ಸಿದ್ಧಾಪುರ ( Times Of Coorg ) : ಕೋವಿಡ್-19 ರ ಬಗ್ಗೆ ಜನ ಜಾಗೃತಿ ಮೂಡಿಸುತ್ತಿದ್ದ ಸಾಮಾಜಿಕ ಕಾರ್ಯಕರ್ತರಾದ ಪತ್ರಕರ್ತ ಎಂ.ಎ. ಅಜೀಜ್ ವಿರುದ್ಧ ಸಿದ್ದಾಪುರ ಗ್ರಾಪಂ ಅಧ್ಯಕ್ಷ ಎಂ.ಕೆ. ಮಣಿ ದೂರು ನೀಡಿದ ಕ್ರಮವನ್ನು ನೆಲ್ಯಹುದಿಕೇರಿ ಸಹಾಯ ಚಾರಿಟಬಲ್ ಟ್ರಸ್ಟ್ ಖಂಡಿಸುವುದಾಗಿ ಟ್ರಸ್ಟ್ ಅಧ್ಯಕ್ಷ ಎ.ಕೆ ಅಬ್ದುಲ್ಲ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೆಲ್ಯಹುದಿಕೇರಿ ಮುಸ್ಲಿಂ ಜಮಾಅತ್ ವತಿಯಿಂದ ಹಮ್ಮಿ ಕೊಂಡಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಅಜೀಜ್ ಅವರು ಜನರಿಗೆ ಅರಿವು ಮೂಡಿಸುವ ಉತ್ತಮ ಕಾರ್ಯ ಮಾಡಿದ್ದಾರೆ. ಇದಕ್ಕೆ ಸಿದ್ದಾಪುರ ಪಿಎಸೈ ಬೋಜಪ್ಪ ಅವರು ಅನುಮತಿಯನ್ನೂ ನೀಡಿದ್ದರು. ಆದರೆ ಸಿದ್ದಾಪುರ ಗ್ರಾಪಂ ಅಧ್ಯಕ್ಷ ಎಂ.ಕೆ. ಮಣಿ ಹಾಗೂ ಮಾಜಿ ಉಪಾಧ್ಯಕ್ಷ ಎಂ.ಎಚ್ ಮಾಸಾ ಸೇರಿ ಅಜೀಜ್ ವಿರುದ್ಧ ವೈಯಕ್ತಿಕ ದ್ವೇಷ ಸಾಧಿಸುವ ಸಲುವಾಗಿ ದೂರು ನೀಡಿ ಪ್ರಕರಣ ದಾಖಲಿಸಿರುವ ಕ್ರಮ ಸರಿಯಲ್ಲ. ಇದು ಅತ್ಯಂತ ಖಂಡನೀಯವಾಗಿದೆ.
ಸಮಾಜದ ಒಳಿತಿಗಾಗಿ ಯಾರೇ ಕೆಲಸ ಮಾಡಿದ್ದರೂ ಅವರಿಗೆ ಅಭಿನಂದನೆ ಅರ್ಪಿಸ ಬೇಕಾದ ಗ್ರಾಪಂ ಆಡಳಿತವೇ ಈ ರೀತಿ ವರ್ತಿಸುವುದು ಸರಿಯಲ್ಲ. ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡುವ ಸಮಾಜ ಸೇವಕರಿಗೆ ಇದರಿಂದ ಸೇವೆ ಮಾಡುವ ಆಸಕ್ತಿ ಕಡಿಮೆಯಾಗಲಿದೆ. ಆದ್ದರಿಂದ ಅಜೀಜ್ ವಿರುಧ್ಧ ದಾಖಲಾದ ಪ್ರಕರಣವನ್ನು ಅಧ್ಯಕ್ಷರು ಕೂಡಲೇ ಹಿಂಪಡೆದು ಸಮಾಜಕ್ಕೆ ಉತ್ತಮ ಸಂದೇಶ ರವಾನೆ ಮಾಡ ಬೇಕೆಂದು ಒತ್ತಾಯಿಸಿದ್ದಾರೆ.
No comments
Post a Comment