ಕಾಡಾನೆ ತುಳಿತಕ್ಕೆ ವ್ಯಕ್ತಿ ಬಲಿ : ಕುಶಾಲನಗರ ಸಮೀಪ ರಂಗಸಮುದ್ರದಲ್ಲಿ ಘಟನೆ

No comments
ಕುಶಾಲನಗರ ( Times Of Coorg) : ಕಾಡಿನಲ್ಲಿ ಕರುವಿಗೆ ಜನ್ಮವಿತ್ತ  ಹಸುವನ್ನು ಕರೆತರಲೆಂದು  ತೆರಳಿದ ವ್ಯಕ್ತಿಯೊಬ್ಬರು ಕಾಡಾನೆ ದಾಳಿಗೆ ಸಿಲುಕಿ ಜೀವ ತೆತ್ತಿರುವ ಧಾರುಣ ಘಟನೆ ವರದಿಯಾಗಿದೆ.  ರಂಗಸಮುದ್ರದ ಕಬ್ಬಿನಗದ್ದೆ ಗಿರಿಜನ ಹಾಡಿಯ    ಲೋಕೇಶ್ (38) ಎಂಬುವವರೇ ಮೃತ ದುರ್ದೈವಿ.  ಇಂದು ಬೆಳಿಗ್ಗೆ ಲೋಕೇಶ್ ರವರು ಮನೆ ಸಮೀಪದ ಕಾಡಿನಲ್ಲಿ ಹಸುವನ್ನು ಮೇಯಲೆಂದು ಬಿಟ್ಟಿದ್ದಾರೆ.  ಗಬ್ಬ ಧರಿಸಿದ್ದ ಹಸು ಕಾಡಿನಲ್ಲಿ ಕರುವಿಗೆ ಜನ್ಮ ನೀಡಿದೆ.  ಈ ವಿಚಾರ ತಿಳಿದ ಲೋಕೇಶ್ ಅವರು ಹಸು ಹಾಗೂ ಕರುವನ್ನು ತರಲೆಂದು 10 ಜನರೊಂದಿಗೆ ಅಡವಿಯತ್ತ ಹೊರಟಿದ್ದಾರೆ.  ದಾರಿ ಮಧ್ಯದಲ್ಲಿ ಏಳೆಂಟು ಕಾಡಾನೆಗಳಿದ್ದ  ಹಿಂಡು  ಏಕಾಏಕಿ ಇವರುಗಳ ಮೇಲೆ ಎರಗಿದೆ.  ಕೆಳಗೆ ಬಿದ್ದ ಲೋಕೇಶ್ ರವರ ಎದೆಯ ಭಾಗಕ್ಕೆ ಕಾಲಿಟ್ಟ ಹಿಂಡಿನಲ್ಲಿದ್ದ ಕಾಡಾನೆಯೊಂದು ತೀವ್ರವಾಗಿ ಘಾಸಿಗೊಳಿಸಿದೆ.  ಜೊತೆಗಿದ್ದ ಮುತ್ತ ಎಂಬುವವರು ಕೂದಲೆಳೆ ಅಂತರದಲ್ಲಿ ಗಜಪಡೆಗಳ ಹಿಡಿತಕ್ಕೆ ಸಿಲುಕದೇ  ಅಲ್ಪ ಪ್ರಮಾಣದ ಗಾಯಕ್ಕೊಳಗಾಗಿ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.  ಕೂಡಲೇ ಇನ್ನಿತರರು ಜೋರಾಗಿ ಕಿರುಚಿ ಮತ್ತಗಗಳನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಮದಕರಿಗಳ ದಾಳಿಗೆ ಸಿಲುಕಿ ಚಿಂತಾಜನಕರಾಗಿದ್ದ ಲೋಕೇಶ್ ಹಾಗೂ  ಇನ್ನೋರ್ವ ಗಾಯಾಳು ಮುತ್ತನನ್ನು ಘಟನೆ ನಡೆದ ಸ್ಥಳದ ಪಕ್ಕದ ಮನೆಯರಾದ ಪವನ್ ಎಂಬುವವರ ಕಾರಿನಲ್ಲಿ ಕುಶಾಲನಗರ ಆಸ್ಪತ್ರೆಗೆ ಕರೆತರಲಾಯಿತು.  ಕಾರಿನಲ್ಲಿ  ಕರೆ ತರುತ್ತಿದ್ದಾಗ   ತನ್ನ ಪತ್ನಿಯೊಂದಿಗೆ ಮೊಬೈಲ್ ನಲ್ಲಿ ಮಾತನಾಡಿಕೊಂಡು ಬಂದಿದ್ದ ಲೋಕೇಶ್ ರವರ ಪ್ರಾಣ ಪಕ್ಷಿ ಆಸ್ಪತ್ರೆಯಲ್ಲಿ ಹಾರಿಹೋಗಿದೆ.  ಕುಶಾಲನಗರ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಆಸ್ಪತ್ರೆಗೆ ಭೇಟಿ ನೀಡಿದ ಆರ್.ಎಫ್.ಓ. ಅನನ್ಯಕುಮಾರ್ ಅವರು, ಮೃತ ಲೋಕೇಶನ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಕೊಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಮೃತ ಲೋಕೆಶ್  ರವರು ಪತ್ನಿ, ಪತ್ರ ಹಾಗೂ  ಮತ್ತು ಪುತ್ರಿಯನ್ನು ಅಗಲಿದ್ದಾರೆ.

No comments

Post a Comment