ಬೆಂಗಳೂರು (Times Of Coorg) : ಕೋವಿಡ್ 19 ಸಾಂಕ್ರಾಮಿಕವು ಜಗತ್ತಿನಾದ್ಯಂತ ಹಬ್ಬಿ ವಿಶ್ವದ ಬಹುತೇಕ ದೇಶಗಳನ್ನು ಲಾಕ್ ಡೌನ್ ಸ್ಥಿತಿಗೆ ತಲುಪಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ನಮ್ಮ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಗಲ್ಫ್ ದೇಶಗಳಲ್ಲಿ ದುಡಿಮೆಗಾಗಿ ತೆರಳಿದ ನಮ್ಮ ಕನ್ನಡಿಗರು ಹಾಗೂ ಭಾರತೀಯರ ಬಗ್ಗೆ ಗಮನಹರಿಸುವ ಮತ್ತು ಪ್ರತಿಸ್ಪಂದಿಸುವ ತುರ್ತು ಅವಶ್ಯಕತೆ ಇದೆ.
ಗಲ್ಫ್ ರಾಷ್ಟ್ರಗಳಾದ ಸೌದಿ ಅರೇಬಿಯಾ, ಕತಾರ್, ಯು ಏ ಇ, ಕುವೈಟ್, ಒಮಾನ್, ಬಹರೈನ್ ಮುಂತಾದ ರಾಷ್ಟ್ರಗಳಲ್ಲಿ ಇದೀಗ ಲಾಕ್ ಡೌನ್ ಘೊಷಣೆಯಾಗಿದೆ. ಎಲ್ಲಾ ಭಾರತೀಯರು ತಮ್ಮ ತಮ್ಮ ಕೋಣೆಗಳ ಒಳಗೆ ಸೀಮಿತರಾಗಿದ್ದಾರೆ. ಹೆಚ್ಚಿನವರಿಗೆ ಸಂಬಳದ ಅರ್ಧ ಕಡಿತ ಮಾಡಲಾಗಿದೆ. ತಾತ್ಕಾಲಿಕ ಕೆಲಸಗಳನ್ನು ಮಾಡಿಕೊಂಡಿದ್ದವರು ಕೆಲಸವಿಲ್ಲದೆ ಅತಂತ್ರರಾಗಿದ್ದಾರೆ. ಕೆಲಸ ಹುಡುಕುತ್ತಿದ್ದವರು ಕೆಲಸ ಇಲ್ಲದೆ ಸರಿಯಾದ ವಸತಿಯೂ ಇಲ್ಲದೆ ಅಂಡಲೆಯುತ್ತಿದ್ದಾರೆ. ವಿಮಾನಯಾನ ಗಳು ಸ್ಥಗಿತಗೊಂಡು ಅತ್ತ ರೂಮಿನಲ್ಲೂ ಇರಲಾಗದೆ ಊರಿಗೂ ಬರಲಾಗದೆ ಕೈಯಲ್ಲಿ ಹಣವೂ ಇಲ್ಲದೆ ಪರದಾಡುತ್ತಿರುವ ಭಾರತೀಯರ ಕಷ್ಟಗಳನ್ನು ಹೇಳಿತೀರದು.
ಕೋವಿಡ್ 19 ಸಾಂಕ್ರಾಮಿಕ ವಿರುದ್ಧ ಅಲ್ಲಿರುವ ಅನಿವಾಸಿ ಭಾರತೀಯರನ್ನು ಕ್ವಾರಂಟೈನ್ ನಲ್ಲಿ ಇರಿಸುವ ವ್ಯವಸ್ಥೆಯು ಗಲ್ಫ್ ರಾಷ್ಟ್ರಗಳಲ್ಲಿ ಅತ್ಯಂತ ಸಂಕೀರ್ಣವಾದುದು. ಯಾಕೆಂದರೆ ಅಲ್ಲಿ ಅನಿವಾಸಿ ಭಾರತೀಯರು ಒಂದೊಂದು ಕೋಣೆಗಳಲ್ಲಿ ಕಿಕ್ಕಿರಿದು ವಾಸ ಮಾಡುವುದರಿಂದ ಪ್ರತ್ಯೇಕವಾದ ಕ್ವಾರಂಟೈನ್ ಹೇಗೆತಾನೆ ಸಾಧ್ಯ? ಹಾಗಾಗಿ ನಮ್ಮ ಕರ್ನಾಟಕ ರಾಜ್ಯ ಹಾಗೂ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಎಸ್ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಆಗ್ರಹಿಸಿದ್ದಾರೆ.
1) ಸಂಕಷ್ಟಗಳಿಗೆ ಒಳಗಾಗಿ ಊರಿಗೆ ಮರಳ ಬಯಸುವಂತಹ ಅನಿವಾಸಿ ಭಾರತೀಯರನ್ನು ಕರೆತರುವ ನಿಟ್ಟಿನಲ್ಲಿ ಭಾರತ ಸರಕಾರ ಗಲ್ಫ್ ರಾಷ್ತ್ರಗಳ ಸರಕಾರದ ಜೊತೆಗೆ ಮಾತುಕತೆ ನಡೆಸಿ ಕಾರ್ಯಪ್ರವೃತ್ತವಾಗಬೇಕು
2) ಅಲ್ಲಿನ ಅನಿವಾಸಿ ಭಾರತೀಯರಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯ, ವೆಂಟಿಲೇಟರ್, ಕ್ವಾರಂಟೈನ್ ವ್ಯವಸ್ಥೆಗಳ ಬಗ್ಗೆ ಖಾತರಿಪಡಿಸಬೇಕು
3) ಪ್ರತಿ ಗಲ್ಫ್ ರಾಷ್ಟ್ರಗಳಲ್ಲಿ ಕರ್ನಾಟಕ ರಾಜ್ಯದ ಪ್ರತಿನಿಧಿಗಳನ್ನು ಕಳುಹಿಸಿ ಪರಿಸ್ಥಿತಿಯ ನಿಗಾ ಹಾಗೂ ವ್ಯವಸ್ಥೆಯನ್ನು ಏರ್ಪಡಿಸುವ ಜವಾಬ್ದಾರಿ ನೀಡಬೇಕು
4) ಸಂಕಷ್ಟಗಳನ್ನು ಎದುರಿಸುತ್ತಿರುವ ಗಲ್ಫ್ ಭಾರತೀಯರಿಗೆ ವೈದ್ಯಕೀಯ ವ್ಯವಸ್ಥೆಯನ್ನು ಏರ್ಪಡಿಸುವುದು
5) ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಬಗ್ಗೆ ತನ್ನ ಸಚಿವಾಲಯದಲ್ಲಿ ವಿಶೇಷ ಅಧಿಕಾರಿಗಳ ತಂಡವನ್ನು ನೇಮಿಸಿ ಪರಿಸ್ಥಿತಿಯ ನಿತ್ಯ ಪರಿಶೀಲನೆ ನಡೆಸುವುದು
6) ಭಾರತಕ್ಕೆ ಮರಳ ಬಯಸುವವರನ್ನು ಕ್ವಾರಂಟೈನ್ ನಲ್ಲಿ ಇರಿಸಲು ರಾಜ್ಯದ ಸಂಘ-ಸಂಸ್ಥೆಗಳ ಮತ್ತು ಉದ್ಯಮಿಗಳಿಂದ ಕಟ್ಟಡಗಳನ್ನು ದಾನವಾಗಿ ಪಡೆದು ವ್ಯವಸ್ಥೆ ಮಾಡುವುದು
ಯುರೋಪ್ ಅಮೆರಿಕ ಮುಂತಾದ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಭಾರತೀಯರು ಗಳಿಸಿದ ಹಣವನ್ನು ಅಲ್ಲೇ ವಿನಿಯೋಗಿಸಬೇಕು ಎಂದು ಕಾನೂನುಗಳಿದ್ದರೂ ಗಲ್ಫ್ ರಾಷ್ಟ್ರಗಳಲ್ಲಿ ಮಾತ್ರ ದುಡಿಯುವವರಿಗೆ ಅಂತಹ ಕಾನೂನು ಗಳಿಲ್ಲ ವಾದ್ದರಿಂದ ಭಾರತ ದೇಶದ ಆರ್ಥಿಕತೆಗೆ ಗಲ್ಫ್ ರಾಷ್ಟ್ರದ ಅನಿವಾಸಿ ಭಾರತೀಯರ ಕೊಡುಗೆ ಅಪಾರವಾಗಿದೆ. ದೇಶದ ಆರ್ಥಿಕತೆಯ ದೃಢವಾದ ಶಕ್ತಿ ಎನಿಸಿಕೊಂಡಿರುವ ಗಲ್ಫ್ ಅನಿವಾಸಿ ಭಾರತೀಯರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ತಕ್ಷಣ ಧನಾತ್ಮಕವಾಗಿ ಕಾರ್ಯಪ್ರವೃತ್ತರಾಗಬೇಕೆಂದು ಎಸ್ಡಿಪಿಐ ಕರ್ನಾಟಕ ರಾಜ್ಯ ಆಗ್ರಹಿಸುತ್ತದೆ ಎಂದು ಎಸ್ಡಿಪಿಐ ಕರ್ನಾಟಕ ರಾಜ್ಯ ಅಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
No comments
Post a Comment