ಕೊಡಗು ಜಿಲ್ಲೆಯಲ್ಲಿ ಶಾಲಾ-ಕಾಲೇಜು ಆರಂಭ : ವಿದ್ಯಾರ್ಥಿಗಳಲ್ಲಿ ಸಂಭ್ರಮ

No comments

ಮಡಿಕೇರಿ ಸೆ.17(web@timesofcoorg.kannada):-ಜಿಲ್ಲೆಯಲ್ಲಿ ಕೋವಿಡ್-19 ಪ್ರಮಾಣ ಶೆ.2 ಕ್ಕಿಂತ ಕಡಿಮೆ ಇರುವ ಹಿನ್ನೆಲೆ ಶುಕ್ರವಾರದಿಂದ 9 ನೇ ತರಗತಿಯಿಂದ ಮೇಲ್ಪಟ್ಟು ಶಾಲಾ-ಕಾಲೇಜುಗಳ ಭೌತಿಕ ತರಗತಿಗಳು ಆರಂಭವಾದವು. ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಲವಲವಿಕೆಯಿಂದ ಶಾಲೆಗೆ ಆಗಮಿಸಿದ್ದು ವಿಶೇಷವಾಗಿತ್ತು, 

     ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀಧರನ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಧೈರ್ಯದಿಂದ ಶಾಲೆಗೆ ಬರುವಂತೆ ಹೇಳಿದರು. 

     ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್-19 ಸೋಂಕು ಶೇ.2 ಕ್ಕಿಂತ ಕಡಿಮೆ ಇರುವುದರಿಂದ ಕೊರೊನಾ ಸೊಂಕು ತಡೆಯುವ ನಿಟ್ಟಿನಲ್ಲಿ ಸರ್ಕಾರ ರೂಪಿಸಿರುವ ಎಲ್ಲಾ ಮಾನಸೂಚಿಗಳನ್ನು ಪಾಲಿಸಲಾಗಿದೆ. ಸುರಕ್ಷಿತ ಅಂತರ ಕಾಯ್ದುಕೊಳ್ಳವ ಉದ್ದೇಶದಿಂದ ಒಂದು ಡೆಸ್ಕ್‍ನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಡಿಡಿಪಿಐ ಅವರು ಹೇಳಿದರು.  

ಶಾಲೆ ಆರಂಭಕ್ಕೂ ಮೊದಲು ಶಾಲಾ ಕೊಠಡಿಯನ್ನು ಸ್ಯಾನಿಟೈಸ್ ಮಾಡಲಾಗಿತ್ತು, ವಿದ್ಯಾರ್ಥಿಗಳು ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಯ್ದುಕೊಳ್ಳವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿತ್ತು, ತರ್ಮಲ್ ಸ್ಕ್ರೀನಿಂಗ್ ಸ್ಯಾನಿಟೈಸರ್ ನೀಡಿ ವಿದ್ಯಾರ್ಥಿಗಳನ್ನು ತರಗತಿಗೆ ಕಳುಹಿಸಲಾಯಿತು. 

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀಧರನ್ ಆವರು ಸುಂಟಿಕೊಪ್ಪ, ಬಸವನಹಳ್ಳಿ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.  

ಕೋವಿಡ್-19 ಹಿನ್ನೆಲೆ ಜಿಲ್ಲಾಧಿಕಾರಿ ಅವರ ಸೂಚನೆಯಂತೆ ಪ್ರೌಢಶಾಲೆಗಳ 9 ಮತ್ತು 10 ನೇ ಭೌತಿಕ ತರಗತಿ  ಆರಂಭಿಸಲಾಗಿದೆ. ಅದರಂತೆ ಕೊಡಗು ಜಿಲ್ಲೆಯಲ್ಲಿ 47 ಸರ್ಕಾರಿ, 46 ಅನುದಾನಿತ, 77 ಅನುದಾನ ರಹಿತ ಹಾಗೂ ಇತರೆ 15  ಒಟ್ಟು 185 ಪ್ರೌಢಶಾಲೆಗಳ 9 ಮತ್ತು 10ನೇ ತರಗತಿ ಪ್ರಾರಂಭವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಶ್ರೀಧರನ್ ಅವರು ಮಾಹಿತಿ ನೀಡಿದರು. 

9 ನೇ ತರಗತಿಗೆ 7606, 10 ನೇ ತರಗತಿಗೆ 7424 ವಿದ್ಯಾರ್ಥಿಗಳು ದಾಖಲಾಗಿದ್ದೂ, ಶಾಲಾ ಆರಂಭದ ದಿನವಾದ ಶುಕ್ರವಾರ ಶೇ.45 ರಿಂದ 50 ರಷ್ಟು ವಿದ್ಯಾರ್ಥಿಗಳು ಹಾಜರಾಗಿರುವುದಾಗಿ ತಿಳಿದು ಬಂದಿದೆ. ಅಲ್ಲದೇ ಶಾಲೆಗಳಲ್ಲಿ ಕೋವಿಡ್ ಎಸ್‍ಒಪಿ ನಿಯಮಗಳನ್ನು ಸ್ಯಾನಿಟೈಸೇಷನ್, ಮಾಸ್ಕ್ ಬಳಕೆ ಸಾಮಾಜಿಕ ಅಂತರ ಪಾಲಿಸಲಾಗಿದೆ ಎಂದರು. 

      ಹಾಗೆಯೇ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ವಿಷ್ಣುಮೂರ್ತಿ ಅವರು ಜಿಲ್ಲೆಯಲ್ಲಿ 65 ಪದವಿ ಪೂರ್ವ ಕಾಲೇಜುಗಳಿದ್ದು, ಇದರಲ್ಲಿ 14 ಸರ್ಕಾರಿ, 13 ಅನುದಾನಿತ, 34 ಅನುದಾನ ರಹಿತ, ಹಾಗೂ 4 ವಸತಿ ಕಾಲೇಜುಗಳ ಭೌತಿಕ ತರಗತಿ ಆರಂಭವಾಗಿದೆ. ಶುಕ್ರವಾರ ವಿದ್ಯಾರ್ಥಿಗಳು ಲವಲವಿಕೆಯಿಂದ ಹಾಜರಾಗಿದ್ದರು ಎಂದು ಪದವಿ ಪೂರ್ವ ಉಪ ನಿರ್ದೇಶಕರಾದ ವಿಷ್ಣು ಮೂರ್ತಿ ಅವರು ಮಾಹಿತಿ ನೀಡಿದರು.    

    ನಗರದ ಜೂನಿಯರ್ ಕಾಲೇಜಿನ ಉಪ ಪ್ರಾಂಶುಪಾಲರಾದ ಪಿ.ಕೆ. ನಳಿನಿ ಅವರು ಮಾತನಾಡಿ ಶಾಲೆ ಆರಂಭವಾಗಿರುವುದು ಖುಷಿ ತಂದಿದೆ. ಸರ್ಕಾರದ ನಿಯಮ ಪಾಲಿಸಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತದೆ ಎಂದರು. 

      ಹೂ, ಸಿಹಿ, ಪುಸ್ತಕ ಹಾಗೂ ಗಿಡ ನೀಡಿ ವಿದ್ಯಾರ್ಥಿಗಳ ಸ್ವಾಗತ: ಕೋವಿಡ್-19 ರ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಶಾಲೆಗಳು ಶುಕ್ರವಾರ ಆರಂಭಗೊಂಡ ಸಂದರ್ಭದಲ್ಲಿ ಸಮೀಪದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಸ್ವಾಗತಿಸಿ ಶಾಲೆಗೆ ಬರ ಮಾಡಿಕೊಂಡರು.  

      ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಗೆ ಆಗಮಿಸಿದ ಮಕ್ಕಳಿಗೆ ಶಾಲಾ ದ್ವಾರದ ಬಳಿ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಹೂವು ನೀಡುವ ಮೂಲಕ ಸ್ವಾಗತಿಸಿ, ಮಕ್ಕಳು ಎಂದಿನಂತೆ ಶಾಲೆಗೆ ಬಂದು ಕಲಿಕೆಯಲ್ಲಿ ತೊಡಗಬೇಕು ಎಂದರು.

    ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಥರ್ಮಲ್ ಸ್ಕ್ಯಾನಿಂಗ್‍ನಿಂದ ತಾಪಮಾನ ಪರೀಕ್ಷಿಸಿ ಸ್ಯಾನಿಟೈಸ್ ನೀಡಿದರು. ನಂತರ  ಶಿಕ್ಷಕರು ಎಲ್ಲಾ ಮಕ್ಕಳಿಗೆ ಸಿಹಿ ವಿತರಿಸಿ ಬಾಲ ವಿಜ್ಞಾನ ಪುಸ್ತಕ ಹಾಗೂ ಗಿಡಗಳನ್ನು ನೀಡುವ ಮೂಲಕ ಸ್ವಾಗತಿಸಿದರು.

    ಶಾಲೆಗೆ ಭೇಟಿ ನೀಡಿದ್ದ ಶಿಕ್ಷಣ ಸಂಯೋಜಕ ಕೆ.ಬಿ.ರಾಧಾಕೃಷ್ಣ, ಮಕ್ಕಳಿಗೆ ಕೋವಿಡ್ ಸುರಕ್ಷತೆ ಬಗ್ಗೆ ಮಾಹಿತಿ ನೀಡಿದರು. ಮಕ್ಕಳು ಶಾಲೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾಜರಾಗಿದ್ದು ಕಂಡುಬಂತು. ಶಿಕ್ಷಕರು ಮಕ್ಕಳನ್ನು ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದ್ದು ವಿದ್ಯಾರ್ಥಿ ಪೆÇೀಷಕರಿಗೆ ತುಂಬಾ ಸಂತಸ ತಂದಿತು. ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಶಾಲೆಗೆ ಬಂದ ಮಕ್ಕಳಿಗೆ ಸಿಹಿ, ಹೂ, ಪುಸ್ತಕ ಮತ್ತು  ಗಿಡಗಳನ್ನು ನೀಡುವ ಮೂಲಕ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಶಿಕ್ಷಕರು ಇದ್ದರು.

No comments

Post a Comment