ ಹಾಗೂ ಸಿಸಿಟಿವಿ ಅಳವಡಿಸುವ ಸಂಬಂಧ ಪಂಚಾಯತ್ ರಾಜ್, ಪೊಲೀಸ್ ಇಲಾಖೆ ಹಾಗೂ ಎಂಜಿನಿಯರ್‍ಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸಲಹೆ ಮಾಡಿದರು.
    ವಾರಾಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮಾಂದಾಲ್ಪಟ್ಟಿಗೆ ಭೇಟಿ ನೀಡುವುದರಿಂದ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಮೋಟಾರು ವಾಹನ ನಿರೀಕ್ಷಕರನ್ನು ನಿಯೋಜಿಸಬೇಕು ಎಂದರು.
     ಪಾನಮತ್ತರಾಗಿ ವಾಹನ ಚಲಾಯಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಪಾನಮತ್ತರಾಗಿ ವಾಹನ ಚಲಾಯಿಸುವ ಚಾಲಕರ ಪರವಾನಗಿಯನ್ನು ರದ್ದುಪಡಿಸಲು ಕ್ರಮವಹಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಎಚ್ಚರಿಕೆ ನೀಡಿದರು.
ಮಾಂದಾಲ್ಪಟ್ಟಿ ಬಳಿ ಅರಣ್ಯ ಇಲಾಖೆಯವರು ಅಳಡಿಸಿರುವ ಗೇಟ್‍ನಿಂದ ಒಳ ಪ್ರವೇಶಿಸುವ ವಾಹನಗಳಿಗೆ 50 ರೂ ಮತ್ತು ಒಬ್ಬ ಪ್ರವಾಸಿಗರಿಗೆ 25 ರೂ ಪಡೆಯಲಾಗುವುದು ಹಾಗೂ ಗೇಟ್ ಬಳಿ ವಾಹನ ನಿಲುಗಡೆ ಮಾಡಿದ್ದಲ್ಲಿ ಪಂಚಾಯತ್ ರಾಜ್ ಇಲಾಖೆಯವರು 4 ಚಕ್ರದ ವಾಹನಗಳಿಗೆ 25 ರೂ ಮತ್ತು ದ್ವಿಚಕ್ರದ ವಾಹನಗಳಿಗೆ 15 ರೂ ಶುಲ್ಕ ಪಡೆಯಲಾಗುವುದು ಎಂದು ಸಮಿತಿ ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್ ಹಾಗೂ ತಾ.ಪಂ.ಇಒ ಲಕ್ಷ್ಮಿ ಅವರು ತಿಳಿಸಿದರು. 
ಅರಣ್ಯ ಅಥವಾ ಪಂಚಾಯತ್ ರಾಜ್ ಯಾವುದರೂ ಒಂದು ಇಲಾಖೆಯವರು ಮಾತ್ರ ವಾಹನ ನಿಲುಗಡೆ ಶುಲ್ಕ ಪಡೆಯಲಾಗುತ್ತದೆ ಎಂದು ಎಂದು ಅವರು ಮಾಹಿತಿ ನೀಡಿದರು. 
    ಡಿವೈಎಸ್‍ಪಿ ದಿನೇಶ್ ಕುಮಾರ್ ಅವರು ಮಾಂದಾಲ್ಪಟ್ಟಿಗೆ ತೆರಳುವ ವಾಹನಗಳು ಮಡಿಕೇರಿ ಮತ್ತು ಗಾಳಿಬೀಡು ಗ್ರಾ.ಪಂ.ಕಚೇರಿ ಬಳಿ ನಿಲುಗಡೆ ಮಾಡಬಹುದಾಗಿದೆ ಎಂದರು. 
    ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿ ಪಿ.ಚಂದನ್ ಅವರು ಮಾತನಾಡಿ ಅಗ್ನಿಶಾಮಕ ಇಲಾಖೆಯಿಂದ ವಾಹನ ಸುಸ್ಥಿತಿ ದೃಢೀಕರಿಸುವ ‘ಕಿರು ಅಗ್ನಿನಂದಕ’ವನ್ನು ವಾಹನಗಳಿಗೆ ಅಳವಡಿಸಿಕೊಳ್ಳುವಂತಾಗಬೇಕು ಎಂದು ಅವರು ಸಲಹೆ ಮಾಡಿದರು. 
     ಸಮಿತಿ ಸದಸ್ಯರಾದ ಧನಂಜಯ ಹಾಗೂ ಥಾಮಸ್ ಅವರು ವಾಹನ ಚಾಲಕರ ಅಹವಾಲು ಮತ್ತಿತರ ಸಂಬಂಧ ಸಮಿತಿ ಸಭೆಯಲ್ಲಿ ಮಾಹಿತಿ ನೀಡಿದರು. 
     ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್ ಶಿರಾಲಿ, ವ್ಯವಸ್ಥಾಪಕ ಶಿವಣ್ಣ, ತಾ.ಪಂ.ಇಒ ಲಕ್ಷ್ಮಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಧನಂಜಯ, ಪೊಲೀಸ್ ಇನ್ಸ್‍ಪೆಕ್ಟರ್ ಚಂದ್ರಶೇಖರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ, ಪಿಡಿಒಗಳಾದ ಶಶಿಕಲಾ(ಗಾಳಿಬೀಡು) ಮತ್ತು ನಂಜುಂಡಸ್ವಾಮಿ (ಕೆ.ನಿಡುಗಣೆ) ಅವರು ಹಲವು ಮಾಹಿತಿ ನೀಡಿದರು.