ಬಿಜೆಪಿ ಸರಕಾರಕ್ಕೆ ಕಲಾಪದ ನೇರ ಪ್ರಸಾರದ ಭಯ ಯಾಕೆ? ಎಸ್.ಡಿ.ಪಿ.ಐ

No comments

ಬೆಂಗಳೂರು: ರಾಜ್ಯ ವಿಧಾನಸಭಾ ಕಲಾಪದ ನೇರ ಚಿತ್ರೀಕರಣಕ್ಕೆ ಖಾಸಗಿ ಸುದ್ದಿ ವಾಹಿನಿಗಳಿಗೆ ನಿರ್ಬಂಧ ವಿಧಿಸಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಅದಕ್ಕೆ ಮೌನ ಸಮ್ಮತಿ ನೀಡಿರುವ ರಾಜ್ಯದ ಬಿಜೆಪಿ ಸರಕಾರ ಜನತೆಗೆ ದ್ರೋಹ ಬಗೆದಿದೆ ಅಲ್ಲದೆ ಪತ್ರಿಕಾ ಸ್ವಾತಂತ್ರ್ಯವನ್ನು ಕಟ್ಟಿ ಹಾಕಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ- ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ. ಈವರೆಗೆ ವಿಧಾನಸಭೆಯ ಕಲಾಪಗಳನ್ನು ನೇರವಾಗಿ ಚಿತ್ರೀಕರಿಸಿ ಜನತೆಗೆ ಪ್ರಸಾರ ಮಾಡುವ ಕ್ರಮವಿತ್ತು. ಇದರಿಂದ ವಿಧಾನಸಭೆಯಲ್ಲಿ ಎನು ನಡೆಯುತ್ತಿದೆ ಎಂಬುವುದರ ಸ್ಪಷ್ಟ ಚಿತ್ರಣ ಜನತೆಗೆ ಸ್ಪಷ್ಟವಾಗಿ ಲಭಿಸುತ್ತಿತ್ತು. ಇದು ಜನತೆಯಲ್ಲಿ ನಾಡಿನ ಅಭಿವೃದ್ಧಿ, ಸಮಸ್ಯೆಗಳ ಪರಿಹಾರ, ಕಾನೂನು ರಚನೆ, ನೀತಿ ನಿಯಮಗಳ ಗಾಂಭೀರ್ಯತೆ ಇತ್ಯಾದಿಗಳ ಬಗ್ಗೆ ಹೆಚ್ಚಿನ ಆಳ ಅರಿವಿನ ಚಿಂತನೆಗೆ ಪೂರಕವಾಗಿತ್ತು. ಆದರೆ ಇದೀಗ ಕಲಾಪದ ನೇರ ಚಿತ್ರೀಕರಣವನ್ನು ನಿರ್ಬಂಧಿಸಿರುವುದರ ಹಿಂದೆ ದುರುದ್ದೇಶ ಅಡಗಿರುವುದು ಸ್ಪಷ್ಟವಾಗುತ್ತಿದೆ.

 ರಾಜ್ಯದಲ್ಲಿ ಭೀಕರ ಪ್ರವಾಹ ಬಂದು ಸಾವಿರಾರು ಕುಟುಂಬಗಳು ಬೀದಿ ಪಾಲಾಗಿದ್ದರೂ ರಾಜ್ಯ, ಕೇಂದ್ರ ಸರಕಾರಗಳು ಗಂಭೀರ ನಿರ್ಲಕ್ಷ್ಯ ತೋರಿರುವುದರ ಬಗ್ಗೆ ರಾಜ್ಯಾದ್ಯಂತ ತೀವ್ರ ಅಸಮಾಧಾನ ಬುಗಿಲೆಬ್ಬಿರುವುದನ್ನು ವಿಧಾನಸಭೆಯ ಕಲಾಪಗಳು ಪ್ರತಿಧ್ವನಿಸಲಿವೆ. ಇದನ್ನು ನೇರ ಪ್ರಸಾರ ಮಾಡಿದರೆ ಬಿಜೆಪಿಗೆ ತೀವ್ರ ಇರುಸು ಮುರುಸು ಉಂಟಾಗಲಿದ್ದು, ಅ ಪಕ್ಷಕ್ಕೆ ಭಾರೀ ಹಿನ್ನಡೆಯಾಗುತ್ತದೆಯಲ್ಲದೆ ಬಿಜೆಪಿಯ ಒಳಗಿನ ಒಳ ಜಗಳ, ಆಡಳಿತ ವೈಫಲ್ಯ, ತನ್ನದೇ ಪಕ್ಷದ ಕೇಂದ್ರ ಸರಕಾರದ ಸಂಪೂರ್ಣ ಅಸಹಕಾರ ಇತ್ಯಾದಿಗಳ ಬಗ್ಗೆಯೂ ಕಲಾಪಗಳಲ್ಲಿ ಪ್ರಶ್ನಿಸಲ್ಪಡುವಾಗ ಅದು ಜನರ ಮುಂದೆ ಪ್ರತ್ಯಕ್ಷಗೊಳ್ಳುವುದನ್ನು ಬಿಜೆಪಿ ಇಷ್ಟಪಡುವುದಿಲ್ಲ. ಈ ಹಿಂದೆ ಇದೇ ಯಡ್ಡಿ ಸರಕಾರವಿದ್ದಾಗ ಸದನದಲ್ಲಿ ಬಿಜೆಪಿ ಶಾಸಕರು ನೀಲಿ ಚಿತ್ರವನ್ನು ವೀಕ್ಷಿಸಿ ಸಿಕ್ಕಿ ಬಿದ್ದಿರುವುದು ಕೂಡಾ ರಾಜ್ಯದ ಜನತೆ ನೇರ ಪ್ರಸಾರದ ಮೂಲಕ ಕಂಡಿದ್ದರು.

ಜನತೆಯ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವಿಧಾನಸಭೆಯ ಪ್ರತಿನಿಧಿಗಳು ಕಾರ್ಯವೆಸಗುವುದರ ಬದಲಿಗೆ ಕೇವಲ ರಾಜಕೀಯವೇ ತಮ್ಮ ಕಸುಬು ಎಂದು ತಿಳಿದಿರುವ ಬಿಜೆಪಿ ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದು ಖಂಡನೀಯ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ. ವಿಧಾನಸಭೆಯ ಕಲಾಪಗಳಲ್ಲಿ ಮಾಧ್ಯಮಗಳಿಗೆ ಹೇರಿರುವ ನಿರ್ಬಂಧವನ್ನು ರದ್ದುಗೊಳಿಸಬೇಕು ಹಾಗೂ ಖಾಸಗಿ ವಾಹಿನಿಗಳಿಗೆ ನೇರ ಪ್ರಸಾರ ಮಾಡಲು ಅವಕಾಶ ನೀಡಬೇಕೆಂದು ಇಲ್ಯಾಸ್ ತುಂಬೆ ಸರಕಾರವನ್ನು ಆಗ್ರಹಿಸಿದ್ದಾರೆ. 

No comments

Post a Comment