ಮಡಿಕೇರಿ :ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಶುಕ್ರವಾರ ಪ್ರವಾಸಿ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ಮ್ಯಾರಥಾನ್, ಸೈಕಲ್ ಮತ್ತು ಬೈಕ್ ರ್ಯಾಲಿ ಜೊತೆಗೆ ನಗರದ ಕೋಟೆ ಆವರಣದಲ್ಲಿ ಶ್ರಮದಾನ ಕಾರ್ಯಕ್ರಮ ನಡೆಯಿತು. ಮ್ಯಾರಥಾನ್ ಹಾಗೂ ಬೈಕ್ ರ್ಯಾಲಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಹಾಗೂ ಇತರರು ಚಾಲನೆ ನೀಡಿದರು. ಸೈಕಲ್ ಜಾಥಗೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಮತ್ತು ಚೇಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ಮೊಂತಿ ಗಣೇಶ್ ಅವರು ಚಾಲನೆ ನೀಡಿದರು.
ಸೈಕಲ್ ಜಾಥದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಟ್ರಾವೆಲ್ ಕೂರ್ಗ್ ಸಂಸ್ಥೆಯ ಅಧ್ಯಕ್ಷರಾದ ಚೈಯ್ಯಂಡ ಸತ್ಯ ಇತರರು ಪಾಲ್ಗೊಂಡು ಗಮನ ಸೆಳೆದರು.
ರ್ಯಾಲಿಯು ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ಚಾಲನೆಗೊಂಡು, ಜನರಲ್ ತಿಮ್ಮಯ್ಯ ವೃತ್ತ, ರಾಜಾಸೀಟು ರಸ್ತೆ ಮಾರ್ಗ, ಭಾರತೀಯ ಜೀವ ವಿಮಾ ನಿಗಮ ರಸ್ತೆ, ಪತ್ರಿಕಾ ಭವನ, ಅಜ್ಜಮಾಡ ದೇವಯ್ಯ ವೃತ್ತದ ಮೂಲಕ ಕೋಟೆಗೆ ತಲುಪಿತು. ಕೋಟೆ ಆವರಣದಲ್ಲಿ ಶ್ರಮದಾನ ನಡೆಯಿತು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಅವರು ಮಾತನಾಡಿ ಪ್ರವಾಸೋದ್ಯಮ, ಅರಣ್ಯ ಹಾಗೂ ದುಬಾರೆ ರಿವರ್ ರ್ಯಾಪ್ಟಿಂಗ್ ಅಸೋಷಿಯೇಷನ್ ವತಿಯಿಂದ ಸ್ವಸ್ಥ ಸಂಸ್ಥೆಯ 60 ಮಕ್ಕಳನ್ನುf ದುಬಾರೆಯಲ್ಲಿ ರಿವರ್ ರ್ಯಾಪ್ಟಿಂಗ್ ಹಾಗೂ ಆನೆ ಶಿಬಿರಕ್ಕೆ ಕರೆದುಕೊಂಡು ಹೋಗಿ ವೀಕ್ಷಣೆ ಮಾಡಲಾಯಿತು.
ಜಾಥ ಸಂದರ್ಭದಲ್ಲಿ ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷರಾದ ಬಿ.ಜಿ.ಅನಂತಶಯನ, ಗ್ರೀನ್ ಸಿಟಿ ಫೋರಂನ ಅಧ್ಯಕ್ಷರಾದ ಜಯ ಚಿನ್ನಪ್ಪ, ಟ್ರಾವೆಲ್ ಕೂರ್ಗ್ ಸಂಸ್ಥೆಯ ಅಧ್ಯಕ್ಷರಾದ ಚೈಯ್ಯಂಡ ಸತ್ಯ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಪ್ರಕಾಶ್, ಮಾಜಿ ಅಧ್ಯಕ್ಷರಾದ ಜಿ.ಚಿದ್ವಿಲಾಸ್, ತಹಶೀಲ್ದಾರರಾದ ಮಹೇಶ್, ಪೌರಾಯುಕ್ತರಾದ ಎಂ.ಎಲ್.ರಮೇಶ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಇತರರು ಇದ್ದರು.


