ಮಡಿಕೇರಿ ಸೆ.16 (web@timesofcoorg):-ಮಡಿಕೇರಿ ತಾಲ್ಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಪ್ರಾಧಿಕಾರ ಮಂಜೂರು ಮಾಡಲು ಮಡಿಕೇರಿ ತಾಲ್ಲೂಕಿನ ಅಯ್ಯಂಗೇರಿ, ಮೊಣ್ಣಂಗೇರಿ, ಮಕ್ಕಂದೂರು, ಹೆರವನಾಡು, ಮೇಕೇರಿ, ಎಂ. ಚೆಂಬು, ಹೊದ್ದೂರು, ಚೈನ್ ಗೇಟ್, ಮಡಿಕೇರಿ ನಗರ, ಗಣಪತಿ ಬೀದಿ, ಮಡಿಕೇರಿ ನಗರ, ದೇಚೂರು ಬಡಾವಣೆ ಮಡಿಕೇರಿ ನಗರ, ಕೆ.ಪೆರಾಜೆ, ಚೆತ್ತುಕಾಯ ಕರಿಕೆ, ಅರೆಕಾಡು, ಚೆಯ್ಯಂಡಾಣೆ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕೆಲವು ನ್ಯಾಯಬೆಲೆ ಅಂಗಡಿಗಳು ರದ್ದು/ ಹೆಚ್ಚುವರಿ ಪಡಿತರ ಚೀಟಿ/ ಪರ್ಯಾಯ ವ್ಯವಸ್ಥೆ ಹೊಂದಿರುವ ಸ್ಥಳಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯುವ ಹಿನ್ನೆಲೆಯಲ್ಲಿ ಕರ್ನಾಟಕ ಅಗತ್ಯ ವಸ್ತುಗಳ ಸಾವಿಪ (ನಿಯಂತ್ರಣ) ಆದೇಶ 2016 ಮತ್ತು ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ದತಿ (ನಿಯಂತ್ರಣ) (ತಿದ್ದುಪಡಿ) ಆದೇಶ 2017, 2018 ಮತ್ತು 2020ರ ಷರತ್ತುಗಳಿಗೆ ಒಳಪಟ್ಟು, ಈ ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯ ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ನ್ಯಾಯಬೆಲೆ ಅಂಗಡಿಯನ್ನು (ಅಗತ್ಯ ವಸ್ತುಗಳಾದ ಅಕ್ಕಿ, ಗೋಧಿ ಹಾಗೂ ಆಗಿಂದ್ದಾಗ್ಗೆ ಇಲಾಖೆಯಿಂದ ಸೂಚಿಸಲ್ಪಡುವ ಆಹಾರ ಧಾನ್ಯಗಳ ಮಾರಾಟಕ್ಕಾಗಿ) ತೆರೆಯುವ ಅಗತ್ಯವಿದೆ.
ಕರ್ನಾಟಕ ಅಗತ್ಯ ವಸ್ತುಗಳ ಸಾವಿಪ (ನಿಯಂತ್ರಣ) ಆದೇಶ 2016 ಮತ್ತು ನಿಯಂತ್ರಣ (ತಿದ್ದುಪಡಿ) ಆದೇಶ 2017, 2018 ಮತ್ತು 2020ರ ಕ್ಲಾಸ್ 6(1) (ಬಿ) (1), (2) ಮತ್ತು (3)ರನ್ವಯ ಆದ್ಯತೆಗೆ ಅನುಗುಣವಾಗಿ ನ್ಯಾಯಬೆಲೆ ಅಂಗಡಿ ಪ್ರಾಧಿಕರಣವನ್ನು ಮಂಜೂರು ಮಾಡಬಹುದಾಗಿದೆ. I) ಕ್ಲಾಸ್ 6(1) (ಬಿ) (1)ರನ್ವಯ ಕರ್ನಾಟಕ ರಾಜ್ಯ ಸರ್ಕಾರಿ ಸ್ವಾಮ್ಯದ ನಿಗಮಗಳು/ ಕಂಪನಿಗಳು ಅಥವಾ ಗ್ರಾಮ ಪಂಚಾಯ್ತಿಗಳು/ ನಗರ ಸ್ಥಳೀಯ ಸಂಸ್ಥೆಗಳು.
II) ಕ್ಲಾಸ್ 6(1) (ಬಿ) (2)ರನ್ವಯ ತಾಲ್ಲೂಕು ಕೃಷಿ ಪ್ರಾಥಮಿಕ ಪತ್ತಿನ ಮಾರಾಟ ಸಹಕಾರ ಸಂಘಗಳು, ಪ್ರಾಥಮಿಕ ಕೃಷಿ ಸಹಕಾರ ಸಂಘ ಅಥವಾ ವ್ಯವಸಾಯೋತ್ಪನ್ನ ಸಹಕಾರ ಸಂಘಗಳು, ತೋಟಗಾರಿಕಾ ಉತ್ಪನ್ನಗಳ ಬಳಕೆದಾರರ ಸಹಕಾರ ಸಂಘ, ನೋಂದಾಯಿತ ಸಹಕಾರ ಸಂಘಗಳು, ನೋಂದಾಯಿತ ಪ್ರಾಥಮಿಕ ಬಳಕೆದಾರರ ಸಹಕಾರ ಸಂಘಗಳು, ಬೃಹತ್ ಪ್ರಮಾಣದ ಆದಿವಾಸಿ ವಿವಿದೋದ್ದೇಶ ಸಹಕಾರ ಸಂಘಗಳು, ನೋಂದಾಯಿತ ನೇಕಾರರ ಸಹಕಾರ ಸಂಘಗಳು, ನೊಂದಾಯಿತ ಮಹಿಳಾ ವಿವಿದೋದ್ದೇಶ ಸಹಕಾರ ಸಂಘಗಳು, ನೋಂದಾಯಿತ ವಿವಿದೋದ್ದೇಶ ಸಹಕಾರ ಸಂಘಗಳು, ದೈಹಿಕ ಅಂಗವಿಕಲ ಕಲ್ಯಾಣ ಸಹಕಾರ ಸಂಘಗಳು, ಬ್ಯಾಂಕುಗಳನ್ನು ನಡೆಸುತ್ತಿರುವ ಸಹಕಾರ ಸಂಘಗಳು ಅಥವಾ ಸಹಕಾರ ಬ್ಯಾಂಕುಗಳು, ಸ್ತ್ರೀ ಶಕ್ತಿ ಸಂಘಗಳು/ ಮಹಿಳಾ ಸ್ವ ಸಹಾಯ ಸಂಘಗಳು. (ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಯಿಂದ ನೋಂದಣಿಯಾಗಿರಬೇಕು).
III) ಕ್ಲಾಸ್ 6(1) (ಬಿ) (3)ರನ್ವಯ ವಿಕಲಚೇತನರು, ಲಿಂಗತ್ವ ಅಲ್ಪಸಂಖ್ಯಾತರು.
ಸೂಚನೆ:-ಲೆಕ್ಕ ಪರಿಶೋಧನೆ ವೇಳೆ ನೀಡಿರುವ ಗ್ರೇಡ್ (ಎ/ಬಿ/ಸಿ) ಗಳಿಗನುಗುಣವಾಗಿ ನೋಂದಾಯಿತ ಸಂಘಗಳ ಕಾರ್ಯ ವೈಖರಿಯ ಮಾನದಂಡಗಳಿಗೆ ಒಳಪಟ್ಟಿರುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಗುರುತಿಸಲ್ಪಟ್ಟ ಸ್ತ್ರೀ ಶಕ್ತಿ ಸಂಘಗಳು ಮತ್ತು ಮಹಿಳಾ ಸ್ವ ಸಹಾಯ ಸಂಘಗಳು ಸ್ಥಾಪನೆಗೊಂಡು ಕನಿಷ್ಟ ಮೂರು ವರ್ಷಗಳು ಕಳೆದಿರಬೇಕು ಹಾಗೂ ಕನಿಷ್ಟ ಒಂದು ವರ್ಷದಿಂದ ರೂ 1 ಲಕ್ಷಗಳಿಗೆ ಕಡಿಮೆ ಇಲ್ಲದಂತೆ ಬ್ಯಾಂಕ್ ಉಳಿತಾಯ ಹೊಂದಿರುವುದು.
ಸ್ತ್ರೀ ಶಕ್ತಿ ಹಾಗೂ ಮಹಿಳಾ ಸ್ವಸಹಾಯ ಸಂಘಗಳನ್ನು ಹೊರತುಪಡಿಸಿ ಉಳಿದ ಸಂಘಗಳು ನೋಂದಾವಣೆಗೊಂಡು 03 ವರ್ಷಗಳು ಪೂರೈಸಿರುವುದು ಹಾಗೂ ಸಂಘವೂ ನಿರಂತರವಾಗಿ ಎರಡು ವರ್ಷಗಳಿಂದ ರೂ 2 ಲಕ್ಷಕ್ಕೆ ಕಡಿಮೆ ಇಲ್ಲದಂತೆ ಬ್ಯಾಂಕ್ ಉಳಿತಾಯವನ್ನು ಹೊಂದಿರುವ ಷರತ್ತನ್ನು ಒಳಗೊಂಡಿದೆ. ಕಾಲಕಾಲಕ್ಕೆ ಸರ್ಕಾರದಿಂದ ಹೊರಡಿಸಿರುವ ಸುತ್ತೋಲೆ ಷರತ್ತುಗಳನ್ನು ಪೂರೈಸುವಂತೆ ಇರಬೇಕು.
ಅರ್ಜಿ ಸಲ್ಲಿಸುವ ಮುನ್ನ ಅರ್ಜಿದಾರರು ಅರ್ಜಿ ಫಾರಂಗಳು ‘ಎ’ ನಮೂನೆಯಲ್ಲಿರಬೇಕು. ಅರ್ಜಿದಾರರು ಅಗತ್ಯ ವಸ್ತುಗಳ ಕಾಯ್ದೆಯಡಿ ಶಿಕ್ಷೆಗೆ ಗುರಿಯಾಗಿರಬಾರದು. ಅಗತ್ಯ ವಸ್ತುಗಳ ಕಾಯ್ದೆಯಡಿ ಸಗಟು/ ಚಿಲ್ಲರೆ ಲೈಸನ್ಸ್ ಹೊಂದಿದ್ದು, ವಜಾ ಆಗಿರಬಾರದು ಅಥವಾ ನ್ಯಾಯಬೆಲೆ ಅಂಗಡಿ ಪ್ರಾಧಿಕರಣವನ್ನು ಹೊಂದಿದ್ದು, ವಜಾ ಆಗಿರಬಾರದು. ನ್ಯಾಯಬೆಲೆ ಅಂಗಡಿ ನಡೆಸಲು ಸೂಕ್ತ ವ್ಯಾಪಾರ ಮಳಿಗೆಯನ್ನು ಹೊಂದಿರಬೇಕು. ಕನಿಷ್ಠ ಎರಡು ತಿಂಗಳ ಪಡಿತರವನ್ನು ದಾಸ್ತಾನಿಡುವ ಸಾಮಥ್ರ್ಯವುಳ್ಳ ಗೋದಾಮನ್ನು ಹೊಂದಿರಬೇಕು. ಸಹಕಾರ ಸಂಘ ಎಂದರೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 (1959ರ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ) ರಡಿಯಲ್ಲಿ ನೋಂದಣಿಯಾದ ಒಂದು ಸಹಕಾರ ಸಂಘ. ಆರ್ಥಿಕವಾಗಿ ಸದೃಡವಾದ ಸಹಕಾರ ಸಂಘ ಅಥವಾ ಸಂಘಗಳು ಮಾತ್ರ (ಕಳೆದ ಮೂರು ವರ್ಷಗಳ) ಲೆಕ್ಕಗಳನ್ನು ಆಡಿಟ್ ಮಾಡಿಸಿರುವ ಮತ್ತು ಅವುಗಳು ಅರ್ಜಿಯನ್ನು ಸಲ್ಲಿಸಲು ನಿಗಧಿ ಪಡಿಸಿರುವ ದಿನಾಂಕಕ್ಕಿಂತ ಕನಿಷ್ಟ ಮೂರು ವರ್ಷಗಳಿಗೆ ಮೇಲ್ಪಟ್ಟು ಕಾರ್ಯ ನಿರತರಾಗಿರಬೇಕು, ಪಡಿತರ ಎತ್ತುವಳಿ ಮತ್ತು ವಿತರಣೆಗೆ ಸಂಘದಲ್ಲಿ ಲಭ್ಯವಿರುವ ಅಗತ್ಯ ಸಿಬ್ಬಂದಿಗಳ ವಿವರ (ಕನಿಷ್ಠ ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರುವ ಮಾಹಿತಿ) ಸಲ್ಲಿಸಬೇಕು, ಉಲ್ಲೇಖ(1)ರ ಸರ್ಕಾರದ ಆದೇಶದನ್ವಯ ನೇರ ನೇಮಕಾತಿಗೆ ಅರ್ಹತೆ ಹೊಂದಿರುವವರು ನ್ಯಾಯಬೆಲೆ ಅಂಗಡಿ ಕೋರಿ ಅರ್ಜಿ ಸಲ್ಲಿಸಿದಲ್ಲಿ ಪ್ರಕಟಣೆ ರದ್ದಾಗುವುದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಲು ಸೂಚಿಸಿದೆ.
ನಿಗಧಿತ ನಮೂನೆಯ ಅರ್ಜಿ ಜೊತೆ ನ್ಯಾಯಬೆಲೆ ಅಂಗಡಿ ದಾಸ್ತಾನನ್ನು ಶೇಖರಿಸಲು ಸೂಕ್ತವಾಗಿರುವ ಮಳಿಗೆಯ ಬಗ್ಗೆ ದಾಖಲೆಗಳನ್ನು ಒದಗಿಸುವುದು. ಸಹಕಾರಿ ಸಂಘಗಳ ನೋಂದಣಿ ಪತ್ರ ನವೀಕರಣ ಪ್ರತಿ, ಮತ್ತು ಬೈಲಾಗಳ ಪ್ರತಿಗಳನ್ನು ಒದಗಿಸುವುದು. ಬ್ಯಾಂಕ್‍ನಲ್ಲಿ ಠೇವಣಿ ಹೊಂದಿರುವ ಬಗ್ಗೆ ದಾಖಲೆ, ಸಹಕಾರಿ ಸಂಘ, ಮತ್ತಿತರ ಸಂಘಗಳ ಆಡಿಟ್ ವರದಿಗಳು/ಇತರೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸತಕ್ಕದ್ದು.
ಆಸಕ್ತದಾರರು ಷರತ್ತುಗಳಿಗೆ ಒಳಪಟ್ಟು, ಅಗತ್ಯ ದಾಖಲೆಗಳೊಂದಿಗೆ ನಿಗಧಿತ (ಫಾರಂ-ಎ) ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಉಪ ನಿರ್ದೇಶಕರ ಕಚೇರಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾಡಳಿತ ಭವನ ಇಲ್ಲಿಗೆ ಪ್ರಕಟಣೆ ಹೊರಡಿಸಿದ 30 ದಿನಗಳ ಒಳಗೆ ಸಲ್ಲಿಸಬೇಕು ಎಂದು ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
No comments
Post a Comment