ಮಡಿಕೇರಿ :-ಶಾಲಾ ವಿದ್ಯಾರ್ಥಿಗಳಲ್ಲಿ ಕಲಿಕಾ ಹಂತದಲ್ಲೇ ಗ್ರಾಹಕ ಹಕ್ಕುಗಳು ಹಾಗೂ ದಿನನಿತ್ಯದ ವ್ಯವಹಾರಗಳ ಬಗ್ಗೆ ಅರಿವು ಮೂಡಿಸಲು 'ಶಾಲಾ ಗ್ರಾಹಕರ ಕ್ಲಬ್' ತೆರೆಯಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಗೌರವಕುಮಾರ್ ಶೆಟ್ಟಿ ಅವರು ಹೇಳಿದರು.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕುಶಾಲನಗರ ಗ್ರಾಹಕರ ವೇದಿಕೆ ಮತ್ತು ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ವತಿಯಿಂದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿಯ ಸಹಯೋಗದಲ್ಲಿ ಮಡಿಕೇರಿ ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಶಾಲಾ ಗ್ರಾಹಕರ ಕ್ಲಬ್‍ಗಳ ಪ್ರೌಢಶಾಲಾ ಮುಖ್ಯಸ್ಥರಿಗೆ ಏರ್ಪಡಿಸಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಗ್ರಾಹಕರ ಮಾಹಿತಿ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಜನರಲ್ಲಿ ಗ್ರಾಹಕ ಜಾಗೃತಿ ಉಂಟು ಮಾಡುವ ಉದ್ದೇಶದಿಂದ ಗ್ರಾಹಕರ ಕಾಯ್ದೆಯನ್ನು ಅರಿತು ಅದರ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸಿ, ನೊಂದ ಗ್ರಾಹಕರು ನ್ಯಾಯ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.
ಮಕ್ಕಳಿಗೆ ಗ್ರಾಹಕರ ಹಕ್ಕುಗಳೇನು?, ಯಾವುದೇ ವಸ್ತು ಕೊಳ್ಳುವ ಮುನ್ನ ಅನುಸರಿಸಬೇಕಾದ ಕ್ರಮಗಳೇನು? ಎಂಬುದರ ಬಗ್ಗೆ ಶಾಲೆಯ ಗ್ರಾಹಕ ಕ್ಲಬ್ ಮಕ್ಕಳಿಗೆ ಮಾಹಿತಿ ನೀಡಲಿದೆ,' ಎಂದು ಗೌರವ್‍ಕುಮಾರ್ ತಿಳಿಸಿದರು.
ಗ್ರಾಹಕರ ಹಕ್ಕುಗಳು ಮತ್ತು ಗ್ರಾಹಕರ ಹಿತರಕ್ಷಣೆಯ ಕುರಿತು ಮಾಹಿತಿ ನೀಡಿದ ಕುಶಾಲನಗರ ಗ್ರಾಹಕರ ವೇದಿಕೆಯ ಅಧ್ಯಕ್ಷ ಎ.ಎ.ಚಂಗಪ್ಪ ಮಾತನಾಡಿ, ಗ್ರಾಹಕರ ಕ್ಲಬ್ ಮೂಲಕ ಮಕ್ಕಳಿಗೆ ವಸ್ತುಗಳ ತೂಕ, ಅಳತೆಯಲ್ಲಿ ಮೋಸ ಹೋಗದಂತೆ ಸರಕನ್ನು ಯಾವ ರೀತಿ ಕೊಳ್ಳಬೇಕು. ವಸ್ತುಗಳನ್ನು ಖರೀದಿಸಿದ ನಂತರ ರಶೀದಿ ಪಡೆಯಬೇಕು. ಕೊಂಡ ವಸ್ತುಗಳು ಕಳಪೆ ಗುಣಮಟ್ಟ ಹಾಗೂ ದೋಷ ಪೂರ್ಣವೆಂದು ಕಂಡು ಬಂದಾಗ ಕೂಡಲೇ ಗ್ರಾಹಕ ಮಾಹಿತಿ ಕೇಂದ್ರಕ್ಕೆ ದೂರು ನೀಡುವ ಬಗ್ಗೆ ಹಾಗೂ ಗ್ರಾಹಕ ಸಂರಕ್ಷಣಾ ಕಾಯಿದೆ ಕುರಿತು ಅರಿವು ಮೂಡಿಸಲಾಗುವುದು ಎಂದರು.
ಸಂಪನ್ಮೂಲ ವ್ಯಕ್ತಿ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಗ್ರಾಹಕ ವ್ಯವಹಾರಗಳ ಕುರಿತು ಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ ಹಾಗೂ ಗ್ರಾಹಕ ಜಾಗೃತಿ ಕುರಿತ ಮತ್ತಿತರ ಸ್ಪರ್ಧೆ, ಮಕ್ಕಳ ಸಂತೆ, ಗ್ರಾಹಕರ ದಿನಾಚರಣೆ ಮುಂತಾದ ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸಬೇಕಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಕೆ.ಕಾಂತರಾಜು ಮಾತನಾಡಿ, ವಿದ್ಯಾರ್ಥಿಗಳು ಗ್ರಾಹಕರ ಹಕ್ಕುಗಳ ಕುರಿತು ವಿಶೇಷವಾದ ಜ್ಞಾನ ಹೊಂದಲು ಶಿಕ್ಷಕರು ಶ್ರಮಿಸಬೇಕು ಎಂದರು.
ಗ್ರಾಹಕರ ವೇದಿಕೆಯ ಗೌರವ ಕೋಶಾಧಿಕಾರಿ ಕೆ.ಎಂ.ಗಿರೀಶ್, ಶಾಲಾ ಗ್ರಾಹಕ ಕ್ಲಬ್‍ಗಳ ಧ್ಯೇಯೋದ್ದೇಶಗಳು ಮತ್ತು ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎ.ಲಕ್ಷ್ಮಣ್ ಮಾತನಾಡಿದರು. ಸಮಗ್ರ ಶಿಕ್ಷಣದ ಉಪ ಯೋಜನಾ ಸಮನ್ವಯಾಧಿಕಾರಿ ಎಂ.ಕೃಷ್ಣಪ್ಪ, ಗ್ರಾಹಕರ ಕ್ಲಬ್ ಗಳ ಜಿಲ್ಲಾ ನೋಡಲ್ ಅಧಿಕಾರಿ ಎಸ್.ಟಿ.ವೆಂಕಟೇಶ್, ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ್, ಬಿಆರ್ ಸಿ ನಳಿನಿ, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಆಯುಕ್ತ ಜಿಮ್ಮಿ ಸಿಕ್ವೇರಾ, ಜಿಲ್ಲಾ ವಿಜ್ಞಾನ ಪರಿಷತ್ತಿನ ಸಹ ಕಾರ್ಯದರ್ಶಿ ಜಿ.ಶ್ರೀಹರ್ಷ, ಬಿಆರ್‍ಪಿ ಕೆ.ಯು.ರಂಜಿತ್, ಉಪನ್ಯಾಸಕ ಎನ್.ಎಸ್.ಚಿದಾನಂದ, ಇತರರು ಇದ್ದರು. ಈ ವೇಳೆ ವಿವಿಧ ಪ್ರೌಢಶಾಲಾ ಮುಖ್ಯಸ್ಥರು ಮತ್ತಿತರರು ಹಾಜರಿದ್ದರು.
No comments
Post a Comment