ಮಡಿಕೇರಿ (TIMES OF COORG):-ಕೋವಿಡ್-19 ನಿಗ್ರಹ ಸಂಬಂಧ ಸರ್ಕಾರದ ಆದೇಶದಂತೆ ದೇಶದಾದ್ಯಂತ ಲಾಕ್ ಡೌನ್ ಜಾರಿಯಾಗಿದೆ. ಅದರಂತೆ ಕೊಡಗು ಜಿಲ್ಲೆಯಲ್ಲಿ ಸಹ ನಿಬರ್ಂಧಕಾಜ್ಞೆ ಜಾರಿಯಲ್ಲಿದೆ. ಆದರೂ ಸಹ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ ನಿರ್ಬಂಧದಿಂದ ಷರತ್ತುಬದ್ದ ವಿನಾಯಿತಿ ನೀಡಲಾಗಿದೆ. ಅದರಂತೆ ಕೊಡಗು ಜಿಲ್ಲೆಯಲ್ಲಿ ಷರತ್ತುಬದ್ದವಾಗಿ ಕಾರ್ಮಿಕರನ್ನು ಬಳಸಿ ಕೃಷಿ ಮತ್ತು ತೋಟಗಾರಿಕಾ ಚಟುವಟಿಕೆ ನಡೆಸಲು ಅವಕಾಶ ನೀಡಲಾಗಿದೆ.
‘ಆ ದಿಸೆಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆ ಸಂಬಂಧ ಆಗಮಿಸಲು ಮತ್ತು ಹಿಂತಿರುಗಲು ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಹಾಗೂ ಸಂಜೆ 5 ಗಂಟೆಯಿಂದ 7 ಗಂಟೆಯವರೆಗೆ ಅವಕಾಶ ಕಲ್ಪಿಸಿದೆ.’
ಯಾವುದೇ ಕಾರಣಕ್ಕೂ ಹೊರ ರಾಜ್ಯದಿಂದ ಕಾರ್ಮಿಕರನ್ನು ಕರೆತರುವಂತಿಲ್ಲ. ಸಾಧ್ಯವಾದಷ್ಟು ಜಿಲ್ಲೆಯ ಸ್ಥಳೀಯ ಕಾರ್ಮಿಕರಿಗೆ ಆದ್ಯತೆ ನೀಡುವುದು.
ಕೃಷಿ-ತೋಟದ ಮಾಲೀಕರು ಕೆಲಸದ ಸ್ಥಳಕ್ಕೆ ಆಗಮಿಸುವ ಹಿಂತಿರುಗುವ ವೇಳೆಯಲ್ಲಿ ಮತ್ತು ಕಾರ್ಮಿಕರನ್ನು ಕರೆದೊಯ್ಯುವ ವೇಳೆಯಲ್ಲಿ ಜಮೀನಿಗೆ ಸಂಬಂಧಿಸಿದ ಆರ್.ಟಿ.ಸಿ. ಅಥವಾ ಜಮೀನಿಗೆ ಸಂಬಂಧಿಸಿದ ಯಾವುದಾದರೂ ದಾಖಲೆಗಳನ್ನು ಬಳಿಯಲ್ಲಿ ಹೊಂದಿದ್ದು, ಪರಿಶೀಲನಾ ಸಮಯದಲ್ಲಿ ಹಾಜರುಪಡಿತಕ್ಕದ್ದು.
ಯಾವುದೇ ಸರಕು ಸಾಗಾಣಿಕೆ ವಾಹನಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯತಕ್ಕದ್ದಲ್ಲ. ಪ್ರಯಾಣಿಕರ ವಾಹನದಲ್ಲಿ ಮಾತ್ರ ಸಂಚರಿಸುವುದು.
ಕಾರ್ಮಿಕರ ಸಂಖ್ಯೆಯು ವಾಹನದ ಒಟ್ಟು ಆಸನ ಸಂಖ್ಯೆಯ ಗರಿಷ್ಟ ಶೇ.40 ಮೀರದಂತೆ ಕರೆದೊಯ್ಯಬೇಕು. ಹಾಗೂ ವಾಹನದಲ್ಲಿ ಮತ್ತು ಕೆಲಸದ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
ಕೆಲಸದ ಸ್ಥಳದಲ್ಲಿ ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಆಹಾರ ವ್ಯವಸ್ಥೆ, ಹ್ಯಾಂಡ್ ಸ್ಯಾನಿಟೈಸರ್, ಸೋಪು ಇತ್ಯಾದಿಗಳ ವ್ಯವಸ್ಥೆ ಕಡ್ಡಾಯವಾಗಿ ಕಲ್ಪಿಸುವುದು.
ಪ್ರಯಾಣದ ವೇಳೆ ಮತ್ತು ಕೆಲಸದ ವೇಳೆ ಕಡ್ಡಾಯವಾಗಿ ಮುಖಗವಸು ಧರಿಸತಕ್ಕದ್ದು ಮತ್ತು ಯಾವುದೇ ರೀತಿಯಲ್ಲಿ ಅಸ್ವಸ್ಥತೆ ಇರುವ ಬಗ್ಗೆ ಕಂಡುಬಂದಲ್ಲಿ ಅಥವಾ ಸಂಶಯವಿದ್ದಲ್ಲಿ ಕೂಡಲೇ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವುದು.
ಕಲ್ಪಿಸಲಾದ ನಿಗಧಿತ ಅವಧಿಯ ಹೊರತಾಗಿ ವಿನಾ ಕಾರಣ ತಿರುಗಾಡತಕ್ಕದ್ದಲ್ಲ. ಒಂದೇ ಕಡೆ ಜಮಾವಣೆಗೊಳ್ಳುವುದು ಅಥವಾ ಗುಂಪುಗೂಡಬಾರದು. ಜಿಲ್ಲೆಯ ಸಾರ್ವಜನಿಕ ಹಿತಾಸಕ್ತಿಯಿಂದ ಮೇಲಿನಂತೆ ಅವಕಾಶ ಕಲ್ಪಿಸಲಾಗಿದ್ದು, ಉಲ್ಲಂಘನೆಯು ದಂಡನೀಯವಾಗಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದು ಸಂಬಂಧಪಟ್ಟ ಜಾಗದ ಮಾಲೀಕರ ಜವಾಬ್ದಾರಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶಿಸಿದ್ದಾರೆ.
No comments
Post a Comment