ಸಾಮೂಹಿಕ ನಮಾಝ್ ಪ್ರಾರ್ಥನೆ ನಿರ್ಬಂಧ : ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ವಕ್ಫ್ ಅಧಿಕಾರಿ

No comments
ಮಡಿಕೇರಿ (Times Of Coorg) : ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕು ಹರಡುವಿಕೆ ಹಿನ್ನಲೆಯಲ್ಲಿ ಏಪ್ರಿಲ್ 24 ಅಥವಾ 25 ರಂದು ಪವಿತ್ರ ರಂಜಾನ್ ಹಬ್ಬವು ಪ್ರಾರಂಭವಾಗಲಿರುವುದರಿಂದ ಮೇ 03 ರ ವರೆಗೆ ಜಿಲ್ಲೆಯ ಮಸೀದಿ, ಮದರಸ ಮತ್ತು ದರ್ಗಾಗಳಲ್ಲಿ ರಂಜಾನ್ ಕುರಿತು ಯಾವುದೇ ಸಹರಿ, ಇಫ್ತಿಯಾರ್ ಕೂಟ, ತರಾವೀಹ್ ನಮಾಜ್, ಶುಕ್ರವಾರದ ಪ್ರಾರ್ಥನೆಯನ್ನು ಒಳಗೊಂಡಂತೆ ದೈನಂದಿನ ಸಾಮೂಹಿಕ ನಮಾಝ್ ಪ್ರಾರ್ಥನೆ ನಿರ್ಬಂಧಿಸಬೇಕೆಂದು ಈ ಮೂಲಕ ನಿರ್ದೇಶನ ನೀಡಲಾಗಿದೆ. ಆದ್ದರಿಂದ ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳ ಆಡಳಿತ ಮಂಡಳಿಗಳು ಸಾರ್ವಜನಿಕ ಆರೋಗ್ಯ ಹಿತ ದೃಷ್ಟಿಯಿಂದ ಈ ಆದೇಶವನ್ನು ಚಾಚು ತಪ್ಪದೆ ಪಾಲಿಸಲು ಸೂಚಿಸಿದೆ. 

     ಕೊರೊನಾ ಸೋಂಕಿನ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಸಾರ್ವಜನಿಕರು ಚಾಚು ತಪ್ಪದೆ ಪಾಲಿಸಬೇಕೆಂದು ಕೊಡಗು ಜಿಲ್ಲಾ ವಕ್ಪ್ ಸಲಹಾ ಸಮಿತಿ ವಕ್ಫ್ ಅಧಿಕಾರಿ ಆದೇಶಿಸಿದ್ದಾರೆ. 

     ಜೊತೆಗೆ ರಂಜಾನ್ ಆಚರಣೆಗಾಗಿ 6 ಹೊಸ ಮಾರ್ಗ ಸೂಚಿಗಳನ್ನು ಸಹ ನೀಡಲಾಗಿದೆ. ಮಾಸಾಚರಣೆ ವೇಳೆಯಲ್ಲಿ ಮಸೀದಿ, ಮದರಸ ಮತ್ತು ದರ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಶುಕ್ರವಾರದ ನಮಾಜ್ ಮತ್ತು ತರಾವೀಹ್ ನಮಾಜ್ ಮಾಡುವಂತಿಲ್ಲ, ಮಸೀದಿಯ ಹೊರಗಡೆ ಸ್ವಂತ ಕಟ್ಟಡಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡುವಂತಿಲ್ಲ, ತಮ್ಮ ತಮ್ಮ ಮನೆಗಳಲ್ಲಿ ಮನೆಯ ಸದಸ್ಯರೊಂದಿಗೆ ಆದಷ್ಟು ಬೇಗನೆ ಕಡಿಮೆ ಸಮಯದಲ್ಲಿ ಪ್ರಾರ್ಥನೆ ಮಾಡಬೇಕು. ಧ್ವನಿವರ್ಧಕಗಳ ಮೂಲಕ ಕಡಿಮೆ ಶಬ್ದದಲ್ಲಿ ಅಝಾನ್ ಕೊಡತಕ್ಕದ್ದು. ಮಸೀದಿಯ ಪೇಶ್ ಇಮಾಮ್ ಅಥವಾ ಮಾಜನ್ ಅವರು ಸಹಿ ಹಾಗೂ ಇಫ್ತಿಯಾರ್ ಸಮಯವನ್ನು ಕಡಿಮೆ ಧ್ವನಿಯಲ್ಲಿ ತಿಳಿಸತಕ್ಕದ್ದು, ಸಹರಿ ಮತ್ತು ಇಪ್ತಿಯಾರ್ ಕೂಟವನ್ನು ಆಯೋಜಿಸುವಂತಿಲ್ಲ. ಮಸೀದಿ ಮತ್ತು ಮೊಹಲ್ಲಾಗಳಲ್ಲಿ ತಂಪು ಪಾನೀಯ-ಗಂಜಿ ವಿತರಿಸುವಂತಿಲ್ಲ, ಮಸೀದಿ ಮತ್ತು ದರ್ಗಾಗಳ ಸುತ್ತ ಮುತ್ತ ಯಾವುದೇ ಉಪಹಾರದ ಅಂಗಡಿಗಳನ್ನು ತೆರೆಯಲು ನಿಷೇಧಿಸಲಾಗಿದೆ. ಈ ಆದೇಶಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲರೂ ಪರಿಪಾಲಿಸಬೇಕಾಗಿ ಕೊಡಗು ಜಿಲ್ಲಾ ವಕ್ಪ್ ಸಲಹಾ ಸಮಿತಿ ವಕ್ಫ್ ಅಧಿಕಾರಿ ವಿನಂತಿಸಿಕೊಂಡಿದ್ದಾರೆ.

No comments

Post a Comment