ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು (web@timesofcoorg.in): ನಾಪೋಕ್ಲು ವ್ಯಾಪ್ತಿಯಲ್ಲಿ ಕೋರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರವುದರಿಂದ ಹೊರರಾಜ್ಯಗಳಿಂದ ನಾಪೋಕ್ಲು ವಿಭಾಗಕ್ಕೆ ಕೂಲಿಕಾರ್ಮಿಕರು ಇಲ್ಲಿನ ಕಾಫಿ ತೋಟಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇದರಿಂದ ಕೋವಿಡ್ ಬರುವ ಅಪಾಯ ಎದುರಾಗಿದ್ದು ಪ್ರತಿಯೊಬ್ಬರು ಕೋವಿಡ್ ಪರೀಕ್ಷೆ ಮಾಡಿಸಬೇಕೆಂದು ನಾಪೋಕ್ಲುವಿನ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯಲ್ಲಿ ತೀರ್ಮಾನಿಸಿದಂತೆ ಸೋಮವಾರ ಸಂತೆ ದಿನದಂದು ಮಾರುಕಟ್ಟೆಗೆ ಬರುವ ಕೂಲಿ ಕಾರ್ಮಿಕರು ಮತ್ತು ಗ್ರಾಹಕರನ್ನು ಕಡ್ಡಾಯವಾಗಿ ಪರೀಕ್ಷೆ ಮಾಡುವಂತೆ ತಿಳಿ ಹೇಳಿ ಸಂತೆ ಮಾರುಕಟ್ಟೆ ಬಳಿಯಲ್ಲಿಯೇ ಕೋವಿಡ್ ಪರೀಕ್ಷೆಯನ್ನು ನಡೆಸಲಾಯಿತು.
ನಾಪೋಕ್ಲುವಿನ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯವರು ಬೆಳಿಗ್ಗೆಯಿಂದಲೇ ಇದಕ್ಕಾಗಿ ಶ್ರಮ ವಹಿಸುತ್ತಿರುವುದು ಕಂಡುಬಂತು. ಅದರಂತೆ ಮಾಸ್ಕ್ ಧರಿಸದೆ ಇರುವವರನ್ನು ತರಾಟೆಗೆ ತೆಗೆದುಕೊಂಡು ದಂಡವನ್ನು ವಿಧಿಸಲಾಗಿದೆ ಎಂದು ಸಮಿತಿಯವರು ತಿಳಿಸಿದರು.
ಅಲ್ಲದೇ ನಾಪೋಕ್ಲು ವ್ಯಾಪ್ತಿಯಲ್ಲಿ ಅಸ್ಸಾಂ ಕೂಲಿಕಾರ್ಮಿಕರನ್ನು ತೋಟಗಳಲ್ಲಿ ಕೆಲಸಕ್ಕೆ ಇಟ್ಟುಕೊಂಡಿರುವ ತೋಟದ ಮಾಲೀಕರು ಕೂಡಲೇ ಅವರ ಮಾಹಿತಿಯನ್ನು ನಾಪೋಕ್ಲು ವಿನ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಗೆ ತಿಳಿಸಬೇಕು ಮತ್ತು ಅವರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ತಪ್ಪಿದರೆ ಅಂತಹ ಮಾಲೀಕರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ ಹಾಗೂ ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯರಾದ ಕಾಳೆಯಂಡ ಸಾಬಾ ತಿಮ್ಮಯ್ಯ, ಗ್ರಾಮಪಂಚಾಯತಿ ಸಿಬ್ಬಂದಿಗಳಾದ ಬೊಪ್ಪಂಡ ವಿರನ್, ಬೊಪ್ಪಂಡ ವೇಣು ಸುಬ್ಬಯ್ಯ, ಅಂಗನವಾಡಿ ಕಾರ್ಯಕರ್ತೆಯರಾದ ಆಶಲತಾ, ಅಜಿತಾ, ಸೀಮಾ, ಸ್ವಾತಿ, ಆಶಾ, ಮತ್ತು ಆಶಾ ಕಾರ್ಯಕರ್ತೆಯರಾದ ದಮಯಂತಿ, ಗಾಯತ್ರಿ,ಮತ್ತಿತರರು ಇದ್ದರು.
No comments
Post a Comment