ದೆಹಲಿ ಮೂಲದ ಕಾರು ಸಹಿತ ಇಬ್ಬರು ಪೊಲೀಸ್ ವಶ

 

      ಮಡಿಕೇರಿ (TIMES OF COORG): ಕೊಡಗು ಮತ್ತು ದಕ್ಷಿಣ ಕನ್ನಡ ಸೇರಿದಂತೆ ದೇಶದ ಹಲವೆಡೆ ನಿರ್ಬಂಧ ನಿಯಮ ಉಲ್ಲಂಘಿಸಿ; ಕಾರೊಂದರಲ್ಲಿ ಸುತ್ತಾಡುತ್ತಿದ್ದ ಇಬ್ಬರು ದೆಹಲಿ ಮೂಲದ ವ್ಯಕ್ತಿಗಳನ್ನು ಪೊಲೀಸರು ಕಾರು ಸಹಿತ ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿದ್ದಾರೆ; ಕಳೆದ ಮಾರ್ಚ್ 21 ರಂದು ದೆಹಲಿ ಮೂಲದ ತ್ರಿದೇಬ್‍ನಂದಿ ಎಂಬ ವ್ಯಕ್ತಿ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದಾರೆ. ಮಲ್ಪೆಯ ಸಮುದ್ರ ತಟದ ವಸತಿಯೊಂದರಲ್ಲಿ ಹತ್ತು ದಿನ ತಂಗಿದ್ದಾರೆ. ಈ ನಡುವೆ ತಾ. 2 ರಂದು ಅನಿಲ್‍ಕುಮಾರ್ ಪ್ರತೀಜಾ ಎಂದು ಹೇಳಿಕೊಂಡಿರುವ ಮತ್ತೋರ್ವ ತನ್ನ ಫೋರ್ಡ್ ಕಾರಿನಲ್ಲಿ (ಡಿ.ಎಲ್. 2 ಸಿಎಎಕ್ಸ್ 3136)ರಲ್ಲಿ ಬೇರೆ ಬೇರೆ ರಾಜ್ಯಗಳ ಮೂಲಕ ಕರ್ನಾಟಕಕ್ಕೆ ಬಂದಿದ್ದು; ಬಳಿಕ ಇಬ್ಬರು ಒಗ್ಗೂಡಿಕೊಂಡು ಕಾರಿನಲ್ಲಿ ಕೊಡಗು ಜಿಲ್ಲೆಗೆ ಆಗಮಿಸಿದ್ದಾರೆ. ಅಲ್ಲದೆ ಮೊದಲಿಗೆ ಭಾಗಮಂಡಲ ವ್ಯಾಪ್ತಿಯಲ್ಲಿ ಸುತ್ತಾಡಿದ್ದಾರೆ.ಅಲ್ಲಿನ ಪೊಲೀಸರು ವಿಚಾರಿಸುವಷ್ಟರಲ್ಲಿ ಈ ವ್ಯಕ್ತಿಗಳು ಕಾರು ಸಹಿತ ಪರಾರಿಯಾಗಿದ್ದಾರೆ. ಬಳಿಕ ಸಂಬಂಧಿಸಿದ ವಾಹನದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಅವರು ಎಲ್ಲೆಡೆ ನಿಗಾವಹಿಸುವಂತೆ ವಯರ್‍ಲೆಸ್ ಸಂದೇಶ ರವಾನಿಸಿ; ಪೊಲೀಸ್ ಕಂಟ್ರೋಲ್‍ರೂಂಗೆ ಮಾಹಿತಿ ನೀಡುವಂತೆ  ಇಲಾಖಾ ಠಾಣೆಗಳಿಗೆ ಸೂಚಿಸಿದ್ದಾರೆ.

ಈ ನಡುವೆ ಸಂಬಂಧಿಸಿದ ಕಾರು ಸಹಿತ ಮೇಲಿನ ಇಬ್ಬರು ವ್ಯಕ್ತಿಗಳು ಹೊಟೇಲ್ ಉದ್ಯಮಿಯೊಬ್ಬರ ಪುತ್ರನ ಮನೆಯಲ್ಲಿ ತಂಗಿರುವ ಸುಳಿವು ಲಭಿಸಿದೆ. ಆ ಮೇರೆಗೆ ಗೋಣಿಕೊಪ್ಪಲು ಠಾಣಾಧಿಕಾರಿ ಸುರೇಶ್‍ಬೋಪಣ್ಣ ಹಾಗೂ ಸಿಬ್ಬಂದಿ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಕಾನೂನು ಕ್ರಮ ಜರುಗಿಸಿದ್ದಾರೆ.
ಈ ವ್ಯಕ್ತಿಗಳ ವಿರುದ್ಧ ಪೊಲೀಸ್ ಕಾಯ್ದೆ 188 ಹಾಗೂ 270ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು; ಇಬ್ಬರನ್ನು ವೀರಾಜಪೇಟೆ ತಹಶೀಲ್ದಾರ್ ಸಮ್ಮುಖ ಹಾಜರುಪಡಿಸಿ ಅವರ ನಿರ್ದೇಶನದಂತೆ; ಸರಕಾರಿ ಆಸ್ಪತ್ರೆಯ ಕ್ವಾರಂಟೈನ್‍ನಲ್ಲಿ 14 ದಿನಗಳ ಇರುವಿಕೆಗೆ ಕ್ರಮಕೈಗೊಳ್ಳಲಾಗಿದೆ. ದಿಲ್ಲಿಯಿಂದ ಕೊಡಗಿನ ತನಕವೂ ನಕಲಿ ಪಾಸ್‍ನೊಂದಿಗೆ ಕಾರಿನಲ್ಲಿ ಸುಳಿದಾಡುತ್ತಿದ್ದುದಾಗಿ ಪೊಲೀಸರ ವಿಚಾರಣೆ ವೇಳೆ ತಿಳಿದು ಬಂದಿದೆ.