ಕೊಡಗು - ಕೇರಳ ಸಂಪರ್ಕ ರಸ್ತೆ ಸಂಚಾರ ತಡೆಗೆ ಮುಕ್ತಿ ಎಂದು?
ದೇಶಾದ್ಯಂತ ಕೊರೋನಾ ನಿರ್ಬಂಧಗಳನ್ನು ಸಡಿಲಿಸಿದರೂ ಕೊಡಗಿನ ಗಡಿಗಿಲ್ಲ ಸಡಿಲಿಕೆ: ಗಡಿ ತೆರೆಯಲು ಸ್ಥಳೀಯರ ಒತ್ತಾಯ.
ವರದಿ :ಮುಸ್ತಫ ಸಿದ್ದಾಪುರ.
ಸಿದ್ದಾಪುರ (Times Of Coorg) : ಮಾರ್ಚ್ 19 ಕ್ಕೆ ಕೊಡಗು ಜಿಲ್ಲೆಯಲ್ಲಿ ಪ್ರಥಮ ಕೊರೋನಾ ಪ್ರಕರಣ ಪತ್ತೆಯಾದ ನಂತರ ವ್ಯಾಪಕವಾಗಿ ಹರಡುತ್ತಿದ್ದ
ಕೊರೋನಾ ವೈರಸ್ ತಡೆಗಟ್ಟುವ ಸಲುವಾಗಿ ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ
ಕೊಡಗಿನ ರಸ್ತೆಗಳನ್ನು ಕೊಡಗು ಜಿಲ್ಲಾಡಳಿತ ಬಂದ್ ಮಾಡಿ ಇದೀಗ 4 ತಿಂಗಳುಗಳು ಕಳೆದಿದೆ. ಕೊಡಗು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಮಾಕುಟ್ಟ, ಕರಿಕೆ ಹಾಗೂ ಕುಟ್ಟ ರಸ್ತೆಗಳನ್ನು ಮಣ್ಣು ಹಾಕಿ ಬಂದ್ ಮಾಡಲಾಗಿದೆ.
ಇದರಿಂದಾಗಿ ಕೇರಳ ಕೊಡಗು ಸಂಪರ್ಕಕ್ಕಾಗಿ ಚಾಮರಾಜನಗರ ಜಿಲ್ಲೆಯ
ಮೂಲೆಹೊಳೆ, ಮೈಸೂರು ಜಿಲ್ಲೆಯ ಬಾವಲಿ, ದಕ್ಷಿಣ ಕನ್ನಡ ಜಿಲ್ಲೆಯ ಜಾಲ್ಸೂರು ಮತ್ತು ತಲಪ್ಪಾಡಿ ಮಾರ್ಗದ ರಸ್ತೆಯನ್ನು ಅವಲಂಭಿಸಿದ್ದಾರೆ. ಪರಿಣಾಮ ನೂರಾರು
ಕಿ.ಮೀ ಅಧಿಕ ಸಂಚರಿಸಬೇಕಾಗಿದೆ. ತುರ್ತು ಸಂದರ್ಭಗಳಲ್ಲಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊರೋನಾ ನಿರ್ಬಂಧಗಳನ್ನು ಸಡಿಲಿಸಿ ಎಲ್ಲಾ
ಮಾರ್ಗಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೂ ಕೊಡಗು ಕೇರಳ ರಸ್ತೆ ಸಂಚಾರ ತಡೆಗೆ ಮಾತ್ರ ಇನ್ನೂ ಮುಕ್ತಿ ಸಿಗಲಿಲ್ಲ. ಇದರಿಂದ ಗಡಿ ಭಾಗದ ಜನಸಾಮಾನ್ಯರು ನಿತ್ಯ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ರಸ್ತೆ ಸಂಪರ್ಕ ಕಡಿತಗೊಳಿಸಿರುವುದರಿಂದ ಪಕ್ಕದ ಊರುಗಳಿಗೆ ತೆರಳಿ ಅಗತ್ಯ ವಸ್ತುಗಳನ್ನುಕೊ ಮತ್ತು ತುರ್ತು ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯಲಾಗದೆ ಪರದಾಡುತ್ತಿದ್ದಾರೆ. ಅಲ್ಲದೆ ಕೇರಳ ಮತ್ತು ಕೊಡಗು ವ್ಯಾಪಾರ ವಹಿವಾಟಿನ ಮೇಲೆ ಪರಿಣಾಮ ಬೀರುವಂತಾಗಿದೆ.
ಗಡಿಯ ಮುಖ್ಯರ ಹೊಟೇಲ್ ನಡೆಸುತ್ತಿರುವವರು ಅಂತರರಾಜ್ಯ ಪ್ರಯಾಣಿಕರನ್ನೆ ನಂಬಿ ಬದುಕು ಸಾಗಿಸುತ್ತಿದ್ದು, ಕಳೆದ ಹಲವು ತಿಂಗಳುಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಲ್ಲದೆ ಕೇರಳ ರಾಜ್ಯಕ್ಕೆ ತೆರಳಿ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡುತ್ತಿದ್ದ ಜಿಲ್ಲೆಯ ರೈತರು ಕೂಡಾ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಾಜ್ಯದ ಇತರ ಎಲ್ಲಾ ಅಂತರರಾಜ್ಯ ಗಡಿಗಳು ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದು, ಕೇರಳಕ್ಕೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯ ಗಡಿ ಮಾತ್ರ ಮುಚ್ಚಿರುವುದು ಸಾರ್ವಜನಿಕರಲ್ಲಿ ಹಲವು ಸಂಶಯಗಳಿಗೆ ಕಾರಣವಾಗಿದೆ.
ಗಡಿ ಗ್ರಾಮಗಳ ಜನರು ಮಣ್ಣಿನ ರಾಶಿಯನ್ನು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ
ಅವಕಾಶ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದರೂ ಶಾಸಕರು ಅಡ್ಡಿಪಡಿಸುತ್ತಿದ್ದಾರೆ ಹಾಗೂ ಜಿಲ್ಲಾಡಳಿತ ಕೂಡ ಜನಪರವಾಗಿ ಕಾರ್ಯ ನಿರ್ವಹಿಸದೆ ಶಾಸಕರು ಹೇಳಿದಂತೆ ಕೇಳುತ್ತಿದೆ. ರಸ್ತೆ ಮುಚ್ಚಿರುವುದರಿಂದ ಅನಿವಾರ್ಯ ಪರಿಸ್ಥಿತಿಗಳಲ್ಲಿ ಬೇರೆ ಊರಿಗೆ ತೆರಳಲು ಹೆಚ್ಚಿನ ದೂರವನ್ನು
ಕ್ರಮಿಸಬೇಕಾಗುವುದರಿಂದ ಹೆಚ್ಚಿನ ವೆಚ್ಚವಾಗುತ್ತದೆ. ಕೆಲಸವಿಲ್ಲದೆ ಬಡತನದಲ್ಲಿ
ದಿನದೂಡುತ್ತಿರುವ ಮಂದಿಗೆ ಇದು ಹೊರೆಯಾಗುತ್ತದೆ ಮತ್ತು ಅನಾರೋಗ್ಯ ಪೀಡಿತರು ತುರ್ತಾಗಿ ಆಸ್ಪತ್ರೆಗಳಿಗೆ ತಲುಪಲು ಸಾಧ್ಯವಾಗದೆ ಪ್ರಾಣ
ಕಳೆದುಕೊಳ್ಳಬೇಕಾದ ಪರಿಸ್ಥಿತಿ ಇದೆ.
ಆದ್ದರಿಂದ ತಕ್ಷಣ ಜಿಲ್ಲಾಡಳಿತ ಕೇರಳಸಂ ಗಡಿ ಗ್ರಾಮಗಳ ರಸ್ತೆ ಸಂಪರ್ಕವನ್ನು ಮುಕ್ತಗೊಳಿಸಬೇಕು.
ಸರ್ಕಾರ ಜಾರಿಗೆ ತಂದ ಆದೇಶವನ್ನು ಉಲ್ಲಂಘಿಸಿ ತನಗಿಷ್ಟ ಬಂದಂತೆ ಜಿಲ್ಲಾಡಳಿತ ನಡೆದುಕೊಂಡರೆ ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ.
" ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನೇ ಮಣ್ಣು ಹಾಕಿ ಮುಚ್ಚುವ ಕ್ರಮ ಕಾನೂನಿನ ಉಲ್ಲಂಘನೆಯಾಗಲಿದ್ದು, ಇದರ ವಿರುದ್ಧ ನ್ಯಾಯಾಂಗ ಹೋರಾಟ ನಡೆಸಬೇಕಾಗುತ್ತದೆ."
- ಕೆ.ಎಂ.ಬಿ ಗಣೇಶ್. ಜೆಡಿಎಸ್ ಜಿಲ್ಲಾಧ್ಯಕ್ಷ.
" ಇದರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಜನರ ಅಪೇಕ್ಷೆಗೆ ಜಿಲ್ಲಾಧಿಕಾರಿಗಳು
ತೀರ್ಮಾನ ತೆಗೆಯಬೇಕಾಗಿದೆ."
- ಕೆ.ಜಿ ಬೋಪಯ್ಯ. ಶಾಸಕ, ವಿರಾಜಪೇಟೆ.
"ಆಗಸ್ಟ್ 14 ರಂದು ಉಸ್ತುವಾರಿ ಸಚಿವರು ಜಿಲ್ಲೆಗೆ ಆಗಮಿಸುತ್ತಿದ್ದು, ಅವರ ಜೊತೆಗೆ ಚರ್ಚೆ
ಮಾಡಿದ ನಂತರ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು"
- ಅನೀಸ್ ಕಣ್ಮಣಿ ಜಾಯ್ ಜಿಲ್ಲಾಧಿಕಾರಿ, ಕೊಡಗು ಜಿಲ್ಲೆ.

No comments
Post a Comment