ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ: ಲಕ್ಷ್ಮಿ 


ಮಡಿಕೇರಿ (TOC ನ್ಯೂಸ್) :-ರಾಜ್ಯ ಬಾಲ ಭವನ ಸೊಸೈಟಿ, ತಾಲ್ಲೂಕು ಬಾಲಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಚಿತ್ರಕಲೆ ಸ್ಪರ್ಧಾ ಕಾರ್ಯಕ್ರಮ ಹಾಗೂ ಕಲಾಶ್ರೀ ಆಯ್ಕೆ ಶಿಬಿರವು ಬುಧವಾರ ನಗರದ ಸ್ತ್ರೀ ಶಕ್ತಿ ಭವನದಲ್ಲಿ ನಡೆಯಿತು. ತಾಲ್ಲೂಕು ಪಂಚಾಯತ್ ಇಒ ಲಕ್ಷ್ಮಿ ಅವರು ಮಾತನಾಡಿ ಕಲಾಶ್ರೀ ಶಿಬಿರ ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಎಲ್ಲರಲ್ಲೂ ಪ್ರತಿಭೆ ಇರುತ್ತದೆ, ಗೆದ್ದರು ಸೋತರು ಎರಡನ್ನು ಕೂಡ ಸಮಚಿತ್ತದಿಂದ ಸ್ವೀಕರಿಸಬೇಕು. ಗೆದ್ದಾಗ ಬೀಗದೆ ಸೋತಾಗ ಕುಗ್ಗದೆ ಎರಡನ್ನು ಸಮನಾಗಿ ಸ್ವೀಕರಿಸಿದಾಗ ಮಾತ್ರ ಜೀವನದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. 

 ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಂಧತಿ ಅವರು ಕಲಾಶ್ರೀ ಶಿಬಿರ ಎಂಬುವುದು ಪ್ರತಿಭಾನ್ವೇಷಣೆ ಕಾರ್ಯಕ್ರಮ. ಇದರಲ್ಲಿ ಸೃಜನಾತ್ಮಕ ಪ್ರದರ್ಶನ ಕಲೆ, ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಕರ್ನಾಟಕ ಹಾಗೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತ, ಯಕ್ಷಗಾನ, ಯಕ್ಷಿಣಿ ಪ್ರದರ್ಶನ, ಸುಗಮ ಸಂಗೀತ, ಏಕಪಾತ್ರಾಭಿನಯ, ಯೋಗ, ನೃತ್ಯ, ಮ್ಯಾಜಿಕ್ ಯಾವುದಾದರೊಂದು ಕಲೆ, ವಿಜ್ಞಾನದಲ್ಲಿ ನೂತನ ಆವಿಷ್ಕಾರದಲ್ಲಿ ಮಾದರಿ ಪ್ರದರ್ಶನ ಹಾಗೂ ವಿವರಣೆ ಮತ್ತು ಪ್ರಶ್ನೆಗಳಿಗೆ ಉತ್ತರಿಸುವುದು. ಇದರಲ್ಲಿ ಆಯ್ಕೆಯಾದವರು ಜಿಲ್ಲಾಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ಹೇಳಿದರು. 

 ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅವರು ಮಾತನಾಡಿ ವಿದ್ಯಾರ್ಥಿಗಳು ಶೈಕ್ಷಣಿಕ ಕ್ಷೇತ್ರದ ಜೊತೆಗೆ ಇತರೆ ಪಠ್ಯೇತರ ಚಟುವಟಿಗಳಲ್ಲೂ ಭಾಗವಹಿಸಬೇಕು. ತಾಲೂಕು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗೆಲುವು ಸಾಧಿಸುವಂತಾಗಬೇಕು. ವಿಶೇಷವಾದ ಆಸಕ್ತಿ ಇರುವ ಕ್ಷೇತ್ರವನ್ನು ಗುರುತಿಸಿ ಆ ಕ್ಷೇತ್ರದಲ್ಲಿ ಮುಂದುವರೆಯಬೇಕು ಎಂದು ಸಲಹೆ ಮಾಡಿದರು. ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಶೋಭಾ, ಸಂಪನ್ಮೂಲ ವ್ಯಕ್ತಿಗಳಾದ ಪ್ರಸನ್ನ, ಭಾರತಿ ರಮೇಶ್, ಭರತ್ ಕೋಡಿ, ಸರಸ್ವತಿ, ಕೋಮಲ, ಶಿಕ್ಷಕರಾದ ಶೀಲಾ, ಸವಿತ ಕಿರ್ತನ್, ಇತರರು ಪಾಲ್ಗೊಂಡಿದ್ದರು.