ಫೇಸ್ಬುಕ್ ಫೇಕ್ ಖಾತೆಗಳಿಂದ ವಂಚನೆ : ಸಾಮಾಜಿಕ ಜಾಲತಾಣ ಬಳಕೆದಾರರು ಎಚ್ಚರಿಕೆ ವಹಿಸುವಂತೆ ಕೊಡಗು ಪೋಲಿಸ್ ಮನವಿ
ಮಡಿಕೇರಿ (Times Of Coorg) : ಇತ್ತೀಚಿನ ದಿನಗಳಲ್ಲಿ ಪೊಲೀಸ್ ಅಧಿಕಾರಿಗಳ ಫೇಸ್ಬುಕ್ ಖಾತೆಗಳಿಂದ ಸಮವಸ್ತ್ರದಲ್ಲಿರುವ ಭಾವಚಿತ್ರಗಳನ್ನು ಡೌನ್ಲೋಡ್ ಮಾಡಿಕೊಂಡು ಪೊಲೀಸ್ ಅಧಿಕಾರಿಯ ಹೆಸರು, ಸಮವಸ್ತ್ರದಲ್ಲಿರುವ ಭಾವಚಿತ್ರವನ್ನು ಬಳಸಿ ನಕಲಿ ಖಾತೆ ತೆರೆದು, ಅಸಲಿ ಖಾತೆಯಲ್ಲಿರುವ ಫೇಸ್ಬುಕ್ ದಾರರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದು, ಇಂತಹ ನಕಲಿ ಖಾತೆಯ ಸತ್ಯಾಸತ್ಯತೆ ಅರಿಯದ ಫೇಸ್ಬುಕ್ ಬಳಕೆದಾರರು ರಿಕ್ವೆಸ್ಟ್ ಸ್ವೀಕರಿಸಿ ಸ್ನೇಹಿತರಾಗುತ್ತಾರೆ. ತದನಂತರದಲ್ಲಿ messenger ಮೂಲಕ ಆರ್ಥಿಕ ಸಂಕಷ್ಟದಲ್ಲಿರುವಂತೆ ಭಾವನಾತ್ಮಕ ಸಂದೇಶ ಕಳುಹಿಸಿ ತಕ್ಷಣ ಹಣ ವರ್ಗಾಯಿಸುವಂತೆ ಕೋರಿ, ಮರಳಿ ನೀಡುವುದಾಗಿ ಭರವಸೆ ನೀಡಿ ಹಣ ಪಡೆದು ನಂತರ ವಂಚಿಸುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಆದರೆ ಯಾವುದೇ ಸಂದರ್ಭದಲ್ಲಿಯೂ ಸಹ ಪೊಲೀಸ್ ಅಧಿಕಾರಿಗಳು ಈ ರೀತಿಯಲ್ಲಿ ಹಣವನ್ನು ಕೇಳುವುದಿಲ್ಲ. ಆದ್ದರಿಂದ ಈ ರೀತಿ ವಂಚಿಸುವ ಸೈಬರ್ ವಂಚಕರ ಬಗ್ಗೆ ಪೇಸ್ಬುಕ್ ಹಾಗು ಯಾವುದೇ ಸಾಮಾಜಿಕ ಜಾಲತಾಣದ ಬಳಕೆದಾರರು ಎಚ್ಚರಿಕೆ ವಹಿಸಬೇಕು. ಸಾಮಾಜಿಕ ಜಾಲತಾಣದ ಮೂಲಕ ಯಾವುದೇ ವ್ಯವಹಾರಗಳನ್ನು ನಡೆಸುವ ಸಂದರ್ಭದಲ್ಲಿ ಸತ್ಯಾಸತ್ಯತೆಯನ್ನು ತಿಳಿದುಕೊಂಡು ವ್ಯವಹರಿಸುವಂತೆಯೂ ಹಾಗು ಸತ್ಯಾಸತ್ಯೆಯನ್ನು ಅರಿಯದೆ ಯಾವುದೇ ಕಾರಣಕ್ಕೂ ಹಣ ವರ್ಗಾಯಿಸಿದಲ್ಲಿ ವಂಚನೆಗೊಳಗಾಗಬೇಕಾಗುತ್ತದೆ. ಆದ್ದರಿಂದ ಸಾಮಾಜಿಕ ಜಾಲತಾಣವನ್ನು ಬಳಸುವ ಪ್ರತಿಯೊಬ್ಬರೂ ಸಹ ಅತ್ಯಂತ ಜಾಗರೂತಕೆಯಿಂದ ಇರಲು ಕೋರಿದೆ.
ಯಾವುದೇ ಕಾರಣಕ್ಕೂ ಯಾವುದೇ ಪೊಲೀಸ್/ಸರ್ಕಾರಿ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಾದ facebook, instagram ಮತ್ತು messenger ಮೂಲಕ ಆರ್ಥಿಕ ನೆರವು ಬಯಸುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ ಸಾರ್ವಜನಿಕ ಸಂಪರ್ಕಾಧಿಕಾರಿ,
ಜಿಲ್ಲಾ ಪೊಲೀಸ್ ಕಛೇರಿ ತಿಳಿಸಿದೆ.

No comments
Post a Comment