ಸಿದ್ದಾಪುರ (Times Of Coorg) : ಕೋವಿಡ್ 19ರ ಕುರಿತು ಜನ ಜಾಗೃತಿ ಮೂಡಿಸುತ್ತಿದ ಕಾರಣಕ್ಕೆ ಸಾಮಾಜಿಕ ಕಾರ್ಯಕರ್ತ ಎಂ.ಎ ಅಜೀಜ್ ವಿರುದ್ದ ದೂರು ದಾಖಲಿಸಿದ ಸಿದ್ದಾಪುರ ಗ್ರಾಪಂ ಅಧ್ಯಕ್ಷ ಮಣಿ ಅವರ ಕ್ರಮವನ್ನು ಬಿಜೆಪಿ ನೆಲ್ಯಹುದಿಕೇರಿ ಸ್ಥಾನೀಯ ಸಮಿತಿಯು ತೀವ್ರವಾಗಿ ಖಂಡಿಸಿದೆ. ಕರ್ಫ್ಯೂ ಸಡಿಲಿಕೆ ದಿನವಾದ ಬುಧವಾರ ಸಿದ್ದಾಪುರ ಪಟ್ಟಣದಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ ಜನಜಂಗುಳಿ ಏರ್ಪಟ್ಟಿತ್ತು. ಪರಿಸ್ಥಿತಿ ಹತೋಟಿಗೆ ತರಲು ಬೇಕಾದ ಯಾವುದೇ ಕ್ರಮವನ್ನು ಗ್ರಾಪಂ ಹಾಗೂ ಸಿದ್ದಾಪುರ ಪೊಲೀಸರು ತೆಗೆದು ಕೊಳ್ಳದೆ ಇದ್ದಾಗ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು. ಈ ಸಂದರ್ಭ ಸಾರ್ವನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಸಾಮಾಜಿಕ ಕಾರ್ಯಕರ್ತ ಅಜೀಜ್ ದ್ವನಿ ವರ್ಧಕದ ಮೂಲಕ ಸಿದ್ದಾಪುರ ಪಟ್ಟಣದಲ್ಲಿ ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ಮನವಿ ಮಾಡಿದ್ದಾರೆ. ಗ್ರಾಪಂ ಮಾಡ ಬೇಕಿದ್ದ ಕೆಲಸವನ್ನು ಅಜೀಜ್ ಮಾಡಿದ್ದು ಅದನ್ನು ಸಹಿಸದ ಸಿದ್ದಾಪುರ ಗ್ರಾಪಂ ಅಧ್ಯಕ್ಷ ಮಣಿ ಹಾಗೂ ವಲಯ ಕಾಂಗ್ರೆಸ್ ಅಧ್ಯಕ್ಷ ಮೂಸಾ ಅಜೀಜ್ ವಿರುದ್ಧ ದೂರು ನೀಡಿ ಅವರ ಯೋಗ್ಯತೆ ಪ್ರಶ್ನಿಸುವಂತೆ ಮಾಡಿದ್ದಾರೆ. ಇದು ನಾಗರೀಕ ಸಮಾಜ ತಲೆ ತಗ್ಗಿಸುವ ಕೃತ್ಯವಾಗಿದ್ದು ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ಆತ್ಮ ಸ್ಥೈರ್ಯ ಕುಂದಿಸುವ ಕೆಲಸವಾಗಿದೆ ಎಂದು ಬಿಜೆಪಿ ನೆಲ್ಯಹುದಿಕೇರಿ ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಟಿ ಶಾಜಿ ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದರು.
ಅಜೀಜ್ ಸಿದ್ದಾಪುರ ಪಿಎಸೈ ಅವರಿಂದ ಪ್ರಚಾರಕ್ಕೆ ಅನುಮತಿ ಪಡೆದಿದ್ದರೂ ಅನುಮತಿ ಇಲ್ಲ ಎಂಬ ಕಾರಣಕ್ಕೆ ದೂರು ದಾಖಲಿಸಿ ಕೊಂಡ ಕ್ರಮ ಸರಿಯಿಲ್ಲ. ಕೇವಲ 8 ಗಂಟೆಯಿಂದ 12 ಗಂಟೆಯವರೆಗೆ ಮಾತ್ರ ಕರ್ಫ್ಯೂ ಸಡಿಲಿಕೆ ಮಾಡಲಾಗಿದ್ದು, ಈ ಸಂದರ್ಭ ಹಠಾತ್ತನೆ ಬಂದ ಜನರನ್ನು ನಿಯಂತ್ರಿಸಲು ತಕ್ಷಣಕ್ಕೆ ಅಜೀಜ್ ತೆಗೆದು ಕೊಂಡ ಕ್ರಮ ಸರಿಯಾಗಿದೆ. ಅದಕ್ಕಾಗಿ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯುವಷ್ಟರಲ್ಲಿ ಜನರು ಒಬ್ಬರಿಗೊಬ್ಬರು ಅಂಟಿ ಕೊಂಡಿರುವುದನ್ನು ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಅವರು ಸಿದ್ದಾಪುರ ಪಿಎಸೈ ಅವರಿಂದ ಅನುಮತಿ ಪಡೆದು ಜನಜಾಗೃತಿ ಕೆಲಸ ಮಾಡಿದ್ದಾರೆ. ಆದರೆ ಅನುಮತಿ ನೀಡಿದ ಪಿಎಸೈ ಬೋಜಪ್ಪ ಅವರೇ ಅಜೀಜ್ ಅವರ ಮೇಲೆ ಪ್ರಕರಣ ದಾಖಲಿಸಿರುವುದನ್ನು ಪಕ್ಷ ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.
No comments
Post a Comment