ಕಾಡಾನೆ ಹಾವಳಿ ನಿಯಂತ್ರಣಕ್ಕೆ ಹಲವು ಕ್ರಮ; ಅರಣ್ಯ ಸಚಿವರಿಂದ ಮಾಹಿತಿ
ಮಡಿಕೇರಿ (Times Of Coorg):-ಸೋಮವಾರ ಬೆಂಗಳೂರಿನಲ್ಲಿ ಆರಂಭಗೊಂಡಿರುವ ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಭಾಗವಹಿಸಿ ಜಿಲ್ಲೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದರು.
ಜಿಲ್ಲೆಯಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ತೆರೆಯಲಾಗಿದೆಯೇ?, ಇದ್ದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೇಂದ್ರಗಳ ಸಂಖ್ಯೆ ಎಷ್ಟು ಮತ್ತು ಅವು ಯಾವುವು ಎಂದು ಪ್ರಶ್ನಿಸಿದರು.
ಇದಕ್ಕುತ್ತರಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಅವರು ಕೊಡಗು ಜಿಲ್ಲೆಯಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ 03 ಡಯಾಲಿಸಿಸ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜಿಲ್ಲಾಸ್ಪತ್ರೆ, ವಿರಾಜಪೇಟೆ ಮತ್ತು ಸೋಮವಾರಪೇಟೆಯ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು.
ಈ ಡಯಾಲಿಸಿಸ್ ಕೇಂದ್ರಗಳು ಪ್ರತಿ ದಿನ ಎಷ್ಟು ರೋಗಿಗಳಿಗೆ ಸೇವೆ ನೀಡುವ ಸಾಮಥ್ರ್ಯ ಹೊಂದಿವೆ ಹಾಗೂ ಈ ಕೇಂದ್ರಗಳಲ್ಲಿ ಕಳೆದ 3 ತಿಂಗಳಲ್ಲಿ ಸೇವೆ ಪಡೆದ ರೋಗಿಗಳ ಸಂಖ್ಯೆ ಎಷ್ಟು ಎಂಬ ಬಗ್ಗೆ ಪ್ರತಿ ದಿನದ ವಿವರದೊಂದಿಗೆ ಮಾಹಿತಿ ನೀಡುವಂತೆ ಕೇಳಿದರು.
ಸಚಿವರಾದ ಬಿ.ಶ್ರೀರಾಮುಲು ಅವರು ಉತ್ತರಿಸಿ ಕೊಡಗು ಜಿಲ್ಲಾಸ್ಪತ್ರೆಯಲ್ಲಿ 21, ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ 12 ಮತ್ತು ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ 09 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಕಳೆದ 3 ತಿಂಗಳಿನಲ್ಲಿ 99 ರೋಗಿಗಳು ಡಯಾಲಿಸಿಸ್ ಚಿಕಿತ್ಸೆ ಪಡೆದಿದ್ದಾರೆ ಎಂದು ಸಚಿವರು ಉತ್ತರಿಸಿದರು.
ವೀಣಾ ಅಚ್ಚಯ್ಯ ಅವರು ಮಾತನಾಡಿ, ಈ ಡಯಾಲಿಸಿಸ್ ಕೇಂದ್ರಗಳಲ್ಲಿ ಇರಬೇಕಾದ ಮೂಲ ಸೌಕರ್ಯಗಳೇನು ಮತ್ತು ಕರ್ತವ್ಯ ನಿರ್ವಹಿಸಬೇಕಾದ ವೈದ್ಯ ಹಾಗೂ ಇತರ ಸಿಬ್ಬಂದಿಗಳ ಸಂಖ್ಯೆ ಎಷ್ಟು. ಆ ಪ್ರಮಾಣದಲ್ಲಿ ವೈದ್ಯರನ್ನು ನಿಯೋಜಿಸಲಾಗಿದೆಯೇ ಎಂದು ಪ್ರಶ್ನಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಅವರು ಮಾತನಾಡಿ ಇಲಾಖೆಯ ವತಿಯಿಂದ ಸ್ಥಳ, ವಿದ್ಯುತ್ ಹಾಗೂ ನೀರಿನ ಸೌಲಭ್ಯ ಒದಗಿಸಲಾಗುತ್ತಿದೆ. ಏಜನ್ಸಿಯವರಿಂದ ಪ್ರತಿ ಜಿಲ್ಲಾಸ್ಪತ್ರೆಯಲ್ಲಿ 10 ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ 02 ಡಯಾಲಿಸಿಸ್ ಯಂತ್ರಗಳು, ಆರ್.ಒ ನೀರಿನ ವ್ಯವಸ್ಥೆ, ಡಯಾಲಿಸಿಸ್ ಪರಿಕರಗಳು ಹಾಗೂ ಮಾನವ ಸಂಪನ್ಮೂಲವನ್ನು ಒದಗಿಸಬೇಕಾಗಿರುತ್ತದೆ.
ಅಲ್ಲದೆ ಪ್ರತಿ ಡಯಾಲಿಸಿಸ್ ಕೇಂದ್ರದಲ್ಲಿ ಪ್ರತಿ 03 ಡಯಾಲಿಸಿಸ್ ಯಂತ್ರಗಳಿಗೆ ಪಾಳಿಯಲ್ಲಿ 1 ಟೆಕ್ನೀಷಿಯನ್, 1 ಶಶ್ರೂಷಕರು ಮತ್ತು 1 ಗ್ರೂಪ್ ಡಿ ನೌಕರರು ಹಾಗೂ 1 ವೈದ್ಯರು ಪ್ರತಿ ಡಯಾಲಿಸಿಸ್ ಕೇಂದ್ರದಲ್ಲಿ ಕಾರ್ಯನಿರ್ವಹಿಸಬೇಕಾಗಿರುತ್ತದೆ ಸದಸರಿ ಪ್ರಮಾಣದಲ್ಲಿ ವೈದ್ಯರನ್ನು ನಿಯೋಜಿಸಿರುವುದಿಲ್ಲ ಎಂದು ಅವರು ಉತ್ತರಿಸಿದರು.
ಕೊಡಗು ಜಿಲ್ಲೆಯಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ನಿರಂತರವಾಗಿ ನಡೆಯುತ್ತಿದ್ದು, ಸಂಘರ್ಷಕ್ಕೆ ಸರ್ಕಾರ ಗುರುತಿಸಿರುವ ಪ್ರಮುಖ ಹಾಗೂ ವೈಜ್ಞಾನಿಕ ಕಾರಣಗಳೇನು ಎಂದು ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಪ್ರಶ್ನಿಸಿದರು
ಇದಕ್ಕೆ ಉತ್ತರಿಸಿದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಆನಂದ್ ಸಿಂಗ್ ಅವರು ಕಾಡಾನೆ ಮತ್ತು ಮಾನವ ಸಂಘರ್ಷಕ್ಕೆ ಪ್ರಮುಖ ಕಾರಣಗಳೆಂದರೆ, ಆನೆ ವಲಯ ಪ್ರದೇಶಗಳಲ್ಲಿ ಅತಿಯಾದ ವಾಹನ ಸಂಚಾರ ದಟ್ಟಣೆ ಹಾಗೂ ರಸ್ತೆಯಲ್ಲಿನ ಚಲನವಲನಗಳು, ಹೆಚ್ಚಿನ ಸಂಖ್ಯೆಯಲ್ಲಿ ತಲೆಯೆತ್ತುತ್ತಿರುವ ಪ್ರವಾಸಿ ಚಟುವಟಿಕೆಗಳು, ಆನೆ ವಲಯ ಪ್ರದೇಶಗಳಲ್ಲಿನ ಭೂ ಪ್ರದೇಶದ ಬಳಕೆಯಲ್ಲಿ ಬದಲಾವಣೆಗಳು ಎಂದು ಅವರು ಉತ್ತರಿಸಿದರು.
ಈ ಕಾರಣಗಳನ್ನು ಗುರುತಿಸಿದ ನಂತರದಲ್ಲಿ, ಸರ್ಕಾರ ಈ ಸಮಸ್ಯೆಯನ್ನು ಪರಿಹರಿಸಲು ಕೈಗೊಂಡಿರುವ ಕ್ರಮಗಳೇನು ಸಂಪೂರ್ಣ ವಿವರ ನೀಡುವಂತೆ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಪ್ರಶ್ನಿಸಿದರು.
ಇದಕ್ಕುತ್ತರಿಸಿದ ಸಚಿವರು ಮಾನವ ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕಾಗಿ 51.37 ಕಿ.ಮೀ. ಸೋಲಾರ್ ತಂತಿ ಬೇಲಿ ನಿರ್ಮಾಣ ಮಾಡಲಾಗಿದೆ, ಅರಣ್ಯ ಅಂಚಿನ ಗ್ರಾಮಗಳಲ್ಲಿ ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ 45.41 ಕಿ.ಮೀ. ಆನೆ ತಡೆ ಕಂದಕ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ, ಅರಣ್ಯದಂಚಿನ ಗ್ರಾಮಗಳಲ್ಲಿ ರೈತರಿಗೆ ಶೇಕಡ 50:50ರ ರಿಯಾಯಿತಿಯಲ್ಲಿ ಸೋಲಾರ್ ತಂತಿ ಬೇಲಿ ನಿರ್ಮಾಣವನ್ನು ಕೈಗೊಳ್ಳಲು ಅರಣ್ಯ ಇಲಾಖೆಯಿಂದ ಶೇಕಡ 50 ರಷ್ಟು ಸಹಾಯಧನ ನೀಡಾಲಾಗುತ್ತಿದ್ದು, 2020-21ನೇ ಸಾಲಿನಲ್ಲಿ 4.783 ಕೀ.ಮೀ. ಕಾಮಗಾರಿ ಪ್ರಗತಿಯಲ್ಲಿದೆ, ಹಾಗೂ ಕಾಡಾನೆ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು 13.42 ಕಿ.ಮೀ. ರೈಲ್ವೆ ಹಳಿಗಳ ಬ್ಯಾರಿಕೇಡ್ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಪ್ರಸ್ತುತ 9.516 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಆನಂದ್ ಸಿಂಗ್ ಅವರು ಉತ್ತರಿಸಿದರು
ಕೊಡಗು ಜಿಲ್ಲೆಯ ಅರಣ್ಯ ವೃತ್ತದ ವ್ಯಾಪ್ತಿಯ ವಲಯಗಳಲ್ಲಿ ಕಾಡಾನೆ ಹಾವಳಿಯ ತುರ್ತು ನಿರ್ವಹಣೆಗಾಗಿ 22 ರ್ಯಾಪಿಡ್ ರೆಸ್ಪಾನ್ಸ್ ತಂಡ(RRT)) ರಚಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ. ಆಯ್ದ ವಲಯಗಳಲ್ಲಿ ಕಾಡಾನೆ ಹಿಮ್ಮೆಟ್ಟಿಸುವ ತಂಡಗಳ ರಚನೆ ಮಾಡಲಾಗಿದೆ. ಕಾಡಾನೆ ಇರುವಿಕೆ, ಅವುಗಳ ಚಲನವಲನಗಳ ಬಗ್ಗೆ ಸಾರ್ವಜನಿಕರಿಗೆ ರೈತರಿಗೆ ಮಾಹಿತಿ ನೀಡುವ ಎಸ್‍ಎಂಎಸ್ ಅಲರ್ಟ್ ವ್ಯವಸ್ಥೆ (sms alert system) ಕಾರ್ಯ ನಿರ್ವಹಿಸುತ್ತಿದೆ.
ವನ್ಯಪ್ರಾಣಿಗಳ ದಾಳಿಯಿಂದ ಭಾದಿತ ಗ್ರಾಮಗಳ ಜನರೊಂದಿಗೆ ಸಂಪರ್ಕ ಸಭೆ ನಡೆಸಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ 2014 ರಿಂದ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ 13 ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡಲಾಗಿರುತ್ತದೆ. ಜಿಲ್ಲೆಯಲ್ಲಿ 9 ಆನೆಗಳಿಗೆ ರೇಡಿಯೋ ಕಾಲರ್‍ಗಳನ್ನು ಅಳವಡಿಸಿ, ಅವುಗಳ ಚಲನವಲನಗಳ ಬಗ್ಗೆ ನಿಗಾ ವಹಿಸಲಾಗುತ್ತಿದೆ.
ಕೊಡಗು ಜಿಲ್ಲೆಯ ನಾಗರಹೊಳೆ ವ್ಯಾಪ್ತಿಯಲ್ಲಿ ರಕ್ಷಣಾ ಕೆಲಸಗಳಿಗಾಗಿ ಎಸ್‍ಟಿಪಿಎಫ್ ತಂಡ ನೇಮಕ ಮಾಡಿ ರಕ್ಷಣಾ ಕಾರ್ಯ ಕೈಗೊಳ್ಳಲಾಗುತ್ತಿದೆ. 2016, ಆಗಸ್ಟ್ 7 ರ ರನ್ವಯ ಕೊಡಗು ಜಿಲ್ಲೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷದಿಂದ ಭಾದಿತರಾದ ವ್ಯಕ್ತಿಗಳಿಗೆ ಸಾಮಾಜಿಕ ಮತ್ತು ಆರ್ಥಿಕ ಬೆಂಬಲ ನೀಡುವುದರ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಕೊಡಗು ಮಾನವ ವನ್ಯಪ್ರಾಣಿ ಸಂಘರ್ಷ-ಉಪಶಮನ ಪ್ರತಿಷ್ಠಾನ ವನ್ನು ವೃತ್ತ ಮಟ್ಟದಲ್ಲಿ ಸ್ಥಾಪಿಸಲಾಗಿದೆ ಎಂದು ಸಚಿವರಾದ ಆನಂದ್ ಸಿಂಗ್ ಅವರು ಉತ್ತರಿಸಿದರು.
ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅವರು ಈ ಕ್ರಮಗಳನ್ನು ಅನುಷ್ಠಾನಗೊಳಿಸಿದ ನಂತರ ಮಾನವ-ವನ್ಯಜೀವಿ ಸಂಘರ್ಷ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆಯೆ? ಜಿಲ್ಲೆಗೆ ಸಂಬಂಧಿಸಿದಂತೆ 5 ವರ್ಷಗಳ ಅಂಕಿ-ಅಂಶಗಳನ್ನು ನೀಡುವಂತೆ ಅವರು ಕೇಳಿದರು.
ಅರಣ್ಯ ಪರಿಸರ ಮತ್ತು ಜೀವಿಶಾಸ್ರ್ತ ಸಚಿವರಾದ ಆನಂದ್ ಸಿಂಗ್ ಅವರು ಉತ್ತರಿಸಿ ಜಿಲ್ಲೆಗೆ ಸಂಬಂಧಿಸಿದ ಕಳೆದ 5 ವರ್ಷಗಳ ಅಂಕಿ-ಅಂಶಗಳ ವಿವರಗಳನ್ನು ನೀಡಿ ಕೊಡಗು ಜಿಲ್ಲೆಯಲ್ಲಿ 2016-17ರಲ್ಲಿ 2831 ಪ್ರಕರಣ, 2017-18ರಲ್ಲಿ 1742 ಪ್ರಕರಣ, 2018-19ರಲ್ಲಿ 3915 ಪ್ರಕರಣ, 2019-20 ರಲ್ಲಿ 3703 ಪ್ರಕರಣ, 2020-21 ಆಗಸ್ಟ್-2020ರ ಅಂತ್ಯಕ್ಕೆ 1174 ಪ್ರಕರಣ ಮಾನವ-ವನ್ಯಜೀವಿ ಸಂಘರ್ಷದಲ್ಲಿ ಕಳೆದ 5 ವರ್ಷದಲ್ಲಿ ದಾಖಲಾದ ಪ್ರಕರಣಗಳು ಎಂದು ಅವರು ಉತ್ತರಿಸಿದರು.

No comments
Post a Comment