ಮಡಿಕೇರಿ (TIMES OF COORG):-ಕೋವಿಡ್-19 ಲಾಕ್‍ಡೌನ್ ಸಂಬಂಧ ಜಿಲ್ಲೆಯಲ್ಲಿ ಹಾಲಿ ಕಾಳಜಿ ಕೇಂದ್ರದಲ್ಲಿರುವ ವಲಸೆ ಕಾರ್ಮಿಕರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‍ಗಳನ್ನು ಬಳಸಿ ಸೂಕ್ತ ಮುಂಜಾಗೃತ ಕ್ರಮಗಳೊಂದಿಗೆ ಕಳುಹಿಸಿಕೊಡಲು ಸೂಚನೆ ಇರುತ್ತದೆ.
ಮಂದುವರೆದು, ಕೊಡಗು ಜಿಲ್ಲೆಯಲ್ಲಿ ಕಾಫಿ/ ಕೃಷಿ ಚಟುವಟಿಕೆ ಸಂಬಂಧ ಹೊರ ಜಿಲ್ಲೆಯಿಂದ ಆಗಮಿಸಿದ ಕಾರ್ಮಿಕರು ಕೋವಿಡ್-19 ಸಂಬಂಧ ಲಾಕ್‍ಡೌನ್ ನಿಂದಾಗಿ ಹಾಲಿ ಕೊಡಗು ಜಿಲ್ಲೆಯ ಎಸ್ಟೇಟ್ ತೋಟಗಳ ಮಾಲೀಕರು ಕಲ್ಪಿಸಿರುವ ವಸತಿ ಸೌಕರ್ಯದಲ್ಲಿದ್ದು, ಪ್ರಸ್ತುತ ಸ್ವ-ಜಿಲ್ಲೆಗೆ ತೆರಳಲು ಇಚ್ಚಿಸಿರುವ ಕಾರ್ಮಿಕರನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ರಾಜ್ಯದ ಒಳಭಾಗದಲ್ಲಿನ ಅವರ ಸ್ವ-ಗ್ರಾಮಕ್ಕೆ ಹಿಂತಿರುಗಲು ಅವಕಾಶ ನೀಡುವ ಬಗ್ಗೆ ಏಪ್ರಿಲ್ 24 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ವೀಡಿಯೋ ಸಂವಾದದಲ್ಲಿ ಸ್ಪಷ್ಟೀಕರಣ ಕೋರಲಾಗಿ, ಸ್ಪಷ್ಟೀಕರಣ ದೊರಕಿದೆ.
ಅದರಂತೆ ಜಿಲ್ಲೆಯಲ್ಲಿ ಕಾಫಿ/ಕೃಷಿ ಚಟುವಟಿಕೆ ಸಂಬಂಧ ಹೊರ ಜಿಲ್ಲೆಯಿಂದ ಆಗಮಿಸಿದ ಕಾರ್ಮಿಕರು ಕೋವಿಡ್-19 ಸಂಬಂಧ ಲಾಕ್‍ಡೌನ್ ನಿಂದಾಗಿ ಹಾಲಿ ಕೊಡಗು ಜಿಲ್ಲೆಯಲ್ಲಿದ್ದು, ಪ್ರಸ್ತುತ ರಾಜ್ಯದ ಒಳಗಿನ ಜಿಲ್ಲೆಗಳ ಸ್ವ-ಗ್ರಾಮಕ್ಕೆ ಷರತ್ತು ಬದ್ದವಾಗಿ ಕಾರ್ಮಿಕರನ್ನು ಅವರ ಸ್ವ-ಇಚ್ಚೆಯ ಮೇರೆಗೆ ಎಸ್ಟೇಟ್, ತೋಟದ ಮಾಲೀಕರು / ಗುತ್ತಿಗೆದಾರರು ಕಲ್ಪಿಸುವ ಪ್ರಯಾಣಿಕರ ವಾಹನದ ಮುಖಾಂತರ ಕಳುಹಿಸಿಕೊಡಲು ಅವಕಾಶ ನೀಡಲಾಗಿದೆ.
ಕಾರ್ಮಿಕರು ಜಿಲ್ಲೆಯಿಂದ ತೆರಳುವ ಮುನ್ನಾ ಈ ಕಾರ್ಮಿಕರು ಕೆಲಸದ ಸ್ಥಳವನ್ನು ಬಿಟ್ಟು ಇತರೆಡೆಗೆ ತೆರಳಿರುವುದಿಲ್ಲ, ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಒಳಗಾಗಿರುವುದಿಲ್ಲ ಮತ್ತು ಸುಳ್ಳು ಮಾಹಿತಿ ನೀಡಿರುವುದಿಲ್ಲ ಎಂದು ನಿಗಧಿತ ನಮೂನೆಯಲ್ಲಿ ಮಾಲೀಕರು/ ಗುತ್ತಿಗೆದಾರರು ಘೋಷಣೆಯನ್ನು ಗುರುತಿನ ಚೀಟಿಯ ಪ್ರತಿಯೊಂದಿಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ದೃಢೀಕರಣ ಪಡೆದು ತಾಲ್ಲೂಕು ತಹಶೀಲ್ದಾರರಿಗೆ ನೀಡಬೇಕು. ಇದರೊಂದಿಗೆ ಅನುಬಂಧದಂತೆ ಕಾರ್ಮಿಕರ ಒಟ್ಟು ಸಂಖ್ಯೆ, ಹೆಸರು, ಸ್ವಂತ ವಿಳಾಸ ಮತ್ತು ವಾಹನದ ವಿವರಗಳನ್ನು ಸಹ ನೀಡುವುದು.
ತಾಲ್ಲೂಕು ತಹಶೀಲ್ದಾರರು ಈ ಘೋಷಣೆ ಮತ್ತು ಅಗತ್ಯ ದಾಖಲಾತಿಗಳ ಪ್ರತಿಯನ್ನು ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನೀಡುವುದು.
ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರು ಈ ದಾಖಲೆಗಳ ಆಧಾರವಾಗಿರಿಸಿ ಕಾರ್ಮಿಕರ ಆರೋಗ್ಯ ಸ್ಥಿತಿಯ ಬಗ್ಗೆ ತಪಾಸಣೆ ನಡೆಸಿ ದೃಢೀಕರಣವನ್ನು ತಹಶೀಲ್ದಾರರಿಗೆ ನೀಡುವುದು.
ಮಾಲೀಕರು/ಗುತ್ತಿಗೆದಾರರು ಗುರುತಿನ ಚೀಟಿಯ ಪ್ರತಿಯೊಂದಿಗೆ ನೀಡಿದ ಘೋಷಣೆ, ಪ್ರಯಾಣದ ವಾಹನದ ವಿವರ ಹಾಗೂ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರು ನೀಡಿದ ವೈದ್ಯಕೀಯ ದೃಢೀಕರಣದೊಂದಿಗೆ ಪಾಸ್ ವಿತರಣೆ ಸಂಬಂಧ ಉಪ ವಿಭಾಗಾಧಿಕಾರಿಯವರಿಗೆ ಪ್ರಸ್ತಾವನೆ ನೀಡುವುದು.
ಮೇಲಿನ ದಾಖಲಾತಿಗಳನ್ನು ಕೂಲಂಕಶವಾಗಿ ಪರಿಶೀಲಿಸಿದ ನಂತರ ಉಪ ವಿಭಾಗಾಧಿಕಾರಿಯವರು ಪಾಸ್ ವಿತರಿಸುವುದು. ಯಾವುದೇ ಸರಕು ಸಾಗಾಣಿಕೆ ವಾಹನಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯತಕ್ಕದ್ದಲ್ಲ. ಪ್ರಯಾಣಿಕರ ವಾಹನದಲ್ಲಿ ಮಾತ್ರ ಸಂಚರಿಸುವುದು. ವಾಹನದ ವ್ಯವಸ್ಥೆಯನ್ನು ಸಂಬಂಧಿಸಿದ ತೋಟದ ಮಾಲೀಕರು/ಗುತ್ತಿಗೆದಾರರು ಮಾಡಿಕೊಡತಕ್ಕದ್ದು.
ಕಾರ್ಮಿಕರನ್ನು ಕಡ್ಡಾಯವಾಗಿ ಅವರ ಊರಿನಲ್ಲಿರುವ ಸ್ವಂತ ಮನೆಯ ಬಳಿಗೆ ತಲುಪಿಸತಕ್ಕದ್ದು. ದಾರಿ ಮಧ್ಯೆ ಅಥವಾ ಯಾವುದೇ ಬೇರೆ ಸ್ಥಳಗಳಲ್ಲಿ ಇಳಿಸತಕ್ಕದ್ದಲ್ಲ.
ವಾಹನ ಚಾಲಕ ಮತ್ತು ನಿರ್ವಾಹಕರ ಆರೋಗ್ಯ ತಪಾಸಣೆ ದೃಢೀಕರಣ ಕಡ್ಡಾಯವಾಗಿರುತ್ತದೆ. ಕಾರ್ಮಿಕರ ಸಂಖ್ಯೆಯು ವಾಹನದ ಒಟ್ಟು ಆಸನ ಸಂಖ್ಯೆಯ ಗರಿಷ್ಟ 40% ಮೀರದಂತೆ ಕರೆದೊಯ್ಯತಕ್ಕದ್ದು ಹಾಗೂ ವಾಹನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.
ಪ್ರಯಾಣದ ಸಮಯದಲ್ಲಿ ಶುದ್ದ ಕುಡಿಯುವ ನೀರಿನವ್ಯವಸ್ಥೆ, ಆಹಾರ ವ್ಯವಸ್ಥೆ, ಹ್ಯಾಂಡ್ ಸ್ಯಾನಿಟೈಸರ್, ಸೋಪು, ಗ್ಲವ್ಸ್, ಮಾಸ್ಕ್ ಇತ್ಯಾದಿಗಳನ್ನು ಕಡ್ಡಾಯವಾಗಿ ಕಲ್ಪಿಸುವುದು.
ಉಪ ವಿಭಾಗಾಧಿಕಾರಿ ಅವರು ಪಾಸ್ ನೀಡಿದ ನಂತರ ವಾಹನ ಪ್ರಯಾಣಿಸುವ ಮುಂಚಿತವಾಗಿ ಸಂಬಂಧಪಟ್ಟ ಕಂದಾಯ ಪರಿವೀಕ್ಷಕರು ನಿಗಧಿತ ಚೆಕ್ ಲಿಸ್ಟ್ ಪ್ರಕಾರ ಪರಿಶೀಲಿಸಿ, ಪಾಲನೆಯಾಗಿರುವ ಬಗ್ಗೆ ದೃಢೀಕರಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವುದು ಮತ್ತು ಉಪ ವಿಭಾಗಾಧಿಕಾರಿ ಅವರಿಗೆ ಚೆಕ್ ಲಿಸ್ಟ್ ಸಲ್ಲಿಸುವುದು.
ಯಾವುದೇ ವ್ಯತ್ಯಾಸಗಳು ಉಂಟಾದಲ್ಲಿ ಸಂಬಂಧಪಟ್ಟವರೇ ನೇರ ಹೊಣೆಗಾರರಾಗುತ್ತಾರೆ. ವಾಹನ ಹಿಂತಿರುಗುವ ವೇಳೆ ಯಾವುದೇ ಪ್ರಯಾಣಿಕರನ್ನು ಕರೆತರುವಂತಿಲ್ಲ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
No comments
Post a Comment