ಸಂಪ್ರದಾಯದ ಜೊತೆಗೆ ಮನರಂಜನಾ ಹಬ್ಬವಾಗಿ ಆಚರಣೆ
ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು (web@timesofcoorg) : ಕೊಡಗಿನಲ್ಲಿ ಹುತ್ತರಿ ಹಬ್ಬಕ್ಕೆ ಮೊದಲಸ್ಥಾನ ಇದ್ದರೆ ನಂತರದ ಸ್ಥಾನ ಕೈಲ್ ಮುಹೂರ್ತ ಹಬ್ಬದ್ದು. ಕೈಲ್ ಮುಹೂರ್ತ ಹಬ್ಬವನ್ನು ಕೊಡಗಿನಲ್ಲಿ ನಾನಾ ದಿನಾಂಕದಂದು ಆಚರಿಸಲಾಗುತ್ತದೆ. ಚಿನ್ಯಾರ್ 2ರಿಂದ 18ರ ನಾನಾ ಭಾಗಗಳಲ್ಲಿ ಹಬ್ಬವನ್ನು ಆಚರಿಸಿದರೆ ನಾಪೋಕ್ಲು ನಾಲ್ಕುನಾಡು ವಿಭಾಗದಲ್ಲಿ ಆ. 29ರಂದು ಅಂದರೆ ಚಿನ್ಯಾರ್ 12ರಂದು ಆಚರಿಸಲಾಗುತ್ತಿದೆ. ಅದರಂತೆ ಚಿನ್ಯಾರ್ 18 ಅಂದರೆ ಸೆಪ್ಟೆಂಬರ್ 3ರಂದು ಕೊಡಗಿನಾದ್ಯಂತ ಕೈಲ್ ಮುಹೂರ್ತ ಹಬ್ಬ ನಡೆಯಲಿದೆ.
ಈ ಹಬ್ಬಗಳಲ್ಲಿ ಅವುಗಳದೇ ಆದ ಪ್ರತ್ಯೇಕ ಆಚಾರ-ವಿಚಾರಗಳನ್ನು ಕಾಣಬಹುದಾಗಿದೆ. ಕೈಲ್ ಮುಹೂರ್ತ ಹಬ್ಬವನ್ನು ಕೊಡವ ಭಾಷೆಯಲ್ಲಿ "ಕೈಲ್ ಪೋಳ್ದ್ " ಎಂದು ಕರೆಯಲಾಗುವುದು. ಇದು ಒಂದು ವಿಶಿಷ್ಟವಾದ ಹಬ್ಬ.
"ಕೈಲ್ ಪೋಳ್ದ್ " ಹಬ್ಬವನ್ನು ಕೊಡಗಿನಲ್ಲಿ ಸಂಪ್ರದಾಯಗಳೊಂದಿಗೆ ಮನೋರಂಜನಾ ಹಬ್ಬವಾಗಿಯೂ ಆಚರಿಸಲಾಗುತ್ತಿದೆ. ಕೈಲ್ ಎಂದರೆ ಆಯುಧ, ಪೋಳ್ದ್ ಎಂದರೆ ಪೂಜೆ ಎಂದರ್ಥ. ಅದರಂತೆಯೇ ಕೈಲ್ ಪೋಳ್ದ್ ಅನ್ನು ಆಯುಧಪೂಜೆ ಎಂದು ಕರೆಯುತ್ತಾರೆ.
ಕೊಡಗಿನಲ್ಲಿ ಕೃಷಿಗೆ ಪ್ರಧಾನ ಆದ್ಯತೆ ಇದ್ದು ಕೊಡವರು ಮತ್ತು ಕೊಡವ ಭಾಷಿಕರು ಮೂಲತಹಃ ಕೃಷಿಕರು. ಜತೆಗೆ ಉತ್ತಮ ಬೇಟೆಗಾರರು ಕೂಡ. ಹಿಂದಿನ ಕಾಲದಲ್ಲಿ ಪ್ರಾಣಿಗಳನ್ನು ಬೇಟೆಯಾಡುವುದಕ್ಕಾಗಿ ಕೋವಿ,ಕತ್ತಿಗಳನ್ನು ಉಪಯೋಗಿಸುತ್ತಿದ್ದರು. ಆದರೆ ವ್ಯವಸಾಯದ ಸಂದರ್ಭದಲ್ಲಿ ಅಂದರೆ ಕಕ್ಕಡ (ಆಟಿ ) ಮಾಸದಲ್ಲಿ ಆಯುಧಗಳನ್ನು ಮುಟ್ಟದೆ ತಮ್ಮ ಮನೆಯ ಕನ್ನಿಕೊಂಬರೆ( ದೇವರ ಕೋಣೆ )ಯಲ್ಲಿ ಆಯುಧಗಳನ್ನು ಇಟ್ಟಿರುತ್ತಾರೆ. ಕೃಷಿ ಕಾರ್ಯ ಮುಗಿದ ನಂತರ ಆಯುಧಗಳಿಗೆ ಪೂಜೆ ಸಲ್ಲಿಸುವುದರ ಮೂಲಕ ಅವುಗಳನ್ನು ಹೊರತೆಗೆಯಲಾಗುತ್ತದೆ. ನಂತರ ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ. ಕೋವಿಯನ್ನು ಪೂಜಿಸಲು "ತೋಕ್ ಪೂ "(ಕೋವಿ ಹೂ )ವನ್ನು ಬಳಸುತ್ತಾರೆ. ಕಾಡುಗಳಲ್ಲಿ ಹಬ್ಬಿ ಬೆಳೆಯುವ ವರ್ಣ ರಂಜಿತ ಹೂವು ಇದಾಗಿದ್ದು ಕೈಲ್ ಮುಹೂರ್ತ ಹಬ್ಬದ ಸಮಯದಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುತ್ತದೆ. ಇದನ್ನು ಕೆಲವರು ಗೌರಿ ಹೂವು ಅಂತಲೂ ಕರೆಯುತ್ತಾರೆ.
ಕೈಯಲ್ ಮುಹೂರ್ತ ಹಬ್ಬದ ನಂತರ ಕತ್ತಿ,ಕೋವಿಗಳು ಬಳಕೆಯಾದರೆ ಅಲ್ಲಿಯವರೆಗೆ ಗದ್ದೆ ವ್ಯವಸಾಯದಲ್ಲಿ ಬಳಕೆಯಾಗುತ್ತಿದ್ದ ನೇಗಿಲು, ನೊಗ,ಗುದ್ದಲಿ,ಇತ್ಯಾದಿ ವ್ಯವಸಾಯದ ಉಪಕರಣಗಳಿಗೆ ವಿರಾಮ. ಅಂತೆಯೇ ಈ ಎಲ್ಲಾ ಉಪಕರಣಗಳನ್ನು ತೊಳೆದು ಪೂಜೆ ಸಲ್ಲಿಸಲಾಗುತ್ತದೆ. ನಂತರದಲ್ಲಿ ಉಳುಮೆ ಮಾಡಿದ ಎತ್ತುಗಳ ಮೈ ತೊಳೆದು ಅವುಗಳಿಗೆ ಕುಂಕುಮ, ಗಂಧ ಹಚ್ಚಿ ಅಲಂಕರಿಸುತ್ತಾರೆ. ಅಲ್ಲದೆ ಅಕ್ಕಿ,ಬೆಲ್ಲದಿಂದ ಮಾಡಿದ ಪಾಯಸ (ಪಣಿ ಪುಟ್ಟ್ ) ತಿನ್ನಿಸುತ್ತಾರೆ. ಗದ್ದೆ ಕೆಲಸಕ್ಕೆ ಬಳಸಿದ ಸಲಕರಣೆಗಳನ್ನು ತೊಳೆದು ಪೂಜಿಸಿ ಸುರಕ್ಷಿತವಾಗಿರಿಸಿದರೆ ಅವು ಮತ್ತೆ ಬಳಕೆಯಾಗುವುದು ಮುಂದಿನ ವರ್ಷದಲ್ಲೇ.
ಏನೇ ಆದರೂ ಕೈಲ್ ಮುಹೂರ್ತ ಹಬ್ಬ ಆಚರಿಸುವವರಿಗೆ ಬೇರೆ ಹಬ್ಬ ಗಳಿಗಿಂತಲೂ ಇದರ ಮೇಲೆ ಹೆಚ್ಚಿನ ಸಂಭ್ರಮ ಎನ್ನಬಹುದು.
ಆದರೆ ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ಭೂಮಿಯನ್ನು ನೆಡುವವರ ಸಂಖ್ಯೆ ಕಡಿಮೆಯಾಗಿದ್ದು ಹಬ್ಬವು ಹಳೇ ಕಾಲದ ವೈಭವವನ್ನು ಕಳೆದುಕೊಳ್ಳುತ್ತಿದೆ. ಇಂದು ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಜನರು ತತ್ತರಿಸಿ ಹೋಗಿದ್ದು ಮುಂದೆ ಹಬ್ಬ ಹರಿದಿನಗಳನ್ನು ಸರಳವಾಗಿ ಆಚರಿಸುವ ಹಂತಕ್ಕೆ ಬಂದಿದ್ದು ಇಂತಹ ಸಂಭ್ರಮದ ಹಬ್ಬಗಳು ಭವಿಷ್ಯದಲ್ಲಿ ಪುಸ್ತಕದಲ್ಲಿ ಮಾತ್ರ ನೋಡುವ ಕಾಲ ದೂರ ಇಲ್ಲ ಎನ್ನಬಹುದು.
No comments
Post a Comment