ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮ್ಮೇಳನಕ್ಕೆ ಕೊಡಗಿನ ಇಬ್ಬರು ಕಿರಿಯ ವಿಜ್ಞಾನಿಗಳು ಆಯ್ಕೆ

No comments

ಮಡಿಕೇರಿ ಆ.23(web@timesofcoorg):-ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ(ಎನ್‍ಸಿಎಸ್‍ಟಿಸಿ), ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ  ನಡೆದ ರಾಜ್ಯ ಮಟ್ಟದ 28 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮ್ಮೇಳನ 2020 ದಲ್ಲಿ ಕೊಡಗಿನ ಇಬ್ಬರು ಕಿರಿಯ ವಿಜ್ಞಾನಿಗಳು ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮ್ಮೇಳನಕ್ಕೆ ಆಯ್ಕೆಯಾಗಿದ್ದಾರೆ.

 ಕೋವಿಡ್- 19 ರ ಮಾರ್ಗಸೂಚಿ ಅನ್ವಯ ಭೌತಿಕ ಸಮ್ಮೇಳನಕ್ಕೆ ಪರ್ಯಾಯವಾಗಿ ಆನ್‍ಲೈನ್ ಮೂಲಕ ನಡೆದ ಜಿಲ್ಲಾಮಟ್ಟ ಹಾಗೂ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮ್ಮೇಳನದಲ್ಲಿ ಜಿಲ್ಲೆಯ ಮಡಿಕೇರಿ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಾದ ಸಿ.ಎಸ್.ರಘುವಂಶಿ ಹಾಗೂ ಕೆ.ಕೆ.ಮಹಿಮ್ ಆಯ್ಕೆಯಾಗಿದ್ದಾರೆ ಎಂದು ಸಮಾವೇಶದ ಜಿಲ್ಲಾ ಸಂಯೋಜಕ ಜಿ.ಶ್ರೀಹರ್ಷ ತಿಳಿಸಿದ್ದಾರೆ.

 "ಸುಸ್ಥಿರ ಜೀವನಕ್ಕಾಗಿ ವಿಜ್ಞಾನ" ಎಂಬ ಕೇಂದ್ರ ವಿಷಯದಡಿ ನಡೆದ ರಾಜ್ಯ ಮಟ್ಟದ ಸಮಾವೇಶದಲ್ಲಿ ಕಿರಿಯ ವಿಭಾಗದಲ್ಲಿ  ಮಾರ್ಗದರ್ಶಿ ಶಿಕ್ಷಕಿ ಎಂ.ಎಸ್.ಶೃತಿ ಮಾರ್ಗದರ್ಶನದಲ್ಲಿ ತಂಡದ ನಾಯಕ ಸಿ.ಎಸ್.ರಘುವಂಶಿ ಮತ್ತು ತಂಡದ ಸದಸ್ಯ ಎನ್.ಆರ್.ಸಮನ್ಯು ತಂಡವು "ಕೊಡಗಿನಲ್ಲಿ ಶೋಲಾ ಅರಣ್ಯಗಳು" ಎಂಬ ಉಪ ವಿಷಯದಡಿ ಮಂಡಿಸಿದ ವೈಜ್ಞಾನಿಕ ಪ್ರಬಂಧ ಹಾಗೂ ಹಿರಿಯ ವಿಭಾಗದಲ್ಲಿ ಮಾರ್ಗದರ್ಶಿ ಶಿಕ್ಷಕ ಎಂ.ಲೋಹಿತ್ ಚಂಗಪ್ಪ ಮಾರ್ಗದರ್ಶನದಲ್ಲಿ ತಂಡದ ನಾಯಕ ಕೆ.ಕೆ.ಮಹಿನ್ ಮತ್ತು ತಂಡದ ಸದಸ್ಯ ಪುರಬ್ ಪೆÇನ್ನಪ್ಪ ತಂಡವು "ರಾಸಾಯನಿಕ ಕೀಟನಾಶಕವು ವರವೋ- ಶಾಪವೋ" ಎಂಬ ಉಪ ವಿಷಯದ ಕುರಿತು ಉತ್ತಮವಾಗಿ ಮಂಡಿಸಿದ ವೈಜ್ಞಾನಿಕ ಪ್ರಬಂಧವು ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮ್ಮೇಳನಕ್ಕೆ ಅರ್ಹತೆ ಪಡೆದಿದೆ ಎಂದು ವಿಜ್ಞಾನ ಪರಿಷತ್ತಿನ ಕಾರ್ಯಕ್ರಮ ಸಂಘಟಕ ಟಿ.ಜಿ.ಪ್ರೇಮಕುಮಾರ್ ತಿಳಿಸಿದ್ದಾರೆ.

ಮಕ್ಕಳಲ್ಲಿ ವೈಜ್ಞಾನಿಕ ಸಂಶೋಧನೆ ಬೆಳೆಸುವ ಮೂಲಕ ಅವರಲ್ಲಿ ಕ್ರಿಯಾಶೀಲ ವ್ಯಕ್ತಿತ್ವ ಸೃಜನಶೀಲತೆ ಬೆಳೆಸಿ ಭವಿಷ್ಯದ ವಿಜ್ಞಾನಿಗಳನ್ನಾಗಿ ರೂಪಿಸಲು ಮಕ್ಕಳ ವಿಜ್ಞಾನ ಸಮ್ಮೇಳನವು ಉತ್ತಮ ವೇದಿಕೆ ಕಲ್ಪಿಸುತ್ತದೆ ಎಂದು ತಿಳಿಸಿದ್ದಾರೆ.

ಕೋವಿಡ್ ಹಿನ್ನೆಯಲ್ಲಿ ಈ ಆಯ್ಕೆಯು 4 ತಿಂಗಳ ನಂತರ ನಡೆದಿದೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಬೆಂಗಳೂರಿನಲ್ಲಿ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಗಿರೀಶ್ ಕಡ್ಲೇವಾಡ ಅಧ್ಯಕ್ಷತೆಯಲ್ಲಿ ವಿಜ್ಞಾನ ಭವನದಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ  ಸಚಿವ  ಅಶ್ವಥ್ ನಾರಾಯಣ, ಕಿರಿಯ ವಿಜ್ಞಾನಿಗಳು ರೂಪಿಸಿದ ವೈಜ್ಞಾನಿಕ ಯೋಜನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

 ಡಿಆರ್‍ಡಿಒ ವಿಶ್ರಾಂತ ಮುಖ್ಯಸ್ಥರೂ ಆದ ಹಿರಿಯ ವಿಜ್ಞಾನಿ ಡಾ ವಿ.ಕೆ.ಅತ್ರೆ ಹಾಗೂ ಅದಮ್ಯ ಚೇತನ ಸಂಸ್ಥೆಯ ಪ್ರಮುಖರಾದ ತೇಜಸ್ವಿ ಅನಂತಕುಮಾರ್ ಕಿರಿಯ ವಿಜ್ಞಾನಿಗಳಿಗೆ  ಪ್ರಶಸ್ತಿ ನೀಡಿ ಗೌರವಿಸಿದರು.

 ಕಿರಿಯ ವಿಜ್ಞಾನಿಗಳಾದ ಸಿ.ಎಸ್. ರಘುವಂಶಿ, ಕೆ.ಕೆ.ಮಹಿನ್ ಹಾಗೂ ತಂಡದ ಸದಸ್ಯ ಎನ್.ಆರ್.ಸಮನ್ಯು ಪ್ರಶಸ್ತಿ ಸ್ವೀಕರಿಸಿದರು.

ತಂಡದ ನಾಯಕ ಸಿ.ಎಸ್.ರಘುವಂಶಿ, ಮಡಿಕೇರಿ ನಗರದ ಸಿವಿಲ್ ಎಂಜಿನಿಯರ್ ಸಿ.ಆರ್.ಶಿವಶಂಕರ್ ಮತ್ತು ಶಿಕ್ಷಕಿ ಪಿ.ಸಂಧ್ಯಾ ದಂಪತಿ ಪುತ್ರನಾದರೆ, ಮತ್ತೊಂದು ತಂಡದ ನಾಯಕ ಕೆ.ಕೆ.ಮಹಿನ್, ನಗರದ ವ್ಯಾಪಾರಿ ಕೃಷ್ಣ ಮೋಹನ್ ಮತ್ತು  ಶ್ರೀದೇವಿ ದಂಪತಿ ಪುತ್ರ.

ಹಾಗೆಯೇ, ತಂಡದ ಸಹ ಸದಸ್ಯ ಸಮನ್ಯು, ನಗರದ ವಿನ್ಯಾಸ ಗಾರ, ಚಿತ್ರ ಕಲಾವಿದ ರಾಮ್ ಗೌತಮ್ ಮತ್ತು ಅರುಣ ದಂಪತಿ ಪುತ್ರನಾದರೆ ಮತ್ತೊಂದು ತಂಡದ ಸಹ ಸದಸ್ಯ ಪುರಬ್ ಪೊನ್ನಪ್ಪ, ನಗರದ ಮಾತಂಡ ಬಾಬ್ ದೇವಯ್ಯ ಮತ್ತು ಪೊನ್ನಮ್ಮ ದಂಪತಿಯ ಪುತ್ರ. 

ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮ್ಮೇಳನವು ಆನ್‍ಲೈನ್ ಮೂಲಕ ನಡೆದಿದ್ದು, ಕಿರಿಯ ವಿಜ್ಞಾನಿಗಳು ತಾವಿರುವ ಸ್ಥಳದಿಂದಲೇ ಮಾಹಿತಿಯುಳ್ಳ ಚಾರ್ಟ್ ಮತ್ತು ವಿಡಿಯೊ ಮೂಲಕ ತಮ್ಮ ವೈಜ್ಞಾನಿಕ ಪ್ರಬಂಧ ಮಂಡಿಸಿ ಗಮನ ಸೆಳೆದಿದ್ದಾರೆ ಎಂದು ಕಾರ್ಯಕ್ರಮ ಸಂಘಟಕ ಟಿ.ಜಿ.ಪ್ರೇಮಕುಮಾರ್ ತಿಳಿಸಿದ್ದಾರೆ.

ಜಿಲ್ಲಾಮಟ್ಟದಿಂದ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮ್ಮೇಳನಕ್ಕೆ ಆನ್‍ಲೈನ್ ಮೂಲಕ ನಡೆಸಿದ ಸಮ್ಮೇಳನದಲ್ಲಿ ಕೊಡಗು ಜಿಲ್ಲೆಯಿಂದ 10 ಮಂದಿ ಕಿರಿಯ ವಿಜ್ಞಾನಿಗಳು ಆಯ್ಕೆಗೊಂಡಿದ್ದರು ಎಂದು ಟಿ.ಜಿ.ಪ್ರೇಮ್ ಕುಮಾರ್ ಅವರು ತಿಳಿಸಿದ್ದಾರೆ.

No comments

Post a Comment