ಮಡಿಕೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಮಾಹಿತಿ ಪಡೆದ ಶಾಸಕರಾದ ಅಪ್ಪಚ್ಚುರಂಜನ್
ಮಡಿಕೇರಿ (Times Of Coorg):-ಮಡಿಕೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅವಶ್ಯಕತೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಇಲ್ಲಿನ ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ಹೊರ ಜಿಲ್ಲೆಗೆ ಹೋಗುತ್ತಿದ್ದು, ಈ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ, ಹಾಗಿದ್ದಲ್ಲಿ ಆ ಬಗ್ಗೆ ಸರ್ಕಾರ ತೆಗೆದುಕೊಂಡ ಕ್ರಮವೇನು, ಯಾವಾಗ ಮಂಜೂರು ಮಾಡಲಾಗುವುದು. ಸರ್ಕಾರದಿಂದ ಆಸ್ಪತ್ರೆಗಳಿಗೆ ಯಾವ ಕಂಪನಿಗಳಿಂದ ಔಷಧಿ ಖರೀದಿಸಲಾಗುತ್ತದೆ, ಔಷಧಿ ಖರೀದಿಸಲು ಇರುವ ಮಾನದಂಡವೇನು, ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಯ ಆಸ್ಪತ್ರೆಗಳಿಗೆ ಎಷ್ಟು ಪ್ರಮಾಣದ ಔಷಧಿ ಖರೀದಿಸಲಾಗಿದೆ ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶ್ರೀರಾಮುಲು ಅವರಿಂದ ಮಾಹಿತಿ ಪಡೆದರು.
ಮಡಿಕೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅವಶ್ಯಕತೆ ಬಗ್ಗೆ ಯಾವುದೇ ಮಾಹಿತಿ ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ. ಇಲ್ಲಿನ ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ಹೊರ ಜಿಲ್ಲೆಗೆ ಹೋಗುತ್ತಿರುವ ಬಗ್ಗೆ ಯಾವುದೇ ಮಾಹಿತಿ ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ. 2015-16ನೇ ಸಾಲಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖಾ ವತಿಯಿಂದ ಮಡಿಕೇರಿಯಲ್ಲಿ ಕೊಡಗು
ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಕಾರ್ಯಾರಂಭ ಮಾಡಿದ್ದು, ಅಲ್ಲಿ ಸೂಪರ್ ಸ್ಪೆಷಾಲಿಟಿ ಮತ್ತು ತಜ್ಞತೆವಾರು ಹುದ್ದೆಗಳು ಹಂತ ಹಂತವಾಗಿ ಕಾರ್ಯಾರಂಭವಾಗುತ್ತಿದೆ.
ಕೆಎಸ್‍ಡಿಎಲ್ ಡಬ್ಲ್ಯೂಎಸ್ ಸಂಸ್ಥೆಯಿಂದ ಪ್ರತಿ ವರ್ಷ ರಾಜ್ಯದ ಆರೋಗ್ಯ ಸಂಸ್ಥೆಗಳಿಂದ ಔಷಧಿಗಳ ಬೇಡಿಕೆಯನ್ನು ಆನ್‍ಲೈನ್ ಮೂಲಕ ಸಂಗ್ರಹಿಸಿ ಸ್ಟೇಟ್ ಥೆರಪಿ ಸಮಿತಿಯಲ್ಲಿ ನಿರ್ಧರಿಸಿದ ಔಷಧಿಗಳನ್ನು ನೀಡ್ ಅಸೆಸ್‍ಮೆಂಟ್ ಕಮಿಟಿಯಲ್ಲಿ ಗುರುತಿಸಲಾದ ಪ್ರಮಾಣಕ್ಕೆ ಸಚಿವ ಸಂಪುಟ ಅನುಮೋದನೆ ಪಡೆದು ಕೆಟಿಪಿಪಿ ಅಧಿನಿಯಮ 1999 ಮತ್ತು ನಿಯಮ 2000ದನ್ವಯ ಇ-ಪ್ರೋಕ್ಯೂರ್‍ಮೆಂಟ್‍ನಲ್ಲಿ ರಾಷ್ಟ್ರವ್ಯಾಪ್ತಿ ಟೆಂಡರ್‍ನ್ನು ಪ್ರಚುರ ಪಡಿಸಲಾಗುತ್ತದೆ. ಆ ಟೆಂಡರ್‍ನಲ್ಲಿ ಭಾಗವಹಿಸಿದ ಅರ್ಹ ಸಂಸ್ಥೆಗಳನ್ನು ಟೆಂಡರ್ ಪರಿಶೀಲನಾ ಸಮಿತಿಯಲ್ಲಿ ಗುರುತಿಸಲಾಗುತ್ತದೆ. ನಂತರ ಆರ್ಥಿಕ ಬಿಡ್ ತೆರೆದು ಟೆಂಡರ್ ಅಂಗೀಕಾರ ಪ್ರಾಧಿಕಾರ ಸಮಿತಿಯಲ್ಲಿ ಔಷಧವಾರು ಕಡಿಮೆ ದರ ನಮೂದಿಸಿದ ಸಂಸ್ಥೆಗಳನ್ನು ಆಯ್ಕೆ ಮಾಡಿ ಖರೀದಿ ಆದೇಶವನ್ನು ನೀಡುವ ಮೂಲಕ ಖರೀದಿಸಲಾಗುತ್ತದೆ.
ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ವೇತನ ನೀಡದೆ ಇರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕಳೆದ 5 ತಿಂಗಳಿನಿಂದ ವೇತನ ನೀಡದಿರುವುದಕ್ಕೆ ಕಾರಣವೇನು, ವೇತನ ಯಾವಾಗ ಮಂಜೂರು ಮಾಡಲಾಗುವುದು. ವಿಳಂಬಕ್ಕೆ ಕಾರಣವೇನು ಎಂದು ಶಾಸಕರು ಪ್ರಶ್ನಿಸಿದರು.
ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ಹೊರಗುತ್ತಿಗೆ ನೌಕರರ ವೇತನ ಪಾವತಿಗಾಗಿ 2020ರ ಸೆಪ್ಟೆಂಬರ್, 05 ರಂದು 5.04 ಲಕ್ಷ ಮತ್ತು ಸೆಪ್ಟೆಂಬರ್, 15 ರಂದು ರೂ.7.50 ಲಕ್ಷ ಬಿಡುಗಡೆ ಮಾಡಲಾಗಿರುತ್ತದೆ.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ಸೋಮವಾರಪೇಟೆಗೆ ಏಪ್ರಿಲ್-2020 ರಿಂದ ಸೆಪ್ಟೆಂಬರ್-2020 ರವರೆಗೆ ಅನುದಾನ ಬಿಡುಗಡೆ ಮಾಡಲಾಗಿದೆ.
2020ರ ಏಪ್ರಿಲ್ 21 ರಂದು ರೂ.3,49,000, ಮೇ, 05 ರಂದು 5,04,000, ಜೂನ್, 23 ರಂದು 12,52,000, ಆಗಸ್ಟ್, 05 ರಂದು 5,04,000, ಸೆಪ್ಟೆಂಬರ್, 05 ರಂದು 5,04,000 ಮತ್ತು ಸೆಪ್ಟೆಂಬರ್, 15 ರಂದು 7,50,000 ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.
ಆನ್‍ಲೈನ್ ನಲ್ಲಿ ಬಿಲ್ ಮಾಡಲು ತಾಂತ್ರಿಕ ಸಮಸ್ಯೆ ಇರುವುದರಿಂದ ವೇತನ ನೀಡಲು ತಡವಾಗಿದೆ. ಸದ್ಯದಲ್ಲೆ ಈ ತಾಂತ್ರಿಕ ಸಮಸ್ಯೆಯನ್ನು ನಿವಾರಿಸಿ ಸಿಬ್ಬಂದಿಗಳಿಗೆ ವೇತನ ನೀಡಲಾಗುವುದು ಎಂದು ಸಚಿವರು ಉತ್ತರಿಸಿದರು.

No comments
Post a Comment