ರಾಜಾರೋಷವಾಗಿ ನಡೆಯುತ್ತಿದೆ ಮೀನು ಮಾರಾಟ ದಂಧೆ...!

No comments
ಸದ್ದಿಲ್ಲದೆ ಕೊಡಗಿಗೆ ಬಂದು ಬೀಳುತ್ತಿದೆ ಲೋಡುಗಟ್ಟಲೆ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಕಾಟ್ಲಾಮೀನುಗಳು

ವರದಿ : ರಂಜಿತ್ ಕವಲಪಾರ
SPECIAL REPORT (Times Of Coorg) :  ಕೊಡಗು ಜಿಲ್ಲಾಡಳಿತ ಅವಕಾಶ ನೀಡಿರುವುದು ಕೇವಲ ಸ್ಥಳೀಯ ಮೀನು ಮಾರಾಟಕ್ಕೆ ಮಾತ್ರ‌. ಆದರೆ ಆಂದ್ರಪ್ರದೇಶದ, ಹಾಸನ ಮುಂತಾದ ಕಡೆಗಳಿಂದ ಸದ್ದಿಲ್ಲದೆ ಮೀನುಗಳು ಐಸ್ಪ್ಲಾಕಿಂಗ್ ನೊಂದಿಗೆ, ವಾರಗಟ್ಟಲೆ ಕೊಳೆಯದ ಹಾಗೆ ಅಪಾಯಕಾರಿ ರಾಸಾಯನಿಕವನ್ನು ಹೊತ್ತುಕೊಂಡು ಕೊಡಗಿನ ಮೀನು ಪೇಟೆ ಎಂದು ಖ್ಯಾತಿಗೊಂಡಿರುವ ಸಿದ್ದಾಪುರ ಹಾಗು ನೆಲ್ಲಿಹುದಿಕೇರಿಗೆ ಬರುತ್ತದೆ.

 ಆ ಮೀನುಗಳನ್ನು ಅಲ್ಲಿಂದ ಅಚ್ಚುಕಟ್ಟಾಗಿ ಕೊಡಗಿನ ಮೂಲೆ ಮೂಲೆಗಳಿಗೆ ಸರಬರಾಜು ಮಾಡಲಾಗುತ್ತದೆ, ಅದರಲ್ಲೂ  ದಕ್ಷಿಣ ಕೊಡಗಿನ ವಿರಾಜಪೇಟೆ, ಗೋಣಿಕೊಪ್ಪಲಿನಲ್ಲಿ ಯಥೇಚ್ಛವಾಗಿ ಅದೇ ಮೀನುಗಳು ಮಾರಾಟವಾಗುತ್ತದೆ. ಅಲ್ಲಿಂದ ಅವುಗಳು ಗ್ರಾಹಕರ ಮನೆಗೆ, ಹೊಟ್ಟೆಗೆ ಸೇರಿಕೊಳ್ಳುತ್ತಿದೆ. ಎಸ್ ... ಇಂತಹ ಸ್ಫೋಟಕ ಮಾಹಿತಿಯನ್ನು ಕೆಲ ಸ್ಥಳೀಯ ನಾಗರಿಕರು ಮಾದ್ಯಮದೊಂದಿಗೆ ಹಂಚಿಕೊಂಡಿದ್ದಾರೆ. ಜಿಲ್ಲಾಡಳಿತ ನಿಗದಿಪಡಿಸಿರುವ ಬೆಲೆ 200ರಿಂದ ಮುಂದುವರೆದು 240ರ ಬೆಲೆಗೆ ಇದೇ ಮೀನುಗಳು ಕೊಡಗಿನಾದ್ಯಂತ ಸದ್ದಿಲ್ಲದೆ ಮಾರಾಟವಾಗುತ್ತಿದೆ. ಹೀಗೆ ಲೋಡುಗಟ್ಟಲೆ ಬರುವ ಮೀನುಗಳನ್ನು ಸ್ಥಳೀಯರ ಮಾಹಿತಿಯ ಪ್ರಕಾರ ಸುಮಾರು ಒಂದುವಾರಕ್ಕು ಹೆಚ್ಚುಕಾಲ ಐಸ್ ಕ್ಯೂಬ್'ಗಳು ಹಾಗು ವಿಷಕಾರಿ ರಾಸಾಯನಿಕಗಳನ್ನು ಬಳಸಿಕೊಂಡು ಕೊಳೆಯದಂತೆ ಸಂರಕ್ಷಿಸಿ ಅಮಾಯಕ ಜನತೆಗೆ ಮಾರಾಟ ಮಾಡಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ಕೊರೋನ ಹೋದ ನಂತರದಲ್ಲಿ ಈ ವಿಷಕಾರಿ ರಾಸಾಯನಿಕವನ್ನು ಒಳಗೊಂಡ ಮೀನಿನಿಂದ ಮತ್ಯಾವುದೋ ಹೊಸ ರೋಗ ಮನುಷ್ಯರ ದೇಹಸೇರಿ ಹೊಸ ತಲೆನೋವು ಉಂಟಾಗುವ ಅಪಾಯ ಇದ್ದೇ ಇದೆ.

      ಇಷ್ಟೊಂದು ಕಟ್ಟು ನಿಟ್ಟಿನ ಗಡಿಕಾವಲು ಪಡೆಯನ್ನು ವಂಚಿಸಿ ಅದ್ಹೇಗೆ? ಗಡಿದಾಟಿ ಟನ್'ಗಟ್ಟಲೆ‌ ಮೀನು ಒಳನುಸುಳುತ್ತಿದೆ? ಎನ್ನುವ ರಹಸ್ಯವನ್ನು ಜಿಲ್ಲಾಡಳಿತ ಭೇದಿಸಿ ಜನರನ್ನು ಮುಂಬರುವ ಅಪಾಯದಿಂದ ತುರ್ತಾಗಿ ಪಾರು ಮಾಡಬೇಕಿದೆ.

     ಸ್ಥಳೀಯ ಮೀನು ಮಾರಾಟದ ಹೆಸರಿನಲ್ಲಿ ನಡೆಯುತ್ತಿರುವ ಈ ದಂಧೆಗೆ ಕಡಿವಾಣ ಹಾಕಬೇಕಿದೆ. 

     ಜಿಲ್ಲಾಡಳಿತ ಶೀಘ್ರವಾಗಿ ಈ ವಿಷಯವಾಗಿ ಕಾರ್ಯೋನ್ಮುಖವಾಗಿ ಈ ಮೀನು ಮಾರಾಟದ ಸಂಪೂರ್ಣ ಜವಾಬ್ದಾರಿಯನ್ನು' ಕರ್ನಾಟಕ ರಾಜ್ಯ ಮೀನು ಮಾರಾಟ ಮಹಾಮಂಡಳಿಗೆ' ಒಪ್ಪಿಸಿ ಅವರ ಮೂಲಕ ಜಿಲ್ಲೆಯ ವಿವಿಧೆಡೆಯಲ್ಲಿರುವ ಸರಕಾರದ ಅಧೀನದ ಮಾರಾಟ ಮಳಿಗೆಗಳಲ್ಲಿ ಹಾಗು ನಿಜವಾದ ಸ್ಥಳೀಯ ಮೀನು ಮಾರಾಟಗಾರಿಗೆ ಮಾತ್ರ ಮಾರಾಟಕ್ಕೆ ಅವಕಾಶ ಕೊಡುವುದು ಉತ್ತಮ ಹಾಗು ಹೀಗೆ ಹೊರಗಿಂದ ಅಕ್ರಮವಾಗಿ ಒಳನುಸುಳುತ್ತಿರುವ ಅಪಾಯಕಾರಿ ಕಾಟ್ಲಮೀನುಗಳನ್ನು, ಅದನ್ನು ಸಾಗಿಸುತ್ತಿರುವ ಅಪಾಯಕಾರಿ ಮನುಷ್ಯ ತಿಮಿಂಗಿಲಗಳ ಜಾಲವನ್ನು ಜನತೆಯ ಹಿತದೃಷ್ಟಿಯಿಂದ ಸದೆಬಡಿಯಬೇಕಿದೆ. ಆ ಮೂಲಕ ಸ್ಥಳೀಯ ಪ್ರಾಮಾಣಿಕ ಮೀನು ಕೃಷಿಕರಿಗೆ ಬೆಂಬಲ ನೀಡಬೇಕಿದೆ.

No comments

Post a Comment