ಸೂರಿಗಾಗಿ ಸಿಪಿಐ ಪಕ್ಷದಿಂದ ರಾಜ್ಯಾದ್ಯಂತ ಹೋರಾಟ :ಸಾತಿ ಸುಂದರೇಶ್

No comments

ಸಿದ್ದಾಪುರ (Times Of Coorg) : ಸೂರಿಲ್ಲದೆ ಸಂಕಷ್ಟದಲ್ಲಿರುವ ರಾಜ್ಯದ ಸಾಮಾನ್ಯ ವರ್ಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರಕಾರ ವಿಫಲವಾಗಿದ್ದು  ಶಾಶ್ವತ ಸೂರಿಗಾಗಿ ಸಿಪಿಐ ಪಕ್ಷ ರಾಜ್ಯದಾದ್ಯಂತ  ಹೋರಾಟ ನಡೆಸುತ್ತಿರುವದಾಗಿ ಸಿಪಿಐ ಪಕ್ಷದ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ತಿಳಿಸಿದ್ದಾರೆ.


ಸಿದ್ದಾಪುರದ ಎಐಟಿಯುಸಿ ಜಿಲ್ಲಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಸತಿ ರಹಿತರ ಪರವಾಗಿ ಸಿಪಿಐ ಪಕ್ಷದ ವತಿಯಿಂದ “ಸೂರಿಗಾಗಿ ಸಮರ” ಎಂಬ ರಾಜ್ಯದಾದ್ಯಂತ ಹೋರಾಟದ ಭಾಗವಾಗಿ ಫೆಬ್ರುವರಿ ತಿಂಗಳಲ್ಲಿ ಜಾಗೃತಿ ಜಾಥಾಗೆ ಚಾಲನೆ ನೀಡಲಾಗಿತ್ತು. ಜಾಥಾವು ಸುಮಾರು ೮೦೦ ಕಿ.ಮೀ ಸಂಚರಿಸಿದ ನಂತರ ಮಾರ್ಚ್ ೨೩ ರಂದು ಲಾಕ್ ಡೌನ್ ಕಾರಣದಿಂದ ಸ್ಥಗಿತಗೊಂಡಿತ್ತು.


ಕೊಡಗು ಜಿಲ್ಲೆಯಲ್ಲೂ ಪಕ್ಷದಿಂದ ಸೂರಿಗಾಗಿ ಹೋರಾಟ ನಡೆಸುತ್ತಿದ್ದು, ಕೆಲವು ಗ್ರಾಮ ಪಂಚಾಯತಿಗಳ ಮುಂಭಾಗದಲ್ಲಿ ಧರಣಿ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು. ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡ ಸಿದ್ದಾಪುರ ಭಾಗದ ನದಿ ದಡದ ಭಾಗಗಳಿಗೆ ಭೇಟಿ ನೀಡಲಾಗಿದೆ. ನಿರಾಶ್ರಿತರಿಗೆ ಸರಕಾರ ಶಾಶ್ವತ ಪುನರ್ವಸತಿ ಕಲ್ಪಿಸಬೇಕಾಗಿದೆ. ರಾಜ್ಯದಲ್ಲಿ ೩೭ ಲಕ್ಷ ಕುಂಬಗಳಿಗೆ ಮನೆ ಇಲ್ಲವೆಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದ ಅವರು, ರಾಜ್ಯದಲ್ಲಿ ಸುಮಾರು ೫೦ ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ವಾಸಿಸಲು ಮನೆ ಇಲ್ಲ. ಎರಡು ಕೋಟಿ ಜನರು ಸೂರಿಲ್ಲದೆ ಅಂತತ್ರರಾಗಿದ್ದಾರೆ. ವಸತಿ ಹಿತರ ಪರವಾಗಿ ಸಿಪಿಐ ಪಕ್ಷ ನಿರಂತರ ಹೋರಾಟವನ್ನು ನಡೆಸುವುದಾಗಿ ತಿಳಿಸಿದರು.ಪಕ್ಷದ ಕೊಡಗು ಜಿಲ್ಲಾ ಕಾರ್ಯದರ್ಶಿ ಕೆ.ವಿ ಸುನಿಲ್ ಮಾತನಾಡಿ, ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಡಿಗೋಡು ಹಾಗೂ ಗುಹ್ಯ ಭಾಗದ ನದಿ ದಡದ ನಿವಾಸಿಗಳಿಗೆ ಈಗಾಗಲೆ ಜಿಲ್ಲಾಡಳಿತ ಗುರುತಿಸಿರುವ ಕೊಡಗು ಶ್ರೀರಂಗಪಟ್ಟಣದ ಜಾಗವನ್ನು ನಿರಾಶ್ರಿತರಿಗೆ ಹಂಚಬೇಕೆಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ ಸೋಮಪ್ಪ, ವಿರಾಜಪೇಟೆ ಪಟ್ಟಣ ಪಂಚಾಯತಿ ಸದಸ್ಯ ರಜನಿಕಾಂತ್, ಪ್ರಮುಖರಾದ ರಫೀಕ್, ಎನ್. ಮಣಿ, ಆರ್. ಕುಮಾರ್, ಹೆಚ್.ಜಿ ಗೋಪಾಲ ಮತ್ತು ಕೃಷ್ಣ ಇದ್ದರು.

No comments

Post a Comment