ನಾಪೋಕ್ಲು ನಗರದಲ್ಲಿ ಆಟೋ ನಿಲ್ದಾಣ ಸ್ಥಳ ವಿಸ್ತರಣೆಗೆ ಆಟೋ ಚಾಲಕರ ಸಂಘದಿಂದ ಮನವಿ

No comments

ವರದಿ : ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg): ನಗರದಲ್ಲಿ ದಿನೇ ದಿನೇ ಆಟೋರಿಕ್ಷಾ ಗಳ ಸಂಖ್ಯೆ ಅಧಿಕವಾಗುತ್ತಿದೆ ಈಗಾಗಲೇ ಸುಮಾರು 200ಕ್ಕೂ ಹೆಚ್ಚು ಆಟೋರಿಕ್ಷಾಗಳು ನಗರದಲ್ಲಿ ಬಾಡಿಗೆ ಮಾಡುತ್ತಿದ್ದು ಸೂಕ್ತ  ನಿಲ್ದಾಣ ವ್ಯವಸ್ಥೆ ಇಲ್ಲದೆ ಚಾಲಕರು ತೊಂದರೆ ಅನುಭವಿಸುತ್ತಿದ್ದೇವೆ .ಕೂಡಲೇ ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆ ಸೂಕ್ತ ಆಟೋ ನಿಲ್ದಾಣದ ವ್ಯವಸ್ಥೆಯನ್ನು ಮಾಡಿ ಕೊಟ್ಟು ಸಹಕರಿಸಬೇಕಾಗಿ ಆಟೋಚಾಲಕ ಸಂಘದ ಅಧ್ಯಕ್ಷ ಅಬ್ದುಲ್ ರಝಾಕ್  ಮನವಿ ಮಾಡಿದರು.

ಈ ದಿನ ನಾಪೋಕ್ಲುವಿನಲ್ಲಿ ಆಯೋಜಿಸಲಾಗಿದ್ದ ಚಾಲಕ ಮತ್ತು ಮಾಲೀಕರ ಸಂಘದ ಸಭೆಯಲ್ಲಿ ಮಾತನಾಡಿದ ಅವರು ಸಂಘ ಸ್ಥಾಪನೆಯಾಗಿ 28 ವರ್ಷ ಕಳೆದರೂ ಆಟೋ ರಿಕ್ಷಾಗಳಿಗೆ ಇದುವರೆಗೂ ಸರಿಯಾದ ನಿಲ್ದಾಣದ ವ್ಯವಸ್ಥೆಯನ್ನು ಸಂಬಂಧಪಟ್ಟವರು ಮಾಡದೇ ಇರುವುದರಿಂದ ಚಾಲಕರು ಇಂದಿಗೂತೊಂದರೆ ಅನುಭವಿಸುತ್ತಿದ್ದಾರೆ.

ಪೊಲೀಸ್ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಕೂಡಲೇ ಗಮನ ಹರಿಸಿ ಹೀಗಿರುವ ಗ್ರಾಮದ ಆಟೋ ನಿಲ್ದಾಣವನ್ನು 100 ಮೀಟರ್ ಬದಲಾಗಿ 150 ಮೀಟರ್ ವಿಸ್ತರಣೆ ಮಾಡಿಕೊಡಬೇಕು. ಈಗಿನ ಆಟೋ ನಿಲ್ದಾಣ ಇರುವ ರಸ್ತೆ ತುಂಬಾ ಇಕ್ಕಟ್ಟಿನಿಂದ ಇರುವ ಕಾರಣ ವಾಹನದಟ್ಟಣೆ ಹೆಚ್ಚಾಗುತ್ತಿದ್ದು, ಈ ರಸ್ತೆಯಲ್ಲಿ ಸಂಚರಿಸುವುದೇ ವಾಹನ ಸವಾರರಿಗೆ ದುಸ್ತರವಾಗಿದೆ. ಸಾಧ್ಯವಾದರೆ ನಿಲ್ದಾಣವನ್ನು ಪಟ್ಟಣದ ಮುಖ್ಯರಸ್ತೆಗೆ  ಬದಲಾಯಿಸಿ ಕೊಟ್ಟರೆ ಉತ್ತಮ ಎಂದು ಮನವಿ ಮಾಡಿದರು.

ಅದಲ್ಲದೆ ನಗರದಲ್ಲಿ ಅನಾವಶ್ಯಕವಾಗಿ ತಿರುಗಾಡುವ ಆಟೋರಿಕ್ಷಾಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಹೇಳಿದ ಅವರು ಮತ್ತೊಂದು ಕಡೆ ಪಟ್ಟಣದ ವರ್ತಕರು ಅವರವರ ಖಾಸಗಿ ವಾಹನವನ್ನು ಪಟ್ಟಣದಾದ್ಯಂತ ನಿಲ್ದಾಣಗಳಲ್ಲಿ ದಿನಪೂರ್ತಿ ನಿಲ್ಲಿಸುವುದರಿಂದ ಗ್ರಾಹಕರಿಗೆ ನಿಲ್ದಾಣದ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ.
ವ್ಯಾಪಾರಸ್ಥರು ಕೂಡ ಇದರಿಂದ ನಷ್ಟ ಅನುಭವಿಸಬೇಕಾಗುತ್ತದೆ ಎಂಬುದು ವರ್ತಕರು ಅರಿತುಕೊಳ್ಳಬೇಕಾಗಿದೆ ಎಂದರು.
ಆದ್ದರಿಂದ ಠಾಣಾಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಆದಷ್ಟು ಬೇಗ ಸಮಸ್ಯೆ  ಬಗೆಹರಿಸಿ ಕೊಡಬೇಕಾಗಿ ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದರು.

ಮುಂದೆ 15 ದಿನಗಳ ಒಳಗೆ ನಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದನೆ ದೊರಕದಿದ್ದರೆ ಸಂಘದ ವತಿಯಿಂದ ಹೋರಾಟ ಮಾಡಬೇಕಾದೀತು ಎಂದು ಎಚ್ಚರಿಸಿದರು.
ಈ ಸಂದರ್ಭ ಸಭೆಯಲ್ಲಿ ಮಾಜಿ ಅಧ್ಯಕ್ಷರಾದ ಕೆ ಎನ್ ರಮೇಶ್ ಕಾರ್ಯದರ್ಶಿ ಝಕರಿಯ ಸಲಹಾ ಸಮಿತಿ ಸದಸ್ಯ ಪ್ರಭಾಕರ್ ಉಪಾಧ್ಯಕ್ಷ ನಾಗರಾಜ ಮತ್ತಿತರ ಸದಸ್ಯರು ಹಾಜರಿದ್ದರು.



No comments

Post a Comment