ಕೋವಿಡ್ 19 ವಿರುದ್ಧ ಜನಜಾಗೃತಿ ಮೂಡಿಸಿದ ವ್ಯಕ್ತಿಯ ಮೇಲೆ ಪ್ರಕರಣ ದಾಖಲು!

SPECIAL REPORT / TIMES OF COORG
ವಿಶ್ವ ಮಹಾ ಮಾರಿ ಕೋವಿಡ್ 19 (ಕೊರೋನ) ವಿರುದ್ಧ ಇಡೀ ವಿಶ್ವವೇ ಸಮರದಲ್ಲಿದೆ. ಮಹಾ ಮಾರಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ಹಾಗೂ ಜವಾಬ್ದಾರಿ ಕೂಡಾ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಜನತಾ ಕರ್ಫ್ಯೂ ದಿನದಿಂದ ಇಂದಿನವರೆಗೆ ಇಡೀ ದೇಶದಲ್ಲಿ ಮಾಡುತ್ತಿರುವ ಹಾಗೆಯೇ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲು ವಿವಿಧ ಸಂಘಸಂಸ್ಥೆಗಳು ಹಲವು ರೀತಿಯಲ್ಲಿ ಜನಜಾಗೃತಿ ಹಾಗೂ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ.

ಧ್ವನಿವರ್ಧಕದ ಮೂಲಕ ಮಹಾ ಮಾರಿ ಹರಡುವುದನ್ನು ತಡೆಗಟ್ಟುವ ಹಾಗೂ ಸಾರ್ವಜನಿಕರು ಪಾಲಿಸಬೇಕಾದ ಕ್ರಮಗಳ ಬಗ್ಗೆ ಅಗತ್ಯ ಮಾಹಿತಿ ನೀಡುವುದು ಕೂಡಾ ಇದರ ಭಾಗವಾಗಿದೆ. ಜನತಾ ಕರ್ಫ್ಯೂ ದಿನದಿಂದಲೂ ಇದು ನಡೆಯುತ್ತಲೇ ಇದೆ. ಎಪ್ರಿಲ್ ಒಂದರಂದು (ಬುಧವಾರ) ಅಗತ್ಯ ವಸ್ತುಗಳನ್ನು ಖರೀದಿಸಲು ಹೆಚ್ಚಿನ ಜನರು ಸಿದ್ದಾಪುರ ಪಟ್ಟಣಕ್ಕೆ ಆಗಮಿಸಿದ್ದರಿಂದ ಸಿದ್ದಾಪುರದಲ್ಲಿ ಇದೇ ರೀತಿ ವಾಹನದಲ್ಲಿ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಅಗತ್ಯ ಮಾಹಿತಿಯನ್ನು ನೀಡುತ್ತಿದ್ದ ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಎಂ.ಎ ಅಜೀಜ್ ಅವರು ಸಹ ಜನರು ಗುಂಪು ಸೇರದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸುತ್ತಿದ್ದರು, ಈ ಸಂದರ್ಭ ಸಿದ್ದಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರು, ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಹಾಗೂ ಸದಸ್ಯನೋರ್ವ ಸೇರಿ ಸಿದ್ದಾಪುರದಲ್ಲಿ ಧ್ವನಿವರ್ಧಕದ ಮೂಲಕ‌ ಪ್ರಚಾರ ಮಾಡುವ ಅವಶ್ಯಕತೆ ಇಲ್ಲ ಎಂದು ವಾಹನ ತಡೆದಿದ್ದಾರೆ.

ಇದನ್ನು ವಿರೋಧಿಸಿದ ಅಜೀಜ್ ತಮ್ಮ ಸಾಮಾಜಿಕ ಸೇವೆಯನ್ನು ಮುಂದುವರಿಸಿದ್ದಾರೆ. ಹಾಗೂ ಘಟನೆಯ ಬಗ್ಗೆ ಫೇಸ್‌ಬುಕ್‌ ನಲ್ಲಿ ಹಂಚಿಕೊಂಡಿದ್ದಾರೆ. ಇದರ ಬಳಿಕ ಎಚ್ಚೆತ್ತುಕೊಂಡ ಸಿದ್ದಾಪುರ ಗ್ರಾಮ ಪಂಚಾಯತಿ ಬೇರೆಯೊಂದು ವಾಹನದಲ್ಲಿ ಸಿದ್ದಾಪುರದಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದರು. ಇದೇ ದಿನ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಅಜೀಜ್ ವಿರುದ್ಧ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಹಳದಿ ಪತ್ರಿಕೆಯೊಂದರ ವರದಿಗಾರ ತನ್ನ ಪತ್ರಿಕೆಯಲ್ಲಿ ಸುಳ್ಳು ಸುದ್ದಿಯನ್ನು ಪ್ರಕಟಿಸಿ ಜೊತೆಗೆ ಒಂದಷ್ಟು ಕೋಮು ಬಣ್ಣ ಸೇರಿಸಿ ವಾಹನದಲ್ಲಿ ಗೋ ಮಾಂಸ ಮಾರಾಟ ಮಾಡುತ್ತಿರುವುದಾಗಿಯೂ ಗೀಚುವ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕೆಡಿಸುವ ಕುತಂತ್ರ ಸಹ ಮಾಡಿದನು. ಎರಡು ದಿನಗಳ ಬಳಿಕ ಗ್ರಾಮ ಪಂಚಾಯತಿ ಅಧ್ಯಕ್ಷರು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಎಸ್.ಪಿ‌‌ ಅವರ ಸೂಚನೆಯಂತೆ ಅಜೀಜ್ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಕೊರೋನ ಹರಡದಂತೆ ಸಿದ್ದಾಪುರ ಪೊಲೀಸರು ರಾತ್ರಿ ಹಗಲು ಎನ್ನದೆ ಬಹಳಷ್ಟು ಶ್ರಮ‌ ಪಡುತ್ತಿದ್ದಾರೆ. ಆದರೆ ಸಿದ್ದಾಪುರ ಗ್ರಾಮ ಪಂಚಾಯತಿ ಮಾಡಿದ ಕೆಲಸಗಳು ಏನೆಂಬುದನ್ನು ನಾನು ಹೇಳಲ್ಲ ಇಲ್ಲಿನ ಜನರಲ್ಲಿ ವಿಚಾರಿಸಿದರೆ ಎಲ್ಲರಿಗೂ ತಿಳಿಯುತ್ತದೆ. ಗ್ರಾಮ ಪಂಚಾಯತಿ ಅಧ್ಯಕ್ಷರು ಸೇರಿದಂತೆ ಕೆಲವರ ತಪ್ಪುಗಳನ್ನು ಫೇಸ್‌ಬುಕ್‌ ನಲ್ಲಿ ಟೀಕಿಸುತಾ ಬರುತ್ತಿದ್ದ ಅಜೀಜ್ ಮೇಲೆ ಇವರಿಗೆ ಮೊದಲೇ ದ್ವೇಷ ಇತ್ತು ಎಂಬುದು ಸಹ ಸತ್ಯ. ಅವಕಾಶಕ್ಕಾಗಿ ಕಾಯುತ್ತಿದ್ದವರು ಕೊರೋನಾ ವೈರಸ್‌ನ ಸಹಾಯದೊಂದಿಗೆ ಅಜೀಜ್ ಮೇಲೆ ಪ್ರಕರಣ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜನಪ್ರತಿನಿಧಿಗಳ ಮೇಲೆ ಟೀಕೆ ಟಿಪ್ಪಣಿ ಸಹಜ ಎಂಬ ಅರಿವು ಅಧ್ಯಕ್ಷರಿಗಿರಲಿ. 
ಹೆದರಬೇಡಿ..... ಎಚ್ಚರಿಕೆ ಇರಲಿ.
ಒಟ್ಟಾಗಿ ಮಾಹಾ ಮಾರಿಯನ್ನು ಎದುರಿಸೋಣ. 

✍️ಮುಸ್ತಫ ಸಿದ್ದಾಪುರ.