ವ್ಯಕ್ತಿ ನಿಗೂಢ ನಾಪತ್ತೆ: ಹೆಚ್ಚುತ್ತಿರುವ ಅನುಮಾನ ‌|| 4 ದಿನಗಳಾದರೂ ಸುಳಿವಿಲ್ಲ: ತೀವ್ರ ಆತಂಕದಲ್ಲಿ ಮನೆಯವರು

No comments
         ಪೊನ್ನಂಪೇಟೆ: ಎತ್ತೊಂದನ್ನು  ಖರೀದಿಸಲು ತೆರಳಿದ್ದ ವ್ಯಕ್ತಿಯೊಬ್ಬರು ಕಳೆದ ನಾಲ್ಕು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಈ ಕುರಿತು ಎಲ್ಲೆಡೆ ಹುಡುಕಾಡಿದರೂ ಯಾವುದೇ ಸುಳಿವು ಲಭಿಸದಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. 

ವಿರಾಜಪೇಟೆ ಸಮೀಪದ ಬೇಟೋಳಿ ಗುಂಡಿಕೆರೆ ನಿವಾಸಿಯಾಗಿದ್ದ, 65 ವರ್ಷ ಪ್ರಾಯದ ಎಂ.ಎಂ.ಮೂಸ ಎಂಬುವರೇ ಕಳೆದ ನಾಲ್ಕು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವ ವ್ಯಕ್ತಿಯಾಗಿದ್ದಾರೆ. ಇವರು ಕಾಣೆಯಾಗಿರುವ ಕುರಿತು ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
ವ್ಯವಸಾಯಗಾರರಾಗಿದ್ದ ಎಂ.ಎಂ.ಮೂಸ ಅವರು ಇದೇ ತಿಂಗಳ 7ರಂದು ಮಂಗಳವಾರ ಬೆಳಿಗ್ಗೆ ಗುಂಡಿಕೆರೆಯ ತಮ್ಮ ಮನೆಯಿಂದ ಹೊರಟಿದ್ದಾರೆ. 
ಮಧ್ಯಾಹ್ನ ನಂತರ ಬಿಟ್ಟಂಗಾಲ ಸಮೀಪದ ಕೊಳತ್ತೋಡು  ಗ್ರಾಮದ ಮುರುವಂಡ ರಾಜ ಎಂಬುವರಿಗೆ ಸೇರಿದ್ದ  ಎತ್ತೊಂದನ್ನು ರೂ.18000 ಹಣಕ್ಕೆ ಖರೀದಿಸಿ ಅದೇ ಎತ್ತಿನೊಂದಿಗೆ ಕಾಲ್ನಡಿಗೆಯಲ್ಲಿ ಮರಳಿದ್ದಾರೆ ಎನ್ನಲಾಗಿದೆ.

ಕೊಳತ್ತೋಡಿನಿಂದ ಹೊರಟ ಎಂ.ಎಂ.ಮೂಸ ಅವರು ರಾತ್ರಿಯಾದರೂ ಮನೆಗೆ ತಲುಪಲಿಲ್ಲ. ಕಾಲ್ನಡಿಗೆಯಲ್ಲೇ ಬರುವುದರಿಂದ ತಡರಾತ್ರಿಯಾದರೂ ಮನೆಗೆ ಬರುತ್ತಾರೆಂಬ ಭರವಸೆಯೊಂದಿಗೆ ಕಾದು ಕುಳಿತ ಮನೆಯವರಿಗೆ,  ಬುಧವಾರ ಬೆಳಗಿನ ಜಾವದವರೆಗೂ ಮೂಸ ಅವರು ಮನೆ ಸೇರದಿರುವುದು ಸಂಶಯ ಮೂಡಿಸಿದೆ. ಇದರಿಂದ ಆತಂಕಗೊಂಡ ಮನೆಯವರು, ಸಂಬಂಧಿಕರಿಗೆ ವಿಷಯ ತಿಳಿಸಿದಾಗ ಮೂಸ ಅವರನ್ನು ಹುಡುಕಲು ಆರಂಭಿಸಲಾಯಿತು. ಎಷ್ಟೇ ಹುಡುಕಾಡಿದರೂ ಈ ವೇಳೆ ಯಾವುದೇ ಸುಳಿವು ದೊರೆಯದಿದ್ದಾಗ ವಿರಾಜಪೇಟೆ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಯಿತು. 

ದೂರು ದಾಖಲಿಸಿಕೊಂಡ ಪೊಲೀಸರು ಮೂಸ ಅವರಿಗೆ ಎತ್ತು ಮಾರಾಟ ಮಾಡಿದವರನ್ನು ವಿಚಾರಿಸಿದಾಗ, ಹಣ ಪಡೆದು ಎತ್ತು ನೀಡಿದ್ದು ನಿಜ. ಮಂಗಳವಾರ ಮಧ್ಯಾಹ್ನದ ನಂತರ ಎತ್ತಿನೊಂದಿಗೆ ಅವರು ಇಲ್ಲಿಂದ ತೆರಳಿರುತ್ತಾರೆ. ನಂತರದ ಬೆಳವಣಿಗೆ ಬಗ್ಗೆ  ನನಗೆ ಏನೂ ತಿಳಿದಿಲ್ಲ ಎಂದು ಅವರು ಪೊಲೀಸರಿಗೆ  ತಿಳಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು,  ಅನುಮಾನದ ಮೇಲೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರೂ ಯಾವುದೇ ಸುಳಿವು ದೊರೆತಿಲ್ಲ ಎನ್ನಲಾಗಿದೆ. 

64 ವರ್ಷದ ಪ್ರಾಯದ ಎಂ.ಎಂ.ಮೂಸ ಅವರು ಸಾಧು ಸ್ವಭಾವದವರಾಗಿದ್ದು, ಗ್ರಾಮದಲ್ಲಿ ಉತ್ತಮ ಗುಣನಡತೆಯ ಅಭಿಪ್ರಾಯ ಹೊಂದಿದವರಾಗಿದ್ದಾರೆ. ಅವರು ನಿಗೂಢವಾಗಿ ನಾಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮೂಸ ಅವರು ಮನೆಯಿಂದ ತೆರಳಿ 4 ದಿನಗಳಾದರೂ ಮರಳಿ ಬಾರದಿರುವುದು ಮನೆಯವರ ಆತಂಕವನ್ನು ಹೆಚ್ಚು ಮಾಡಿದೆ. ಇದೀಗ  ಅನ್ನ-ನೀರು ಬಿಟ್ಟು ಮೂಸ ಅವರಿಗಾಗಿ ಕಾಯುತ್ತಿರುವ ಪತ್ನಿ ಮತ್ತು ಮಕ್ಕಳು, ಮೂಸ ಅವರು ಜೀವಂತವಾಗಿ ಮರಳಿ ಬರುತ್ತಾರೆಂಬ ಭರವಸೆಯೊಂದಿಗೆ ದಿನದೂಡುತ್ತಿದ್ದಾರೆ. 

ಮೂಸ ಅವರು ಹಣ ನೀಡಿ ಖರಿದಿಸಿದ್ದ ಎತ್ತು ಕೂಡ ಅವರೊಂದಿಗೆ ನಾಪತ್ತೆಯಾಗಿದ್ದು, ಪ್ರಕರಣವನ್ನು ಮತ್ತಷ್ಟು ಸಂಶಯದಿಂದ ನೋಡುವಂತಾಗಿದೆ. ಪೊಲೀಸರು ಸೂಕ್ತ ತನಿಖೆಯನ್ನು ತೀವ್ರಗತಿಯಲ್ಲಿ ನಡೆದರೆ ಮಾತ್ರ ಪ್ರಕರಣವನ್ನು ಬೇಗನೆ ಭೇಧಿಸಬಹುದು ಎಂಬುವುದು ಗುಂಡಿಕೆರೆ ಗ್ರಾಮಸ್ಥರ ಅನಿಸಿಕೆಯಾಗಿದೆ. 

*ತನಿಖೆಗೆ ಒತ್ತಾಯ*
ಗುಂಡಿಕೆರೆಯವರಾದ ಎಂ.ಎಂ.ಮೂಸ ಅವರು ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿರುವ ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಕೆ.ಎ.ಯಾಕೂಬ್ ಅವರು,  ಸಂಪೂರ್ಣವಾಗಿ ಸಾಕ್ಷಿಗಳನ್ನೇ ನಾಶಮಾಡಿದ್ದ ಹಲವಾರು ಪ್ರಕರಣಗಳನ್ನು ಈ ಹಿಂದೆ ವೃತ್ತಿ ಬದ್ಧತೆಯೊಂದಿಗೆ ಮತ್ತು ಪ್ರಾಮಾಣಿಕ ತನಿಖೆಯ ಮೂಲಕ ಭೇದಿಸಿದ ಕೊಡಗು ಪೊಲೀಸರಿಗೆ ಈ  ಪ್ರಕರಣವನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸವೇನಲ್ಲ ಎಂದು ಅಭಿಪ್ರಾಯಪಟ್ಟಿದ್ದಾರಲ್ಲದೆ, ಪೊಲೀಸರು ಕೂಡಲೇ ಈ  ಪ್ರಕರಣವನ್ನು ಬಯಲಿಗೆಳೆಯ ಬೇಕು ಎಂದು ಆಗ್ರಹಿಸಿದ್ದಾರೆ . 

ಅಲ್ಲದೆ ಈ ಕುರಿತು ಹೇಳಿಕೆ ನೀಡಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ (ಡಿ.ಸಿ.ಸಿ) ಪ್ರಧಾನ ಕಾರ್ಯದರ್ಶಿ ಮತ್ತು ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು) ಮತ್ತು ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾದ ಎಂ.ಎ. ಉಸ್ಮಾನ್ ಅವರು, ಗುಂಡಿಕೆರೆಯ ಎಂ.ಎಂ.ಮೂಸ ಅವರು ನಾಪತ್ತೆಯಾಗಿ 4 ದಿನಗಳು ಕಳೆದಿವೆ. ಇದರಿಂದಾಗಿ ಕುಟುಂಬಸ್ಥರು ತೀವ್ರ ದುಃಖದಲ್ಲಿದ್ದಾರೆ. ಗುಂಡಿಕೆರೆ ಗ್ರಾಮಸ್ಥರು ಆತಂಕದಲ್ಲಿದ್ದಾರೆ ಎಂದಿದ್ದಾರೆ.

ಅದ್ದರಿಂದ ಪೊಲೀಸರು ಕೂಡಲೇ ಸಮಗ್ರ ತನಿಖೆಗೆ ಮುಂದಾಗಬೇಕು. ವ್ಯವಸಾಯ ಮತ್ತು ಸಾಕುವ ಉದ್ದೇಶದಿಂದ ಎತ್ತುಗಳನ್ನು ಸಾಗಾಟ ಮಾಡುವಾಗ ಅದೆಲ್ಲವೂ ಮಾಂಸಕ್ಕಾಗಿ ಸಾಗಿಸಲಾಗುತ್ತಿದೆ ಎಂಬ ಗುಮಾನಿಯ ಮೇಲೆ ಸಾಗಿಸುವವರ ವಿರುದ್ಧ ಈ ಹಿಂದೆ ಬಹಳಷ್ಟು ಬಾರಿ ಹಲ್ಲೆ ಮತ್ತು ಹತ್ಯೆ ಯತ್ನಗಳಾಗಿದೆ. ಕೆಲವು ಕಿಡಿಗೇಡಿಗಳ ಈ ಧೋರಣೆ ಸರಿಯಲ್ಲ. ಅದ್ದರಿಂದ ಪೊಲೀಸರು ಈ ದಿಕ್ಕಿನಲ್ಲಿಯೂ ತನಿಖೆ ಮುಂದುವರಿಸಬೇಕಾಗಿದೆ. ಇದೀಗ ಜಿಲ್ಲೆಯಲ್ಲಿ ವಿಶ್ವಾಸನೀಯ ಮತ್ತು ನಿಷ್ಠಾವಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿದ್ದು, ಅವರ ಮಾರ್ಗದರ್ಶನದಲ್ಲಿ ತನಿಖೆ ಚುರುಕುಗೊಳ್ಳುವ ವಿಶ್ವಾಸವಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಅಮೂಲ್ಯವಾದ ಮನುಷ್ಯ ಜೀವವೊಂದು  ಕಾಣೆಯಾಗಿದೆ. ಈ ಪ್ರಕರಣವನ್ನು ಪೋಲಿಸರು ಕೂಡಲೇ ಬೇಧಿಸಿದರೆ ಮಾತ್ರ ಕುಟುಂಬಸ್ಥರಿಗೆ ಸೂಕ್ತ ನ್ಯಾಯ ದೊರೆಯಲು ಸಾಧ್ಯ ಎಂದು  ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಣೆಯಾಗಿರುವ ವ್ಯಕ್ತಿಗೆ ಹೃದಯ ಸಂಬಂಧಿತ ಕಾಯಿಲೆ ಇದ್ದು , ಪ್ರತಿದಿನ ಔಷಧಿಗಳನ್ನು ಸೇವಿಸುವವರಾಗಿದ್ದರು ಎಂಬ ಸುದ್ದಿಯೂ ಕೇಳಿಬಂದಿದೆ.

No comments

Post a Comment