ಮಡಿಕೇರಿ ಏ.14(Times Of Coorg):-ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ವಹಿಸಿದ್ದು, ಮುಂದಿನ ದಿನಗಳಲ್ಲಿಯೂ ಸಾರ್ವಜನಿಕರು ಇದೇ ರೀತಿ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮನವಿ ಮಾಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊರೊನಾ ವೈರಸ್ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮವಹಿಸಿದ್ದು, ಸಾರ್ವಜನಿಕರ ಸಹಕಾರದಿಂದ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಾಧ್ಯವಾಗಿದೆ. ಆ ದಿಸೆಯಲ್ಲಿ ಮುಂದಿನ ದಿನಗಳಲ್ಲಿಯೂ ಸಹ ಇನ್ನಷ್ಟು ಎಚ್ಚರಿಕೆ ವಹಿಸಬೇಕಿದ್ದು, ಇದರ ಮುಂದುವರೆದ ಭಾಗವಾಗಿ ಕೆಲವು ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯ ಮಾಹಿತಿ:- ಟೆಲಿ ಮೆಡಿಷನ್ ಫೀವರ್ ಕ್ಲಿನಿಕ್ ಸ್ಥಾಪನೆ: ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಟೆಲಿ ಮೆಡಿಷನ್ ಫೀವರ್ ಕ್ಲಿನಿಕ್ ನ್ನು ಸ್ಥಾಪನೆ ಮಾಡಲಾಗಿದ್ದು, ಈ ಸಂಬಂಧ ಟೆಲಿ ಮೆಡಿಷನ್ ವೆಬ್ ಸೈಟ್ www.kodaguedoc.letstart.in ನ್ನು ಇಂದು ಲಾಂಚ್ ಮಾಡಲಾಗಿದೆ. ಹಾಗೂ ಈ ಸಂಬಂಧ ಟೆಲಿ ಮೆಡಿಷನ್ ಫೀವರ್ ಕ್ಲಿನಿಕ್ ಕಂಟ್ರೋಲ್ ರೂಂ ನ್ನು ಸಹ ಸ್ಥಾಪಿಸಲಾಗಿದೆ. ಕಂಟ್ರೋಲ್ ರೂಂ ಸಂಖ್ಯೆ: 9480610807 ಆಗಿರುತ್ತದೆ.
ಈ ಕಾರ್ಯಕ್ರಮದಡಿಯಲ್ಲಿ ಜ್ವರ ಸಂಬಂಧಿತ ಲಕ್ಷಣಗಳಿರುವ ವ್ಯಕ್ತಿಯು ಆಸ್ಪತ್ರೆಗೆ ಬರುವ ಬದಲಿಗೆ ತನ್ನ ಮನೆಯಿಂದಲೇ ವೆಬ್ ಸೈಟ್ ಗೆ ಲಾಗಿನ್ ಆಗಿ ರಿಜಿಸ್ಟರ್ ಮಾಡಿಕೊಂಡ ನಂತರ ಲಭ್ಯವಾಗುವ ರಿಜಿಸ್ಟರ್ ಐಡಿ ಯೊಂದಿಗೆ ಟೆಲಿ ಮೆಡಿಷನ್ ಕಂಟ್ರೋಲ್ ರೂಂ ಸಂಖ್ಯೆಗೆ ಕರೆ ಮಾಡಬೇಕು. ಆಗ ಸದರಿ ಕಂಟ್ರೋಲ್ ರೂಂ ನಲ್ಲಿ ನಿಯೋಜಿತರಾಗಿರುವ ವೈದ್ಯರು ಇವರ ರಿಜಿಸ್ಟರ್ ಐಡಿಯನ್ನು ಪಡೆದು, ರೋಗಿಯಿಂದ ರೋಗ ಲಕ್ಷಣಗಳನ್ನು ಪಡೆದು, prescriptionನ್ನು ವೆಬ್ ಸೈಟ್ ನಲ್ಲಿ ದಾಖಲಿಸುತ್ತಾರೆ. ನಂತರ ರೋಗಿಯು ಪುನ: ವೆಬ್ ಸೈಟ್ ಗೆ ಲಾಗಿನ್ ಆಗಿ ವೈದ್ಯರ prescriptionನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.
ಇದರಿಂದ ರೋಗಿಯು ಮನೆಯಲ್ಲಿಯೇ ವೈದ್ಯರ ಸಲಹೆಯನ್ನು ಪಡೆಯುವುದಲ್ಲದೆ. ಆಸ್ಪತ್ರೆಗೆ ಬರುವುದು ತಪ್ಪುತ್ತದೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಸುಲಭವಾಗುತ್ತದೆ.
ಗ್ರಾಮ ಮಟ್ಟದಲ್ಲಿ ಜ್ವರ ಪ್ರಕರಣಗಳನ್ನು ಪತ್ತೆ ಹಚ್ಚುವಿಕೆ ಕಾರ್ಯಕ್ರಮ: ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರನ್ನು ಬಳಸಿಕೊಂಡು ಮಡಿಕೇರಿಯಲ್ಲಿ 113, ಸೋಮವಾರಪೇಟೆಯಲ್ಲಿ 205 ಮತ್ತು ವಿರಾಜಪೇಟೆಯಲ್ಲಿ 123 ತಂಡಗಳು ಒಟ್ಟಾಗಿ ಜಿಲ್ಲೆಯಲ್ಲಿ 441 ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳಿಗೆ ನಿಗಧಿಪಡಿಸಿದ ನಮೂನೆಯನ್ನು ವಿತರಿಸಲಾಗಿದೆ.
ಈ ತಂಡಗಳು ತಮ್ಮ ವ್ಯಾಪ್ತಿಗೆ ಬರುವ ಗ್ರಾಮ, ಚೆಕ್ ಪೆÇೀಸ್ಟ್, ಖಾಸಗಿ ಆಸ್ಪತ್ರೆ, ಕ್ಲಿನಿಕ್ ಗಳಿಗೆ ಭೇಟಿ ನೀಡಿ ನೀಡಿರುವ ನಮೂನೆಯಲ್ಲಿ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಕಿಡ್ನಿ ಸಮಸ್ಯೆ ಇತ್ಯಾದಿ ರೋಗಗಳಿಂದ ಬಳಲುತ್ತಿರುವರಿಗೆ ಜ್ವರ ಬಂದಿರುವ ಪ್ರಕರಣಗಳನ್ನು ದಾಖಲಿಸಿ ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡುತ್ತಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅವುಗಳನ್ನು ಕ್ರೋಢೀಕರಿಸಿ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ಸಲ್ಲಿಸುವರು. ತಾಲ್ಲೂಕು ಆರೋಗ್ಯಾಧಿಕಾರಿಗಳು ಅವುಗಳನ್ನು ಪರಿಶೀಲಿಸಿ ಜಿಲ್ಲಾ ಸರ್ವೇಕ್ಷಣಾಧಿಕಾರಿಯವರಿಗೆ ನೀಡುತ್ತಾರೆ. ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಅವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಕೊರೋನ ಸಂಬಂಧ ಲಕ್ಷಣಗಳ ಬಗ್ಗೆ ಸಂಶಯ ಬಂದಲ್ಲಿ ಅಂತಹವರ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಲು ನಿರ್ದೇಶನ ನೀಡುವರು.
ಇದರಿಂದ ಕೊರೋನ ರೋಗವನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಲು ಸುಲಭವಾಗುವುದಲ್ಲದೆ High Risk ಪ್ರಕರಣಗಳನ್ನು ಸಹ ಸುಲಭವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಬಹುದು ಹಾಗೂ ಸೋಂಕು ಹರಡುವುದನ್ನು ತಡೆಗಟ್ಟಬಹುದು.
ಹಿರಿಯ ನಾಗರೀಕರ ಸುರಕ್ಷತೆ ಬಗ್ಗೆ: ಕೋವಿಡ್-19 ಸೋಂಕು ಇತರೆ ಕಾಯಿಲೆಗಳನ್ನು ಹೊಂದಿರುವವರು ಮತ್ತು ವಯೋ ವೃದ್ಧರಿಗೆ ಹರಡದಂತೆ ಜಿಲ್ಲಾಡಳಿತದಿಂದ ಎಚ್ಚರ ವಹಿಸಲಾಗುತ್ತಿದೆ. ಈ ಬಗ್ಗೆ ತಮ್ಮ ಮನೆಯಲ್ಲಿರುವ ರೋಗಿಗಳು/ವಯೋ ವೃದ್ಧರನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಉಪಚರಿಸಲು, ಅವರು ಹೊರಗೆ ಬಾರದಂತೆ ಎಚ್ಚರ ವಹಿಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಜಿಲ್ಲಾಡಳಿತದಿಂದ ರೂಪಿಸಲಾಗುತ್ತಿದೆ.
ಕೃತಜ್ಞತೆ: ಕೋವಿಡ್-19 ರ ಸಂಬಂಧ ದೃಢಪಟ್ಟ ಪ್ರಕರಣಗಳು ವರದಿಯಾಗಿದ್ದು, 14 ದಿನಗಳ ನಂತರ ನಿಯಂತ್ರಣಕ್ಕೆ ಬಂದ ದೇಶದ 25 ಜಿಲ್ಲೆಗಳ ಪಟ್ಟಿಯನ್ನು ಭಾರತ ಸರ್ಕಾರವು ಪ್ರಕಟಿಸಿದೆ. ಇಡೀ ದೇಶದಲ್ಲಿ ದೃಢಪಟ್ಟ ಪ್ರಕರಣಗಳು ವರದಿಯಾದ ನಂತರ ಹಿಂದಿನ 14 ದಿನಗಳಲ್ಲಿ ಹೊಸ ಸೋಂಕು ವರದಿಯಾಗದ ಕೇವಲ 25 ಜಿಲ್ಲೆಗಳ ಪಟ್ಟಿಯಲ್ಲಿ ಕೊಡಗು ಜಿಲ್ಲೆಯೂ ಸಹ ಒಂದು. ಕೊಡಗು ಜಿಲ್ಲೆಯ ಈ ಸಾಧನೆಗೆ ಕಾರಣರಾದ ಕೊಡಗಿನ ಜನತೆ, ಮುಂಚೂಣಿಯ ಆರೋಗ್ಯ ಕಾರ್ಯಕರ್ತರು, ಪೆÇಲೀಸ್ ಇಲಾಖೆ ಮತ್ತು ಸ್ವಯಂ ಸೇವಕರಿಗೆ ಕೊಡಗು ಜಿಲ್ಲಾಡಳಿತ ಧನ್ಯವಾದಗಳನ್ನು ಸಲ್ಲಿಸುತ್ತದೆ. ಇದು ಕೇವಲ ಆರಂಭವಾಗಿದ್ದು, ಕೊರೊನಾ ವಿರುದ್ಧದ ಹೋರಾಟದಲ್ಲಿ ಇನ್ನೂ ಮುಂದೆ ಸಾಗಬೇಕಾಗಿದೆ. ಇನ್ನು ಮುಂದೆಯೂ ಇದೇ ರೀತಿಯ ಸಹಕಾರವನ್ನು ಜಿಲ್ಲಾಡಳಿತ ತಮ್ಮಿಂದ ಬಯಸುತ್ತದೆ. ಕೊರೊನಾ ವಿರುದ್ಧ ಜೊತೆಯಾಗಿ ಹೊರಾಡಬೇಕಿದೆ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೋರಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ.ಸುಮನ್ ಅವರು ಮಾತನಾಡಿ ಜಿಲ್ಲೆಯಲ್ಲಿ 15 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದ್ದು, ಜಿಲ್ಲೆಯ ಗಡಿ ಪ್ರದೇಶದಲ್ಲಿ ಹೆಚ್ಚಿನ ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಕಾರ್ಯಪ್ಪ, ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ರಾಮಚಂದ್ರ ಕಾಮತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಅರುಂಧತಿ, ಅನನ್ಯ ವಾಸುದೇವ್ ಇತರರು ಇದ್ದರು.
No comments
Post a Comment