ಕೊಡ್ಲಿಪೇಟೆ-ವಿರಾಜಪೇಟೆ ಮಾರ್ಗದ ರಸ್ತೆ ಸರಿಪಡಿಸಲು ಅಪ್ಪಚ್ಚು ರಂಜನ್ ಮನವಿ
ಮಡಿಕೇರಿ (Times Of Coorg):-ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಉಪ ಮುಖ್ಯಮಂತ್ರಿಗಳು ಮತ್ತು ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಗೋವಿಂದ ಎಂ.ಕಾರಜೋಳ ಅವರನ್ನು ಕಳೆದ ಎರಡು ವರ್ಷಗಳಿಂದ ಬಿದ್ದ ಮಳೆಯಾದ ಕೊಡಗು ಜಿಲ್ಲೆ ಕೊಡ್ಲಿಪೇಟೆ, ಮಡಿಕೇರಿ, ವಿರಾಜಪೇಟೆ ಮಾರ್ಗದ ರಾಜ್ಯ ಹೆದ್ದಾರಿ ರಸ್ತೆಯು ಹಾಳಾಗಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ಪ್ರಶ್ನಿಸಿದರು.
ಸರ್ಕಾರದ ಗಮನಕ್ಕೆ ಬಂದಿದೆ ಎಂದು ಅವರು ಸಚಿವರು ಉತ್ತರಿಸಿದರು. ನಂತರ ಗೋವಿಂದ ಎಂ.ಕಾರಜೋಳ ಅವರನ್ನು ಈ ರಸ್ತೆಯನ್ನು ಮರು ಡಾಂಬರೀಕರಣಗೊಳಿಸಲು ಸರ್ಕಾರ ಮೀಸಲಿಟ್ಟರುವ ಅನುದಾನದ ವಿವರ ನೀಡಬೇಕು ಎಂದು ಅಪ್ಪಚ್ಚು ರಂಜನ್‍ರವರು ಕೇಳಿದರು. ಅದಕ್ಕೆ ಉತ್ತರಿಸಿದ ಗೋವಿಂದ ಎಂ.ಕಾರಜೋಳ ಅವರು 2018-19ನೇ ಸಾಲಿನ ಪ್ರಕೃತಿ ವಿಕೋಪದಿಂದ ಕೊಡಗು ಜಿಲ್ಲೆ ಕೊಡ್ಲಿಪೇಟೆ, ಮಡಿಕೇರಿ, ವಿರಾಜಪೇಟೆ ಮಾರ್ಗದ ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿಯಾಗಿದ್ದು, ಕೆಲವು ಭಾಗಗಳು ಕೊಚ್ಚಿಹೋಗಿದ್ದು ಸದರಿ ಭಾಗಗಳನ್ನು ಪುನರ್ ನಿರ್ಮಾಣ ಮಾಡಲಾಗಿದ್ದು, ಅನುದಾನ ಕಾಮಗಾರಿ ಪ್ರಸ್ತುತ ಹಂತದ ವಿವರಗಳನ್ನು ಅನುಬಂಧರಲ್ಲಿ ನೀಡಿದೆ ಹಾಗೂ 2019-20ನೇ ಸಾಲಿನಲ್ಲಿ ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ ಹಾಳಾಗಿರುವ ಆಯ್ದ ಭಾಗಗಳನ್ನು ಅಭಿವೃದ್ಧಿ ಪಡಿಸಲು ಅನುವು ಮಾಡಲಾಗಿದ್ದು ಅನುದಾನ ಕಾಮಗಾರಿ ಪ್ರಸ್ತುತ ಹಂತದ ವಿವರಗಳನ್ನು ಅನುಬಂಧ-2 ರಲ್ಲಿ ನೀಡಿದೆ ಎಂದು ಹೇಳಿದರು.
ಬಳಿಕ ಅಪ್ಪಚ್ಚು ರಂಜನ್ ಅವರು ಕಳೆದ ಮೂರು ವರ್ಷಗಳಿಂದ ಲೋಕೋಪಯೋಗಿ ಇಲಾಖೆ ವತಿಯಿಂದ ನಬಾರ್ಡ್ ಯೋಜನೆಯಡಿಯಲ್ಲಿ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಅನುದಾನ ಬಿಡುಗಡೆಯಾಗಿದೆ ಎಂದು ಗೋವಿಂದ ಎಂ.ಕಾರಜೋಳ ಅವರನ್ನು ಪ್ರಶ್ನಿಸಿದಾಗ, ಅದಕ್ಕೆ ಅವರು 2017-18 ಮತ್ತು 2018-19ರಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಬಾರ್ಡ್ ಯೋಜನೆಯಡಿಯಲ್ಲಿ ಅನುಮೋದನೆಯಾದ ಅನುದಾನದ ವಿವರಗಳನ್ನು ಅನುಬಂಧ-3ರಲ್ಲಿ ನೀಡಿದೆ ಹಾಗು 2019-20ರಲ್ಲಿ ನಬಾರ್ಡ್‍ನಿಂದ ಯಾವುದೇ ಕಾಮಗಾರಿ ಮಂಜೂರಾಗಿರುವುದಿಲ್ಲ ಎಂದು ಉತ್ತರಿಸಿದರು.
ಕೊಡಗು ಜಿಲ್ಲೆಯಲ್ಲಿ ನಬಾರ್ಡ್ ಯೋಜನೆಯಡಿಯಲ್ಲಿ ಸೇರ್ಪಡೆಗೊಂಡ ಪೂರ್ಣಗೊಂಡ ಕಾಮಗಾರಿಗಳು ಯಾವುವು ಎಂದು ಅಪ್ಪಚ್ಚು ರಂಜನ್ ಅವರು ಉಪ ಮುಖ್ಯಮಂತ್ರಿ ಅವರಿಂದ ಮಾಹಿತಿ ಪಡೆದರು. ಕೊಡಗು ಜಿಲ್ಲೆಯಲ್ಲಿ ನಬಾರ್ಡ್ ಯೋಜನೆಯಡಿಯಲ್ಲಿ ಸೇರ್ಪಡೆಗೊಂಡು ಪೂರ್ಣಗೊಂಡ ಕಾಮಗಾರಿಗಳ ವಿವರ ನೀಡಿದೆ ಎಂದು ಉತ್ತರಿಸಿದರು. ನಂತರ ಅಪ್ಪಚ್ಚು ರಂಜನ್‍ರವರು ಬಾಕಿ ಇರುವ ಕಾಮಗಾರಿಗಳು ಪೂರ್ಣಗೊಳ್ಳದಿರಲು ಕಾರಣವೇನು ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಗೋವಿಂದ ಎಂ.ಕಾರಜೋಳರವರು ಕಳೆದ 2 ವರ್ಷಗಳ ಅಕಾಲಿಕ ಮಳೆಯಿಂದಾಗಿ ಕಾಮಗಾರಿಗಳ ಪ್ರಗತಿಯಲ್ಲಿ ವಿಳಂಬವಾಗಿರುತ್ತದೆ ಎಂದು ಹೇಳಿದರು.
ಬಳಿಕ ಕೊಡಗು ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಹಾಯ್ದು ಹೋಗುವ ಕೊಡ್ಲಿಪೇಟೆ, ಸೋಮವಾರಪೇಟೆ, ಮಡಿಕೇರಿ, ವಿರಾಜಪೇಟೆ ಮುಖ್ಯ ರಸ್ತೆ ಮೇಲ್ದರ್ಜೆಗೇರಿಸಲು ಕೇಶಿಫ್ ವತಿಯಿಂದ ಡಿ.ಪಿ.ಆರ್ ಆಗಿದ್ದರೂ ಈವರೆವಿಗೂ ಕಾಮಗಾಋಈ ಮಂಜೂರಾತಿಯಾಗದಿರಲು ಕಾರಣವೇನು ಹಾಗೂ ಈ ಬಗ್ಗೆ ಸರ್ಕಾರ ಅನುದಾನ ಮೀಸಲಿರಿಸಲು ಕೈಗೊಂಡಿರುವ ಕ್ರಮಗಳೇನು ಎಂದು ಅಪ್ಪಚ್ಚು ರಂಜನ್‍ರವರು ಗೋವಿಂದ ಎಂ.ಕಾರಜೋಳರನ್ನು ಪ್ರಶ್ನಿಸಿದಾಗ ಅವರು ಕೇಶಿಫ್ ಪ್ರಸ್ತಾವನೆಯಂತೆ ಪೂರ್ಣ ಆರ್ಥಿಕ ನೆರವು ಎಡಿಬಿ ಯಿಂದ ಒದಗಿ ಬರದ ಕಾರಣ ಹಾಗೂ ಎಡಿಬಿ ಮಾರ್ಗಸೂಚಿಯಂತೆ ಪಿಪಿಪಿ ಮಾದರಿ ಗುತ್ತಿಗೆಗೆ ಅರ್ಹವಾಗದ ಕಾರಣ ಉದ್ದೇಶಿತ ಸದರಿ ರಸ್ತೆ ಅಭಿವೃದ್ಧಿಯನ್ನು ಎಡಿಬಿ ನೆರವಿನ ಕೆಶಿಫ್-3ರಲ್ಲಿ ಅನುಮೋದನೆಗೊಂಡಿರುವುದಿಲ್ಲ, ಆದ್ದರಿಂದ ಸದರಿ ರಸ್ತೆಯನ್ನು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿರುವುದಿಲ್ಲ ಎಂದು ಉತ್ತರಿಸಿದರು.
ಪ್ರಕೃತಿ ವಿಕೋಪ ಮಳೆ ಹಾನಿ ಪರಿಹಾರ ಸಂಬಂಧ ಮಾಹಿತಿ ಪಡೆದ ವೀಣಾ ಅಚ್ಚಯ್ಯ
ಮಡಿಕೇರಿ ಸೆ.24(ಕರ್ನಾಟಕ ವಾರ್ತೆ):-ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ವರ್ಷ ಸುರಿದ ಧಾರಾಕಾರ ಮಳೆ ಹಾಗೂ ಭೂ ಕುಸಿತದಿಂದಾಗಿ ಸುಮಾರು 5 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟ ಸಂಭವಿಸಿ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ, ಬಂದಿದ್ದಲ್ಲಿ ಸರ್ಕಾರ ಮಳೆ ಹಾನಿ ಪರಿಹಾರವಾಗಿ ಇದುವರೆಗೂ ಎಷ್ಟು ಹಣವನ್ನು ಬಿಡುಗಡೆ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಕಂದಾಯ ಸಚಿವರಾದ ಆರ್.ಅಶೋಕ್ ಅವರಿಂದ ಮಾಹಿತಿ ಪಡೆದಿದ್ದಾರೆ.
ಇದಕ್ಕೆ ಉತ್ತರಿಸಿದ ಕಂದಾಯ ಸಚಿವರು ಕೊಡಗು ಜಿಲ್ಲೆಯಲ್ಲಿ 2020-21 ನೇ ಸಾಲಿನಲ್ಲಿ ಭೂಕುಸಿತ ಮತ್ತು ಅತಿವೃಷ್ಟಿಯಿಂದ ಉಂಟಾದ ಹಾನಿಯ ವಿವರ ನೀಡಿದರು. 5 ಮಾನವ ಹಾನಿ, 17 ಜಾನುವಾರು ಹಾನಿ, 342 ಮನೆ ಹಾನಿ, 2 ಗುಡಿಸಲು, 35 ಜಾನುವಾರು ಕೊಟ್ಟಿಗೆ ಹಾನಿ, 41026 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಹಾಗೂ 601.20 ಕೋಟಿಯಷ್ಟು ಮೂಲಭೂತ ಸೌಕರ್ಯ ಹಾನಿಯಾಗಿದೆ ಎಂದರು.
ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿ ಅವರ ಪ್ರಕೃತಿ ವಿಕೋಪ ಪಿಡಿ ಖಾತೆಯಲ್ಲಿ ರೂ.70.76ಕೋಟಿ ಮೊತ್ತ ಲಭ್ಯವಿದೆ. ಬಿಡುಗಡೆಗೊಳಿಸಿದ ಪರಿಹಾರದ ಹಣದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರ ಇದುವರೆಗೂ ಕಲ್ಪಿಸಿರುವ ಪರಿಹಾರ ಕ್ರಮಗಳೇನು ಎಂದು ವೀಣಾ ಅಚ್ಚಯ್ಯ ಅವರು ಪ್ರಶ್ನಿಸಿದರು.
ಇದಕ್ಕೆ ಕಂದಾಯ ಸಚಿವರು ಕೊಡಗು ಜಿಲ್ಲೆಯಲ್ಲಿ 2020-21 ನೇ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ ಸಂಕಷ್ಟದಲ್ಲಿರುವವರಿಗೆ ಇದುವರೆಗೆ ಕಲ್ಪಿಸಲಾಗಿರುವ ಪರಿಹಾರದ ವಿವರ ನೀಡಿದರು.
ಜಿಲ್ಲೆಯ 9 ಕಾಳಜಿ ಕೇಂದ್ರದಲ್ಲಿ ಅತಿವೃಷ್ಟಿ ಸಂದರ್ಭದಲ್ಲಿ ಆಶ್ರಯ ಕಲ್ಪಿಸಿದ 710 ಸಂತ್ರಸ್ತರ ನಿರ್ವಹಣೆಗೆ ರೂ.15.15 ಲಕ್ಷ, ಪ್ರಕೃತಿ ವಿಕೋಪದಿಂದ ಮನೆಯಲ್ಲಿರುವ ದಿನ ನಿತ್ಯ ವಸ್ತುಗಳು ಹಾನಿಯಾದ 82 ಸಂತ್ರಸ್ತ ಕುಟುಂಬಗಳಿಗೆ ತಲಾ ರೂ.10 ಸಾವಿರದಂತೆ ಪರಿಹಾರಕ್ಕೆ ರೂ.8.20 ಲಕ್ಷ, ಭಾಗಮಂಡಲದಲ್ಲಿ ರಕ್ಷಣಾ ಮತ್ತು ಶೋಧನ ಕಾರ್ಯಚರಣೆಗೆ ವೆಚ್ಚ ರೂ.15.96 ಲಕ್ಷ, ಭಾರಿ ಮಳೆ ಸಂದರ್ಭ ಪರಿಶಿಷ್ಟ ಪಂಗಡದ 343 ಕುಟುಂಬದವರಿಗೆ ಟಾರ್ಪಲ್ ವಿತರಿಸಿದ ವೆಚ್ಚ 6.71 ಲಕ್ಷ ರೂ.,
2020-21ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಹಾನಿಯಾದ ‘ಎ’ ವರ್ಗದ ಮನೆಗಳಿಗೆ ರೂ.5 ಲಕ್ಷ, ಬಿ ವರ್ಗದ ಮನೆಗಳಿಗೆ ರೂ.3 ಲಕ್ಷ, ಸಿ ವರ್ಗದ ಮನೆಗಳಿಗೆ ರೂ.50 ಸಾವಿರ, ಕೊಟ್ಟಿಗೆ ಹಾನಿಗೆ ರೂ.2,100, ಗುಡಿಸಲು ಹಾನಿಗೆ ರೂ.4,100 ಗಳ ಪರಿಹಾರ ವಿತರಣೆಗೆ ಮತ್ತು ಬೆಳೆ ಹಾನಿ ನಷ್ಟ ಪರಿಹಾರ ವಿತರಣೆ ಸಂಬಂಧ ಸಮೀಕ್ಷೆ ಪ್ರಗತಿಯಲ್ಲಿದ್ದು, ನಿಯಾಮನುಸಾರ ಪರಿಹಾರ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಕಂದಾಯ ಸಚಿವರಾದ ಆರ್.ಅಶೋಕ್ ಅವರು ಮಾಹಿತಿ ನೀಡಿದರು.

No comments
Post a Comment