ಲಾಕ್ ಡೌನ್: ನಿರಾಶ್ರಿತ ಕುಟುಂಬಗಳಿಗೆ ದಿನಸಿ ಪದಾರ್ಥಗಳ ವಿತರಣೆ

No comments
ಸಿದ್ದಾಪುರ (Times Of Coorg), ಏ.20: ಲಾಕ್ ಡೌನ್ ನಿಂದಾಗಿ ಕೂಲಿ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ನಿರಾಶ್ರಿತ ಕುಟುಂಬಗಳಿಗೆ ಕರ್ನಾಟಕ ಜನಶಕ್ತಿ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ವತಿಯಿಂದ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು.

ನಿವೇಶನ ರಹಿತರು ಶಾಶ್ವತ ನಿವೇಶನಕ್ಕಾಗಿ ಹೋರಾಟ ನಡೆಸುತ್ತಿರುವ ವಿರಾಜಪೇಟೆಯ ಬಾಳುಗೋಡು, ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಮತ್ತು ಮೂರ್ನಾಡು ಪಕ್ಕದ ಪಾಲೇಮಾಡು ಸೇರಿದಂತೆ ವಿವಿಧೆಡೆಯ ನಿರಾಶ್ರಿತ ಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನು ವಿತರಿಸಲಾಯಿತು.
ದಾನಿಗಳಾದ ಲಕ್ಷ್ಮಿ ನಾರಾಯಣ ಮತ್ತು ಸಬೀನ ಕುಟುಂಬದ ಸದಸ್ಯರು ನೀಡಿದ ದನ ಸಹಾಯದಿಂದ ಕರ್ನಾಟಕ ಜನಶಕ್ತಿಯ ಮಲ್ಲಿಗೆ ಸಿರಿಮನೆ, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೂರ್ ಶ್ರೀಧರ್ ಹಾಗೂ ಹೇಮಂತ್ ಸುಖದೇವ್ ಸಹಕಾರದೊಂದಿಗೆ ನಿರಾಶ್ರಿತ ಆದಿವಾಸಿ, ದಲಿತ, ಅಲ್ಪಸಂಖ್ಯಾತ ಕುಟುಂಬಗಳಿಗೆ ಜಿಲ್ಲೆಯ ಪ್ರಮುಖರು ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದರು.


ಹಳ್ಳಿಗಟ್ಟುವಿನ ತಾಯಮ್ಮ ಮಾತನಾಡಿ, ಸರಕಾರ ಎರಡು ತಿಂಗಳ 10 ಕೆ.ಜಿ ಅಕ್ಕಿ ಹಾಗೂ ಕುಟುಂಬಕ್ಕೆ 4 ಕೆ.ಜೆ ಗೋಧಿ ಮಾತ್ರ ನೀಡಿದ್ದು ಇದರಿಂದ ಮಾತ್ರ ಬದುಕಲು ಸಾಧ್ಯವಿಲ್ಲ. ಲಾಕ್ ಡೌನ್ ಘೋಷಣೆಯ ನಂತರ ಕೂಲಿ ಇಲ್ಲದೆ ಸಂಕಷ್ಟದ ಜೀವನ ನಡೆಸುತ್ತಿದೆ. ಕೂಲಿ ಇಲ್ಲದ ಪರಿಣಾಮ ಇತರೆ ಅಗತ್ಯ ದಿನಸಿ ಪದಾರ್ಥಗಳನ್ನು ಕೊಂಡುಕೊಳ್ಳಲು ಪರದಾಡುವಂತಾಗಿದೆ. ಮಕ್ಕಳು, ಗರ್ಭಿಣಿಯರು, ವೃದ್ಧರು ಸಮಸ್ಯೆಗೆ ಸಿಲುಕಿಕೊಂಡಿದೆ. ಸರಕಾರ ಪೌಷ್ಟಿಕ ಆಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪ್ರಮುಖರಾದ ಪಾಲೇಮಾಡು ಮೊಣ್ಣಪ್ಪ, ರಂಜಿತ್ ಮೌರ್ಯ, ತಾಯಮ್ಮ, ಮುಸ್ತಫ, ಅಶ್ವಿನಿ, ರೆಜಿತ್ ಕುಮಾರ್, ಸಿದ್ದು, ಸುಬ್ರಮಣಿ ಮತ್ತಿತರರು ಇದ್ದರು.

No comments

Post a Comment