ವರದಿ : ಮುಸ್ತಫಾ ಸಿದ್ಧಾಪುರ
ಸಿದ್ದಾಪುರ (Times Of Coorg): ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಲಾಕ್ ಡೌನ್ ಮಾಡಿರುವುದರಿಂದ ಜನರು ಮನೆಯಿಂದ ಹೊರಗೆ ಬಾರದಂತೆ ಕೊಡಗು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮನೆಯಲ್ಲಿರುವವರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಸಲುವಾಗಿ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯತಿಯು ಸ್ವಯಂ ಸೇವಕರ ಮೂಲಕ ರಿಯಾಯಿತಿ ದರದಲ್ಲಿ ತರಕಾರಿಗಳು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥಿತ ರೀತಿಯ ಕ್ರಮ ಕೈಗೊಳ್ಳಲಾಗಿದೆ. ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ವಾರ್ಡ್ ಗಳಿಗೆ ಇಲ್ಲಿಯ ಸ್ವಯಂ ಸೇವಕರು ಯಾವುದೇ ಸಂಭಾವನೆ ಪಡೆಯದೆ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಆದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಲ್ನೂರು ಭಾಗದಲ್ಲಿ ತರಕಾರಿ ಮಾರಾಟಕ್ಕೆ ವಾರ್ಡಿನ ಸದಸ್ಯ ಭುವೇಂದ್ರ ತಡೆ ಒಡ್ಡಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.
ವಾರದ ಮೂರು ದಿನಗಳಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಲು ಬೆಳಿಗ್ಗೆ 6 ರಿಂದ 12 ರ ವರೆಗೆ ನಿಷೇಧಾಜ್ಞೆ ಸಡಿಲಿಕೆ ಮಾಡುವುದರಿಂದ ವಾಹನ ಇರುವವರು ಹತ್ತಿರದ ಪಟ್ಟಣಗಳಿಗೆ ತೆರಳಿ ವಸ್ತುಗಳನ್ನು ಖರೀದಿಸುತ್ತಾರೆ. ಆದರೆ ಕಾರ್ಮಿಕರು ಹಾಗೂ ಬಡವರು ಅಗತ್ಯ ವಸ್ತುಗಳಿಗಾಗಿ ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಹಾಗಾಗಿ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮದ ಸ್ವಯಂ ಸೇವಕರ ಮೂಲಕ ಬಡವರ ಮನೆ ಬಾಗಿಲಿಗೆ ವಾಹನದ ಮೂಲಕ ರಿಯಾಯಿತಿ ದರದಲ್ಲಿ ತರಕಾರಿ ಪೂರೈಸಲಾಗುತ್ತಿದೆ. ಆದರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಭುವೇಂದ್ರ ಮಾರಾಟಕ್ಕೆ ತೊಂದರೆ ನೀಡುತ್ತಿರುವುದರಿಂದ ಬಡವರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯ ಸಲೀಮ್ ಆರೋಪಿಸಿದ್ದಾರೆ.
ಜನರು ಮನೆಯಿಂದ ಹೊರಗೆ ಬರುವುದನ್ನು ತಡೆಯುವ ಸಲುವಾಗಿ ಗ್ರಾಮ ಪಂಚಾಯತಿ ಮೂಲಕ ವಾಹನದ ಮುಖಾಂತರ ಮನೆ ಮನೆಗೆ ತರಕಾರಿಗಳನ್ನು ಸ್ವಯಂ ಸೇವಕರ ಸಹಾಯದೊಂದಿಗೆ ತಲುಪಿಸಲಾಗುತ್ತಿದೆ. ಇದಕ್ಕೆ ಸ್ವಯಂ ಸೇವಕರು ಯಾವುದೇ ಸಂಭಾವನೆ ಪಡೆಯುತ್ತಿಲ್ಲ. ಆದರೆ ಕೆಲವು ಸದಸ್ಯರು ಸ್ವಯಂ ಸೇವಕರಲ್ಲಿ ಮುಸಲ್ಮಾನರು ಇರುವುದರಿಂದ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಾರಾಟ ಮಾಡುತ್ತಿರುವವರು ರಾಜಕೀಯ ಪಕ್ಷದ ಕಾರ್ಯಕರ್ತರು ಎನ್ನುತ್ತಿದ್ದಾರೆ. ಈ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲೇ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಸ್ವಯಂ ಸೇವಕರಿಗೆ ಮಾಹಿತಿ ನೀಡುವ ಮೂಲಕ ಗ್ರಾಮ ಪಂಚಾಯತಿಯಲ್ಲಿ ಸಭೆ ನಡೆಸಲಾಗಿತ್ತು. ಆದರೆ ಇದರಲ್ಲಿ ಸಹಕಾರ ನೀಡದವರು ಹಾಗೂ ಗ್ರಾಮ ಪಂಚಾಯತಿ ಸದಸ್ಯ ಈ ವಿಚಾರವಾಗಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಈಗಾಗಲೇ ಮೇಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿರುವುದಾಗಿ ಗ್ರಾಮ ಪಂಚಾಯತಿ ಪಿಡಿಓ ಅನಿಲ್ ಕುಮಾರ್ ತಿಳಿಸಿದ್ದಾರೆ.
ತರಕಾರಿ ಹಾಗೂ ಹಣ್ಣುಗಳು ಕಡಿಮೆ ಬೆಲೆಯಲ್ಲಿ ಸಿಗುವಂತೆ ಗ್ರಾಮ ಪಂಚಾಯತಿ ಕ್ರಮ ಕೈಗೊಂಡಿದ್ದರು. ನಮಗೆ ಸರಿಯಾಗಿ ಕೆಲಸ ಇಲ್ಲದೆ ಹಲವು ದಿನಗಳು ಕಳೆದಿದೆ. ಹತ್ತಿರದ ಪಟ್ಟಣಗಳಿಗೆ ತೆರಳಲು ವಾಹನದ ವ್ಯವಸ್ಥೆ ಕೂಡಾ ಇಲ್ಲ. ಹಾಗಾಗಿ ಗ್ರಾಮ ಪಂಚಾಯತಿ ಮೂಲಕ ಮಾರಾಟ ಮಾಡುತ್ತಿದ್ದ ತರಕಾರಿ ಮಾರಾ
ಟವನ್ನು ಮುಂದುವರಿಸಬೇಕು. ಇದನ್ನು ವಿರೋಧಿಸುವವರಿಗೆ ನಮ್ಮ ಹಸಿವಿನ ಬಗ್ಗೆ ಗೊತ್ತಿಲ್ಲ. ಗ್ರಾಮದಲ್ಲಿ ಶಾಂತಿ ಕದಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಹಾಗೂ ಗ್ರಾಮ ಪಂಚಾಯತಿ ಹಾಗೂ ಸರಕಾರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ವಾಲ್ನೂರು ಗ್ರಾಮದ ಪ್ರಮುಖರಾದ ಚಂದ್ರು, ರೂಪ, ಲಕ್ಷ್ಮಿ, ಮಲ್ಲಿಗೆ ಸೇರಿದಂತೆ ಮತ್ತಿತರರು ಒತ್ತಾಯಿಸಿದ್ದಾರೆ.
ವಾಲ್ನೂರು ವಾರ್ಡಿನಲ್ಲಿ ಗ್ರಾಮ ಪಂಚಾಯತಿ ಮೂಲಕ ತರಕಾರಿ ಮಾರಾಟ ಮಾಡಲು ಅವಕಾಶ ಕಲ್ಪಿಸಬಾರದೆಂದು ಒತ್ತಾಯಿಸಿ ಗ್ರಾಮ ಪಂಚಾಯತಿ ಸದಸ್ಯ ಭುವೇಂದ್ರ ನೇತೃತ್ವದಲ್ಲಿ ಕೆಲವರು ಗ್ರಾಮ ಪಂಚಾಯತಿ ಮುಂದೆ ಜಮಾಯಿಸಿದ ಘಟನೆಯೂ ನಡೆಯಿತು. ಈ ಸಂದರ್ಭ ಸಿದ್ದಾಪುರ ಪಿ.ಎಸ್.ಐ ಬೋಜಪ್ಪ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಅಗತ್ಯ ಕ್ರಮ ಕೈಗೊಂಡಿದ್ದಾರೆ.
No comments
Post a Comment