ಛಲದಿಂದ ಯಶಸ್ಸು ಸಾಧ್ಯ: ವಿ.ವಿ.ಮಲ್ಲಾಪುರ

No comments

ToC ಮಡಿಕೇರಿ :-ಛಲದಿಂದ ಯಶಸ್ಸು ಸಾಧ್ಯ. ಇದನ್ನು ಪ್ರತಿಯೊಬ್ಬ ವಿಕಲಚೇತನರು ಮನಗೊಂಡು ಯಶಸ್ಸುಗಳಿಸುವಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಅವರು ತಿಳಿಸಿದ್ದಾರೆ.
      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿಶೇಷ ಮಕ್ಕಳ ಶಾಲೆಗಳು, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
      ಅಂಗವಿಕಲತೆ ಶಾಪವಲ್ಲ. ಅದನ್ನು ಮೆಟ್ಟಿ ನಿಂತು ವಿಕಲಚೇತನರೆಂಬ ಭಾವನೆಯಿಂದ ಹೊರಬಂದು ಸಾಧನೆ ಮಾಡಬೇಕು ಎಂದು ಅವರು ತಿಳಿಸಿದರು.
      ಸರ್ಕಾರ ಸಂಘ ಸಂಸ್ಥೆಗಳ ವತಿಯಿಂದ ನೀಡಲಾಗುತ್ತಿರುವ ಸವಲತ್ತುಗಳನ್ನು ವಿಕಲಚೇತನರು ಸದ್ಭಳಕೆ ಮಾಡಿಕೊಂಡು ಉತ್ತಮ ಜೀವನ ನಡೆಸುವಂತೆ ವೀರಪ್ಪ ವೀರಭದ್ರಪ್ಪ ಮಲ್ಲಾಪುರ ಅವರು ತಿಳಿಸಿದರು.
      ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಎಲ್ಲಾ ಮಟ್ಟದಲ್ಲೂ ವಿಕಲಚೇತನರಿಗೆ ಸರ್ಕಾರದಿಂದ ಹೆಚ್ಚಿನ ಸವಲತ್ತು ದೊರೆಯುತ್ತಿದ್ದು, ವಿಕಲಚೇತನರು ಇದನ್ನು ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
      ಸಂಘ ಸಂಸ್ಥೆಗಳು ವಿಕಲಚೇತನರಿಗಾಗಿ ಉತ್ತಮ ರೀತಿಯ ಬೆಂಬಲ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಇನ್ನೂ ಹೆಚ್ಚಿನ ಮಟ್ಟದಲ್ಲಿ ಸುಧಾರಣೆ ತರಲು ಎಲ್ಲರೂ ಶ್ರಮಿಸಬೇಕಿದೆ ಎಂದು ಅವರು ತಿಳಿಸಿದರು.
     ವಿಕಲಚೇತನರು ವಿವಿಧ ಕ್ಷೇತ್ರಗಳಲ್ಲಿ ಸಾಮಾನ್ಯರಿಗಿಂತ ಹೆಚ್ಚಿನ ಸಾಧನೆ ಮಾಡುತ್ತಿದ್ದು, ಬೇರೆಯವರಿಗಿಂತ ಕಮ್ಮಿಯಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಎಂದು ಅವರು ತಿಳಿಸಿದರು.
     ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಜಿಲ್ಲಾಡಳಿತ ಕಚೇರಿ ಭವನದಲ್ಲಿ ಸ್ಥಳಾವಕಾಶ ನೀಡುವಂತೆ ಮನವಿ ಬಂದಿದ್ದು, ಆದ್ಯತೆ ಮೇರೆಗೆ ಬೇರೆ ಕಚೇರಿ ಸ್ಥಳಾಂತರವಾದ ಸಂದರ್ಭದಲ್ಲಿ ಸ್ಥಳಾವಕಾಶ ಒದಗಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
     ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಅವರು ಮಾತನಾಡಿ ವಿಕಲಚೇತನರ ಹಕ್ಕುಗಳಿಗೆ ಯಾವುದೇ ಚ್ಯುತಿ ಬಾರದಂತೆ ಅವರ ಏಳಿಗೆಗೆ ಮತ್ತು ಸಾಮಥ್ರ್ಯವನ್ನು ಗುರುತಿಸಿ ಅವರನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು. ವಿಕಲಚೇತನರಿಗೆ ಇರುವಂತಹ ತೊಡಕುಗಳನ್ನು ನಿವಾರಣೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದ್ದು, ಅವರಿಗೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡಬೇಕಾಗಿದೆ ಎಂದು ಅವರು ತಿಳಿಸಿದರು.
     ಹಿಂದೆ ವಿಕಲಚೇತನರ ಸ್ಥಿತಿ ತುಂಬಾ ಶೋಚನೀಯವಾಗಿತ್ತು, ಆದರೆ ಈಗ ಎಲ್ಲಾ ರೀತಿಯ ಸೌಲಭ್ಯ ಹಾಗೂ ಸವಲತ್ತುಗಳನ್ನು ಸರ್ಕಾರ ನೀಡುತ್ತಿದ್ದು, ಉತ್ತಮ ಸುಧಾರಣೆ ಕಂಡಿರುತ್ತದೆ. ಅನಾಥ ವಿಕಲಚೇತನರನ್ನು ಆಶ್ರಯ ಕೇಂದ್ರಗಳಿಗೆ ಸೇರಿಸಲು ಎಲ್ಲರೂ ಪ್ರಯತ್ನಿಸಬೇಕು. ಮಾನವೀಯ ನೆಲೆಯಲ್ಲಿ ಸ್ಪಂದಿಸುವಂತೆ ಅವರು ತಿಳಿಸುತ್ತಾ, ವಿಕಲಚೇತನರು ತಮ್ಮ ಹಕ್ಕುಗಳನ್ನು ತಪ್ಪದೇ ಪಡೆಯಬೇಕು. ಹಾಗೂ ನಿಮ್ಮ ಹಕ್ಕುಗಳಿಗೆ ಚ್ಯುತಿ ಬಂದಲ್ಲಿ ಸಂಬಂಧಪಟ್ಟ ಇಲಾಖೆಯನ್ನು ಸಂಪರ್ಕಿಸುವಂತೆ ಅವರು ತಿಳಿಸಿದರು.
     ಅಪರ ಜಿಲ್ಲಾಧಿಕಾರಿ ಹಾಗೂ ವಿಕಲಚೇತನರ ದಿನಾಚರಣೆ ಸಮಿತಿ ಅಧ್ಯಕ್ಷರಾದ ಡಾ.ಸ್ನೇಹಾ ಅವರು ಮಾತನಾಡಿ ಪ್ರತಿಯೊಬ್ಬ ವಿಕಲಚೇತನರಲ್ಲಿಯೂ ವಿಶೇಷವಾದ ಸಾಮಥ್ರ್ಯ ಇರುತ್ತದೆ. ಅಂತಹ ವಿಶೇಷ ಸಾಮಥ್ರ್ಯವನ್ನು ಪೋಷಕರು ಮತ್ತು ಸಮಾಜವು ಗುರುತಿಸಿ ಅವರ ಯಶಸ್ಸಿಗೆ ಸಹಕಾರಿಯಾಗಬೇಕು ಎಂದರು.
     ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪೋಷಕರ ಮತ್ತು ಸಮಾಜದ ಪಾತ್ರ ಮಹತ್ತರವಾದದ್ದು, ಸರ್ಕಾರವು ವಿಕಲಚೇತನರ ಏಳಿಗೆಗೆ ಸಾಕಷ್ಟು ಶ್ರಮಿಸುತ್ತಿದ್ದು, ಎಲ್ಲಾ ರೀತಿಯ ಸವಲತ್ತುಗಳನ್ನು ನೀಡುತ್ತಾ ಬಂದಿದೆ. ಯಾವುದೇ ಸಮಸ್ಯೆ ಬಂದಲ್ಲಿ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರುವಂತೆ ಇದೇ ಸಂದರ್ಭದಲ್ಲಿ  ತಿಳಿಸಿದರು.
     ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಅರುಂಧತಿ ಅವರು ಮಾತನಾಡಿ 1992 ರಿಂದ ಅಂತರರಾಷ್ಟ್ರೀಯ ವಿಶ್ವ ಅಂಗವಿಕಲರ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದು, ಪ್ರತಿಯೊಬ್ಬ ವಿಕಲಚೇತನರಿಗೆ ಘನತೆಯಿಂದ ಬದುಕಲು ಮತ್ತು ಎಲ್ಲಾ ಸವಲತ್ತು, ಸಮಾನ ಅವಕಾಶ ನೀಡಿ ಅವರುಗಳ ಅಭಿವೃದ್ಧಿಗೆ ಸರ್ಕಾರ, ಸಂಘ ಸಂಸ್ಥೆಗಳು ಶ್ರಮಿಸುತ್ತಿರುವುದಾಗಿ ಅವರು ತಿಳಿಸಿದರು.
    ಪಂಚಾಕ್ಷರಿ ಗವಾಯಿ, ಭೌತ ವಿಜ್ಞಾನಿ ಸ್ಟಿಫನ್ ಹಾಕಿನ್ಸ್ ಇಂತಹ ಸಾಧಕರು ವಿಕಲಚೇತನರಿಗೆ ಮಾದರಿಯಂತಿದ್ದು, ಅವರುಗಳ ಸ್ಫೂರ್ತಿದಾಯಕ ಬದುಕು ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗುತ್ತದೆ ಎಂದು ಅವರು ತಿಳಿಸಿದರು.
    ಎಸ್‍ವಿವೈಎಂ ನ ಅಧ್ಯಕ್ಷರಾದ ಡಾ. ಎಂ.ಆರ್.ಸೀತಾರಾಮ ಅವರು ಮಾತನಾಡಿ ಜಾಗೃತಿ, ಸಂವೇದನೆ ಕೊರತೆಯಿಂದ ಮೇಲು ಕೀಳು ಎಂಬ ಭಾವನೆಯನ್ನು ತೊಡೆದು ಹಾಕಬೇಕು. ವಿಕಲಚೇತನರಿಗೆ ವಿಶೇಷ ಸವಲತ್ತನ್ನು ಸರ್ಕಾರ, ಸಂಘ ಸಂಸ್ಥೆಗಳು ನೀಡುತ್ತಿದ್ದು, ಛಲದಿಂದ ವಿಕಲತೆಯನ್ನು ಮೆಟ್ಟಿ ನಿಂತು ಯಶಸ್ಸು ಗಳಿಸಬೇಕು ಎಂದು ತಿಳಿಸಿದರು.
    ಜಿಲ್ಲಾ ವಿಕಲಚೇತನರ ಸಂಘದ ಅಧ್ಯಕ್ಷರಾದ ಜೆ.ಮಹೇಶ್ವರ್ ಅವರು ಮಾತನಾಡಿ ಕಷ್ಟದಲ್ಲಿ ಇರುವ ವಿಕಲಚೇತನರನ್ನು ಕಷ್ಟದ ಜೀವನದಿಂದ ಮುಖ್ಯವಾಹಿನಿಗೆ ತರುವಂತಾಗಬೇಕು. ವಿಕಲಚೇತನರಿಗೆ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರವು ಇನ್ನೂ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸುತ್ತಾ ಗ್ರಾಮೀಣ ಮಟ್ಟದಲ್ಲಿ ವಿಕಲಚೇತನರಿಗೆ ಮನೆ ಬಾಗಿಲಿಗೆ ಇರುವ ಸೌಲಭ್ಯಗಳನ್ನು ತಲುಪಿಸುತ್ತಿರುವ ಕಾರ್ಯಕರ್ತರಿಗೆ ಹೆಚ್ಚಿನ ಗೌರವಧನವನ್ನು ನೀಡಬೇಕು ಎಂದು ಮನವಿ ಮಾಡಿದರು.
     ವಿಕಲಚೇತನರು ತಮಗೆ ಇರುವ ಸೌಲಭ್ಯವನ್ನು ಪಡೆಯಲು ಮುಂದೆ ಬಂದು ಪಡೆದುಕೊಳ್ಳಬೇಕು. ನಿಮ್ಮ ಸಮಸ್ಯೆಗಳು ನಿಮ್ಮಲ್ಲಿಯೇ ಹುದುಗಿಹೋಗದಂತೆ ಸಂಬಂಧಪಟ್ಟವರ ಗಮನಕ್ಕೆ ತಂದು ಸರ್ಕಾರದ ಸವಲತ್ತುಗಳನ್ನು ಪಡೆಯಿರಿ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ವಿಕಲಚೇತನರಿಗೆ ಅವಶ್ಯವಿರುವ ಹಲವು ಬೇಡಿಕೆಗಳನ್ನು ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತಂದರು.
     ಕಾರ್ಯಕ್ರಮದಲ್ಲಿ ಕ್ರೀಡೆ ಹಾಗೂ ವಿವಿಧ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿಜೇತರಾದ ವಿಕಲಚೇತನರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಿಶೇಷಚೇತನರಾದ ಚರಣ್ ಚೆಟ್ಟಿಮನೆ ಅವರು ನುಡಿಸಿದ ಕೀ ಬೋರ್ಡ್ ವಾದನ ಮನಸೂರೆಗೊಳಿಸಿತು. ಹಾಗೂ ವಿಶೇಷ ಚೇತನರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
     ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕರಾದ ಡಾ.ಕಾರ್ಯಪ್ಪ, ವೈದ್ಯಕೀಯ ಅಧೀಕ್ಷಕರಾದ ಡಾ.ಲೋಕೇಶ್, ಇತರರು ಇದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ನಿರೂಪಿಸಿದರು. ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಧಿಕಾರಿ ಸಂಪತ್ ಕುಮಾರ್ ಅವರು ಸ್ವಾಗತಿಸಿದರು.

No comments

Post a Comment