ಮಡಿಕೇರಿ (TOC ನ್ಯೂಸ್) -ಪ್ರವಾಸೋದ್ಯಮದ ಕ್ಷೇತ್ರದಲ್ಲಿ ಕೊಡಗು ಜಿಲ್ಲೆಗೆ ವಿಶೇಷ ಸ್ಥಾನವಿದ್ದು, ಪ್ರವಾಸಿಗರು ಸಾರ್ವಜನಿಕರು ಸೇರಿದಂತೆ ಎಲ್ಲರೂ ಜೊತೆಗೂಡಿ ಜವಾಬ್ದಾರಿಯುತವಾಗಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನುಡಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಪಾಲುದಾರರು ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಪ್ರವಾಸೋದ್ಯಮ ವಿಭಾಗದ ಸಂಯುಕ್ತಾಶ್ರಯದಲ್ಲಿ ಎಫ್.ಎಂ.ಕೆ.ಎಂ.ಸಿ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಪ್ರವಾಸೋದ್ಯಮ ಹಾಗೂ ಉದ್ಯೋಗ: ಸರ್ವರಿಗೂ ಉಜ್ವಲ ಭವಿಷ್ಯ’ ಎಂಬ ಸಂದೇಶದೊಂದಿಗೆ ಆಚರಿಸಿದ ವಿಶ್ವ ಪ್ರವಾಸೋದ್ಯಮ ದಿನಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪ್ರವಾಸೊದ್ಯಮ ಅಭಿವೃದ್ಧಿಯು ಪರಿಸರ ಸ್ನೇಹಿಯಾಗಿ ಅಭಿವೃದ್ಧಿ ಪಡಿಸಬೇಕಾಗಿದೆ. ಪ್ರವಾಸೋದ್ಯಮಕ್ಕೆ ಜಿಲ್ಲೆಯಲ್ಲಿ ಪರ ವಿರೋಧ ಅಭಿಪ್ರಾಯವು ವ್ಯಕ್ತವಾಗಿದ್ದು, ಸಮತೋಲಿತವಾಗಿ ಪ್ರವಾಸೊದ್ಯಮ ಅಭಿವೃದ್ಧಿಪಡಿಸಿ ಪರಿಸರ ರಕ್ಷಣೆ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಪ್ರವಾಸೋದ್ಯಮವು ಪ್ರವಾಸಿಗರನ್ನು ಸೆಳೆಯುವಂತಾಗಬೇಕು. ಇದರಿಂದ ಸ್ಥಳೀಯರಿಗೆ ಉದ್ಯೋಗ ದೊರಕುವುದರೊಂದಿಗೆ ಸ್ವಯಂ ಉದ್ಯೊಗ ಹಾಗೂ ಜಿಲ್ಲೆಯ ಆರ್ಥಿಕ ಬೆಳವಣಿಗೆಗೆ ಬಹುಮುಖ್ಯ ಪಾತ್ರವಹಿಸಲಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರಕೃತಿ ವಿಕೋಪ ಎದುರಾಗಿದ್ದು ಇದರಿಂದ ಪ್ರವಾಸೋದ್ಯಮಕ್ಕೆ ಅತಿಯಾದ ನಷ್ಟ ಉಂಟಾಗಿದೆ. ಹಾಗೆಯೇ ಪ್ರಕೃತಿ ವಿಕೋಪ ಉಂಟಾದ ಸಂದರ್ಭದಲ್ಲಿ ರೆಸಾರ್ಟ್, ಹೋಂ ಸ್ಟೇ, ಮಾಲೀಕರು ಹಾಗೂ ಪ್ರವಾಸೋದ್ಯಮ ಪಾಲುದಾರರು ಜನರ ರಕ್ಷಣೆಗೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ನೆರವಾಗಿದನ್ನು ಸ್ಮರಿಸಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಎಲ್ಲರನ್ನೂ ಒಳಗೊಂಡು ಸುಸ್ಥಿರವಾಗಿ ಬೆಳೆಸುವುದು ಎಲ್ಲರ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿರುವುದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.
ಜಿಲ್ಲಾ ಹೋಟೆಲ್ ಅಸೋಷಿಯೇಷನ್‍ನ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಅವರು ಮಾತನಾಡಿ ಪ್ರವಾಸೋದ್ಯಮದಿಂದ ವಿಶ್ವದ ಸಂಸ್ಕøತಿ ಪರಿಚಯವಾಗುತ್ತದೆ ಜೊತೆಗೆ ಪ್ರವಾಸೋದ್ಯಮ ಹೆಚ್ಚಿನ ಉದ್ಯೋಗ ನೀಡುತ್ತಿರುವ ಕ್ಷೇತ್ರವಾಗಿದೆ ಎಂದರು.
ಕೊಡಗಿನ ಪ್ರವಾಸೋದ್ಯಮವು ಕವಲು ದಾರಿಯಲ್ಲಿದ್ದು, ಪ್ರಕೃತಿ ವಿಕೋಪದಿಂದ ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿದೆ. ಕೊಡಗಿನಲ್ಲಿ ಅನಧೀಕೃತ ಪ್ರವಾಸೋದ್ಯಮ ಪ್ರವರ್ತಕರಿಗೆ ಕಡಿವಾಣ ಹಾಕಬೇಕಿದ್ದು, ಜೊತೆಗೆ ಪ್ರವಾಸೋದ್ಯಮದಲ್ಲಿ ಅಧಿಕೃತವಾಗಿ ತೊಡಗಿಸಿಕೊಂಡಿರುವ ಪಾಲುದಾರರಿಗೆ ಆರ್ಥಿಕ ಉತ್ತೇಜನ ನೀಡಬೇಕೆಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಅವರು ಮಾತನಾಡಿ ಅನಧಿಕೃತ ಹೋಂ ಸ್ಟೇಗಳಿಂದ ಅಧಿಕೃತ ಹೋಂ ಸ್ಟೇಗಳಿಗೆ ತೊಂದರೆಯಾಗುತ್ತಿದ್ದು, ಇದನ್ನು ನಿಯಂತ್ರಿಸಬೇಕು. ಸರ್ಕಾರದ ಅನಗತ್ಯ ನಿಯಾಮಾವಳಿಗಳನ್ನು ಸರಳೀಕರಣಗೊಳಿಸಿ ಪ್ರವಾಸೋದ್ಯಮಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ಅವರು ಮನವಿ ಮಾಡಿದರು.
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷರಾದ ಬಿ.ಎನ್.ಪ್ರಕಾಶ್ ಅವರು ಮಾತನಾಡಿ ಜಿಲ್ಲೆಯಲ್ಲಿ ಪರಿಸರದ ಮೇಲೆ ಹೆಚ್ಚಿನ ಒತ್ತಡ ಇಲ್ಲದೆ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆ: ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆ ಹಾಗೂ ಜಿಲ್ಲಾ ಪ್ರವಾಸೋದ್ಯಮದ ಲಾಂಚನ ಬಿಡುಗಡೆ ಮಾಡಿದರು. ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಎಫ್‍ಎಂಕೆಎಂಸಿ ಕಾಲೇಜು ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರೀನ್‍ಸಿಟಿ ಫೋರಂ ಸದಸ್ಯರು ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ, ಎಫ್‍ಎಂಕೆಎಂಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಗತ್ ತಿಮ್ಮಯ್ಯ, ಟೂರ್ಸ್ ಆಂಡ್ ಟ್ರಾವೆಲ್ಸ್ ಅಸೋಷಿಯೇಷನ್‍ನ ಅಧ್ಯಕ್ಷರಾದ ಚೈಯ್ಯಂಡ ಸತ್ಯ ಗಣಪತಿ, ಪ್ರವಾಸೋದ್ಯಮ ಇಲಾಖೆಯ ಡಿಟಿಸಿ ಚೇತನ್ ಇತರರು ಇದ್ದರು.
