ಮಲೇರಿಯಾ, ಡೆಂಗಿ ಜ್ವರ, ಚಿಕುಂಗುನ್ಯ ಹಾಗೂ ಮೆದುಳು ಜ್ವರ ರೋಗಗಳ ಬಗ್ಗೆ ಮುನ್ನೆಚ್ಚರ ಇರಲಿ : ಜಿಲ್ಲಾಧಿಕಾರಿ

No comments

ಮಡಿಕೇರಿ ಸೆ.23(web@timesofcoorg):-ಕೊಡಗು ಜಿಲ್ಲೆಯಲ್ಲಿ ರೋಗವಾಹಕ ರೋಗಗಳಾದ ಮಲೇರಿಯಾ, ಡೆಂಗಿ ಜ್ವರ, ಚಿಕುಂಗುನ್ಯ ಹಾಗೂ ಮೆದುಳು ಜ್ವರ ರೋಗಗಳು ಹರದಡಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮನವಿ ಮಾಡಿದ್ದಾರೆ.

ಮಲೇರಿಯ ರೋಗವು ಪ್ಲಾಸ್ಮೋಡಿಯಂ ಎಂಬ ಪರಾವಲಂಬಿ ಸೂಕ್ಷ್ಮಾಣುವಿನಿಂದ ಉಂಟಾಗುತ್ತವೆ ಮತ್ತು ಸೋಂಕು ಹೊಂದಿದ ಹೆಣ್ಣು ಅನಾಫಿಲೀಸ್ ಸೊಳ್ಳೆಗಳು ಮಲೇರಿಯ ರೋಗವನ್ನು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ. 

       ಮಲೇರಿಯ ರೋಗದ ಲಕ್ಷಣಗಳು:- ಸಾಮಾನ್ಯವಾಗಿ ಮಲೇರಿಯ ಮೂರು ಹಂತಗಳ ಲಕ್ಷಣಗಳನ್ನು ಹೊಂದಿದ್ದು,       ಚಳಿಯ ಹಂತ: ಚಳಿಯ ಜೊತೆಯಲ್ಲಿ ನಡುಕ ಹಾಗೂ ತಲೆನೋವು ಇರುತ್ತದೆ. ಇದು ಸುಮಾರು 15 ನಿಮಿಷದಿಂದ ಒಂದು ಗಂಟೆಯ ಸಮಯ ಇರಬಹುದು.

       ಬಿಸಿಯ/ ಜ್ವರದ ಹಂತ: ಜ್ವರ ತೀವ್ರವಾಗಿ ಇರುತ್ತದೆ. ವಿಪರೀತ ತಲೆನೋವು, ವಾಕರಿಕೆ, ವಾಂತಿಯಾಗುವಂತೆ ಅನಿಸುತ್ತದೆ. ವಿಪರೀತ ಬಾಯರಿಕೆ ಅನಿಸುತ್ತದೆ. ಈ ಹಂತ 2 ರಿಂದ 6 ಗಂಟೆಗಳ ಕಾಲ ಇರುತ್ತದೆ.

       ಬೆವರುವಿಕೆಯ ಹಂತ: ಜ್ವರ ಕಡಿಮೆಯಾಗುತ್ತದೆ ಮತ್ತು ದೇಹವಿಡೀ ವಿಪರೀತ ಬೆವರುತ್ತದೆ. ಸಾಮಾನ್ಯವಾಗಿ ರೋಗಿಗೆ ಗಾಢ ನಿದ್ರೆ ಬರುತ್ತದೆ. ಎಚ್ಚರವಾದಾಗ ಬಳಲಿ ಸುಸ್ತಾದ ಅನುಭವ ಆಗುತ್ತದೆ. ಈ ಹಂತ 2 ರಿಂದ 4 ಗಂಟೆಗಳ ಕಾಲ ಇರುತ್ತದೆ.

       ರಕ್ತಲೇಪನ ಪರೀಕ್ಷೆಯಿಂದ ದೃಢಪಟ್ಟಾಗ ಅಂತಹ ಪ್ರಕರಣಗಳನ್ನು ಖಚಿತ ಮಲೇರಿಯ ಪ್ರಕರಣವೆಂದು ಪರಿಗಣಿಸಿ, ರಾಷ್ಟ್ರೀಯ ಔಷಧೋಪಚಾರ ನೀತಿಯಂತೆ, ಮಲೇರಿಯ ರೋಗದ ಪ್ರಬೇಧಕ್ಕೆ ತಕ್ಕಂತೆ, ಚಿಕಿತ್ಸೆ ನೀಡಲಾಗುತ್ತದೆ.

       ಕೊಡಗು ಜಿಲ್ಲೆಯಲ್ಲಿ ಮಲೇರಿಯ ಸ್ಥಿತಿ: 2021 ರಲ್ಲಿ ಆಗಸ್ಟ್-2021 ರ ಮಾಸಾಂತ್ಯದದವರೆಗೆ 4 ಮಲೇರಿಯಾ ಪ್ರಕರಣಗಳು (Imported cases ವರದಿಯಾಗಿದ್ದು ಇವುಗಳಲ್ಲಿ, 3 ಪ್ರಕರಣಗಳು ಮಂಗಳೂರಿನಲ್ಲಿ ಇಲ್ಲಿ ವಾಸವಿದ್ದಾಗ ಸೋಂಕಿಗೆ ಒಳಗಾಗಿ ಜಿಲ್ಲೆಗೆ ಬಂದಾಗ ಪತ್ತೆಯಾಗಿದ್ದು, ಚಿಕಿತ್ಸೆ ಪಡೆದು ಗುಣಮುಖವಾಗಿದ್ದಾರೆ. ಇನ್ನುಳಿದ 1 ಪ್ರಕರಣ ಜಾರ್ಖಂಡ್ ರಾಜ್ಯದಿಂದ ಬಂದ ವಲಸಿಗ ಮಲೇರಿಯಾ ಪ್ರಕರಣವಾಗಿದ್ದು, ಚಿಕಿತ್ಸೆ ಪಡೆದು ಮತ್ತೆ ಜಾರ್ಖಂಡ್ ರಾಜ್ಯಕ್ಕೆ ವಾಪಸ್ಸಾಗಿರುತ್ತಾರೆ. 

           ಮಲೇರಿಯಾ ರೋಗದ ನಿಯಂತ್ರಣದಲ್ಲಿ ಸಾರ್ವಜನಿಕರು ವಹಿಸಬೇಕಾದ ಕ್ರಮಗಳು; ಯಾವುದೇ ಜ್ವರ ಮಲೇರಿಯಾವಿರಬಹುದು, ತಕ್ಷಣ ವೈದ್ಯರ ಸಲಹೆ ಪಡೆದು ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತಲೇಪನ ಪರೀಕ್ಷೆ ಮಾಡಿಸಿ. ಶೀಘ್ರ ಪತ್ತೆ ಮತ್ತು ಸಂಪೂರ್ಣ ಚಿಕಿತ್ಸೆಯಿಂದ ಮಲೇರಿಯಾ ಗುಣವಾಗುತ್ತದೆ.

       ಈ ಸೇವೆಗಳು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದೆ. ನಿಂತ ನೀರು, ಸೊಳ್ಳೆಗಳ ಉತ್ಪತ್ತಿಯ ತಾಣ, ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಿ, ಇವುಗಳ ಉತ್ಪತ್ತಿಯನ್ನು ತಡೆಗಟ್ಟಿ. ಮಲಗುವಾಗ ತಪ್ಪದೆ ಸೊಳ್ಳೆಪರದೆ ಉಪಯೋಗಿಸಿ ಮಲೇರಿಯಾ, ಡೆಂಗಿ, ಚಿಕುಂಗುನ್ಯ, ಆನೆಕಾಲು ರೋಗ ಮತ್ತು ಮೆದುಳು ಜ್ವರ ರೋಗಗಳಿಂದ ಮುಕ್ತರಾಗಿ. ಶಾಶ್ವತ ನೀರಿನ ತಾಣಗಳಾದ ಬಾವಿ, ಕೆರೆ, ಕೃಷಿ ಹೊಂಡ ಮುಂತಾದ ನೀರಿನ ತಾಣಗಳಿಗೆ ಲಾರ್ವಾಹಾರಿ ಮೀನುಗಳನ್ನು ಬಿಟ್ಟು ಸೊಳ್ಳೆ ಉತ್ಪತ್ತಿ ತಡೆಗಟ್ಟಬಹುದು.

      ಡೆಂಗಿ ಮತ್ತು ಚಿಕುಂಗುನ್ಯ ರೋಗಗಳು;-ಡೆಂಗಿ ಮತ್ತು ಚಿಕುಂಗುನ್ಯ ರೋಗಗಳು ವೈರಾಣುವಿನಿಂದ ಬರುವ ಕಾಯಿಲೆಗಳು. ಇವು ಈಡಿಸ್ ಜಾತಿಯ ಸೊಳ್ಳೆಗಳ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಡೆಂಗೀ ಜ್ವರವು ಒಂದು ಮಾರಕವಾದ ಕಾಯಿಲೆ, ಆದರೆ ಚಿಕುಂಗುನ್ಯ ಮಾರಣಾಂತಿಕವಲ್ಲ.

     ಡೆಂಗಿ ರೋಗದಲ್ಲಿ ಮೂರು ಸ್ವರೂಪಗಳಿವೆ. ಡೆಂಗಿ ಜ್ವರ(ಸಾಮಾನ್ಯ), ಡೆಂಗಿ ರಕ್ತಸ್ರಾವ ಜ್ವರ (ಡಿ.ಹೆಚ್.ಎಫ್), ಡೆಂಗಿ ಆಘಾತಕರ ಸ್ವರೂಪ (ಡಿ.ಎಸ್.ಎಸ್), 

     ರೋಗ ಲಕ್ಷಣಗಳು: ಡೆಂಗಿ ಜ್ವರ ತೀವ್ರ ಜ್ವರ, ತಲೆ ನೋವು, ಕಣ್ಣುಗಳ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು. ಡೆಂಗಿ ರಕ್ತಸ್ರಾವ ಜ್ವರ: ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ, ಚರ್ಮದ ಮೇಲೆ ರಕ್ತ ಸ್ರಾವದ ಗುರುತುಗಳು, ಕಪ್ಪುಮಲ ವಿಸರ್ಜನೆ, ವಿಪರೀತ ಬಾಯಾರಿಕೆ, ತಣ್ಣನೆಯ ಬಿಳುಚಿಕೊಂಡ ಚರ್ಮ, ಚಡಪಡಿಸುವಿಕೆ ಅಥವಾ ಜ್ಞಾನ ತಪ್ಪುವುದು. ಜ್ವರ ಬಂದ 3-5 ದಿನಗಳಲ್ಲಿ ಮೂಗು ಮತ್ತು ವಸಡಿನಲ್ಲಿ ರಕ್ತ ಸ್ರಾವದ ಚಿನ್ಹೆಗಳು ಕಂಡು ಬರುತ್ತದೆ. 5-6 ದಿನಗಳ ನಂತರವೂ ಜ್ವರ ಮುಂದುವರೆದಲ್ಲಿ ಮಧ್ಯದಲ್ಲಿ ಸ್ವಲ್ಪ ಕಡಿಮೆಯಾಗಿ ಮತ್ತೆ ಹೆಚ್ಚಾಗುತ್ತದೆ.

     ಚಿಕುನ್‍ಗುನ್ಯ ರೋಗದ ಲಕ್ಷಣಗಳು: ಇದ್ದಕ್ಕಿದ್ದಂತೆ ಜ್ವರ, ಕೀಲುಗಳಲ್ಲಿ ತೀವ್ರವಾದ ನೋವು ಮತ್ತು ಊತ ಉಂಟಾಗುವುದು.      ಚಿಕಿತ್ಸೆ: ಡೆಂಗಿ ಮತ್ತು ಚಿಕುಂಗುನ್ಯಾ ರೋಗಗಳಿಗೆ ನಿರ್ದಿಷ್ಟವಾದ ಚಿಕಿತ್ಸೆ ಇರುವುದಿಲ್ಲ. ರೋಗಲಕ್ಷಣಗಳಿಗೆ ಅನುಗುಣವಾದ ಚಿಕಿತ್ಸೆಯನ್ನು ಸಕಾಲದಲ್ಲಿ ಒದಗಿಸಿದಲ್ಲಿ ಡೆಂಗಿ ರೋಗದ ಲಕ್ಷಣಗಳನ್ನು ಪರಿಹರಿಸಿ ಮುಂದಾಗಬಹುದಾದ ತೊಂದರೆ ಮತ್ತು ಸಾವನ್ನು ತಪ್ಪಿಸಬಹುದು. 

       ಡೆಂಗಿ ಜ್ವರದಲ್ಲಿ ಆಸ್ಪಿರಿನ್ ಮತ್ತು ಬ್ರೂಫಿನ್ ಮುಂತಾದ ಔಷಧಿಗಳನ್ನು ಕೊಡಬಾರದು. ಇವು ರಕ್ತಸ್ರಾವ ಮತ್ತು ಹೊಟ್ಟೆ ನೋವನ್ನು ಇನ್ನಷ್ಟು ತೀವ್ರಗೊಳಿಸುತ್ತವೆ. ವೈದ್ಯರ ಸಲಹೆ ಮೇರೆಗೆ “ಪ್ಯಾರಸಿಟಮಾಲ್”ಕೊಡಬಹುದು. ಡೆಂಗಿ ರಕ್ತಸ್ರಾವ ಜ್ವರದ ಲಕ್ಷಣಗಳು ಒಂದಕ್ಕಿಂತ ಹೆಚ್ಚು ಕಂಡು ಬಂದಲ್ಲಿ ರೋಗಿಯನ್ನು ತುರ್ತಾಗಿ ಹತ್ತಿರದ ಆಸ್ಪತ್ರೆಗೆ ಸೇರಿಸಬೇಕು. 

     ಕೊಡಗು ಜಿಲ್ಲೆಯಲ್ಲಿ ಡೆಂಗೀ ಜ್ವರ ಮತ್ತು ಚಿಕುಂಗುನ್ಯ ರೋಗದ ಸ್ಥಿತಿ: 2021 ರಲ್ಲಿ ದಿನಾಂಕ ಆಗಸ್ಟ್-2021 ನೇ ಮಾಹೆಯವರೆಗೆ ರವರೆಗೆ ಕೊಡಗು ಜಿಲ್ಲೆಯಲ್ಲಿ 22 ಡೆಂಗಿ ಜ್ವರ ಪ್ರಕರಣಗಳು ರಕ್ತದ ಮಾದರಿ ಪರೀಕ್ಷೆಯಿಂದ ದೃಡಫಟ್ಟಿರುತ್ತವೆ. ಇವುಗಳಲ್ಲಿ ಎಲ್ಲಾ 22 ಡೆಂಗಿ ಜ್ವರ ಪ್ರಕರಣಗಳಿಗೆ ಸೂಕ್ತ ಬೆಂಬಲಾತ್ಮಕ ಚಿಕಿತ್ಸೆ ನೀಡಲಾಗಿದೆ ಮತ್ತು ಗುಣಮುಖವಾಗಿರುತ್ತಾರೆ. ಡೆಂಗಿ ಜ್ವರ ದಿಂದ ಯಾವುದೇ ಸಾವು ಸಂಭವಿಸಿರುವುದಿಲ್ಲ. 

     ಅದೇ ರೀತಿ 2021 ರಲ್ಲಿ ದಿನಾಂಕ ಆಗಸ್ಟ್-2021 ನೇ ಮಾಹೆಯವರೆಗೆ ರವರೆಗೆ ಕೊಡಗು ಜಿಲ್ಲೆಯಲ್ಲಿ 1 ಚಿಕುನ್‍ಗುನ್ಯ ಜ್ವರ ಪ್ರಕರಣಗಳ ರಕ್ತದ ಮಾದರಿ ಪರೀಕ್ಷೆಯಿಂದ ದೃಡಫಟ್ಟಿರುತ್ತವೆ. ಈ 1 ಚಿಕುಂಗುನ್ಯ ಪ್ರಕರಣಕ್ಕೆ ಸೂಕ್ತ ಬೆಂಬಲಾತ್ಮಕ ಚಿಕಿತ್ಸೆ ನೀಡಲಾಗಿದೆ ಮತ್ತು ಗುಣಮುಖವಾಗಿರುತ್ತಾರೆ. 

     ಸೊಳ್ಳೆಗಳ ಉತ್ಪತ್ತಿ ತಾಣಗಳು:  ಈ ಸೊಳ್ಳೆಗಳು ಹಗಲು ಹೊತ್ತು ಕಚ್ಚುತ್ತದೆ. ಡ್ರಮ್, ಬ್ಯಾರೆಲ್, ನೀರಿನ ತೊಟ್ಟಿ, ಏರ್ ಕೂಲರ್, ಅನುಪಯುಕ್ತ ಟೈರ್, ಒಡೆದ ಮಡಕೆ, ತೆಂಗಿನ ಚಿಪ್ಪು, ತಾರಸಿ ಮನೆಗಳ ಮೇಲ್ಚಾವಣಿ, ಘನತ್ಯಾಜ್ಯ ವಸ್ತುಗಳು, ಅಡಿಕೆ ತೋಟಗಳಲ್ಲಿ ಬಿದ್ದಿರುವ ಹಾಳೆಗಳು, ರಬ್ಬರ ತೋಟಗಳಲ್ಲಿ ರಬ್ಬರ ಸಂಗ್ರಹಿಸುವ ಕಫ್, ಹೂವಿನ ಕುಂಡ, ಇತ್ಯಾದಿಗಳಲ್ಲಿ ನೀರು ನಿಂತು ಈಡಿಸ್ ಸೊಳ್ಳೆ ಉತ್ಪತ್ತಿಯಾಗುತ್ತದೆ.

     ಡೆಂಗಿ ಮತ್ತು ಚಿಕುಂಗುನ್ಯ ರೋಗಗಳ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ: ಮನೆ ಪರಿಸರ, ಅಂಗಡಿ ಮುಂಗಟ್ಟುಗಳಲ್ಲಿ ಎಲ್ಲಿಯೂ ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು. ಸೊಳ್ಳೆಗಳು ಪ್ರವೇಶಿಸದಂತೆ ಮನೆಯ ಕಿಟಕಿ ಬಾಗಿಲುಗಳಿಗೆ ಜಾಲರಿ ಅಳವಡಿಸುವುದು. ಹೊರಾಂಗಣದಲ್ಲಿ ಮಲಗುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಹಾಗೂ ವಿಶ್ರಾಂತಿ ಪಡೆಯುವಾಗ ಮತ್ತು ಮಲಗುವಾಗ ವಿಶೇಷವಾಗಿ ಗರ್ಭಿಣಿಯರು/ವಯಸ್ಕರು ಮತ್ತು ಮಕ್ಕಳು ಕೀಟನಾಶಕ ಲೇಪಿತ ಸೊಳ್ಳೆ ಪರದೆಗಳನ್ನು ಉಪಯೋಗಿಸುವುದು. ನೀರಿನ ತೊಟ್ಟಿ/ಟ್ಯಾಂಕ್‍ನ್ನು ಕನಿಷ್ಟ ಪಕ್ಷ ವಾರಕ್ಕೊಮ್ಮೆಯಾದರೂ ಪೂರ್ತಿ ಖಾಲಿ ಮಾಡಿ ತಿಕ್ಕಿ ತೀಡಿ ತೊಳೆಯುವುದು. ಬಯಲಿನಲ್ಲಿ ತ್ಯಾಜ್ಯ ವಸ್ತುಗಳಾದ ಟೈರ್, ಎಳೆನೀರಿನಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರವಹಿಸಿವುದು ಅಥವಾ ಸೂಕ್ತ ವಿಲೇವಾರಿ ಮಾಡುವುದು. ಸಾಧ್ಯವಾದಷ್ಟು ಮೈ ಮುಚ್ಚುವಂತೆ ಬಟ್ಟೆಯನ್ನು ಧರಿಸುವುದು. ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು. ಸೊಳ್ಳೆ ಕಚ್ಚದಂತೆ ಎಲ್ಲಾ ರೀತಿಯ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸುವುದು.

           ಮೆದುಳು ಜ್ವರ ((Japanese Encephalitis): ಮೆದುಳು ಜ್ವರವು ವೈರಾಣುವಿನಿಂದ ಉಂಟಾಗುವ ರೋಗ. ಈ ರೋಗವು ಸೋಂಕಿರುವ ಹಂದಿಗಳಿಂದ ಕ್ಯುಲೆಕ್ಸ್ ಜಾತಿಯ ಸೊಳ್ಳೆಗಳ ಮೂಲಕ ಹರಡುತ್ತದೆ. ಮಾನವನಿಗೆ ಇದು ಆಕಸ್ಮಿಕವಾಗಿ ತಗಲುತ್ತದೆ. ಈ ರೋಗಕ್ಕೆ ಹೆಚ್ಚಾಗಿ ಮಕ್ಕಳು ತುತ್ತಾಗುತ್ತಾರೆ.  ಈ ರೋಗವು ತಗುಲಿದ ಶೇಕಡಾ 30 ರಿಂದ 50 ರಷ್ಟು ಮಕ್ಕಳು ಮರಣ ಹೊಂದುವ ಸಂಭವವಿದೆ. ಬದುಕಿ ಉಳಿದ ವ್ಯಕ್ತಿಗಳಲ್ಲಿ ಅನೇಕರಿಗೆ ನರ ದೌರ್ಬಲ್ಯ ಬುದ್ದಿ ಮಾಂದ್ಯತೆ ಮುಂತಾದ ಪರಿಣಾಮಗಳು ಉಂಟಾಗುತ್ತವೆ.

      ಲಕ್ಷಣಗಳು: ಜ್ವರ, ತಲೆನೋವು, ಕತ್ತಿನ ಬಿಗಿತ, ತಲೆಸುತ್ತುವಿಕೆ, ಮೈ ನಡುಕ, ಎಚ್ಚರ ತಪ್ಪುವುದು. ಖಾಯಿಲೆಯು ಉಲ್ಬಣಗೊಂಡಾಗ ಮೆದುಳು ಊತಗೊಂಡು ಸಾವು ಸಂಭವಿಸಬಹುದು. ಕೊಡಗು ಜಿಲ್ಲೆಯಲ್ಲಿ ಮೆದುಳು ಜ್ವರ ರೋಗ ಸ್ಥಿತಿ: 2021 ರಲ್ಲಿ ಆಗಸ್ಟ್-2021 ರ ಮಾಸಾಂತ್ಯದದವರೆಗೆ ಯಾವುದೇ ಮೆದುಳು ಜ್ವರ ರೋಗದ ಪ್ರಕರಣಗಳು  ವರದಿಯಾಗಿರುವುದಿಲ್ಲ. 

     ಮೆದುಳು ಜ್ವರ ರೋಗ ನಿಯಂತ್ರಣ ಮತ್ತು ಮುನ್ನೆಚ್ಚರಿಕಾ ಕ್ರಮಗಳು; ರೋಗ ಲಕ್ಷಣಗಳು ಕಂಡುಬಂದಲ್ಲಿ ತಡ ಮಾಡದೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡುವುದು. ಹಂದಿಗೂಡುಗಳಿಗೆ ಸೊಳ್ಳೆ ನಿರೋಧಕ ಜಾಲರಿಗಳನ್ನು ಅಳವಡಿಸುವುದು ಮತ್ತು ಕೀಟನಾಶಕ ಸಿಂಪಡಿಸುವುದು. ಸಂಜೆ ವೇಳೆಯಲ್ಲಿ ಮಕ್ಕಳು ಮೈ ತುಂಬಾ ಬಟ್ಟೆ ಧರಿಸಿ ಓಡಾಡುವುದು. ಮಕ್ಕಳನ್ನು ಮನೆಯ ಹೊರಗಡೆ ಅಥವಾ ಜಾನುವಾರುಗಳ ಸಂಪರ್ಕಕ್ಕೆ ಹತ್ತಿರವಾಗಿ ಮಲಗಿಸುವುದನ್ನು ತಪ್ಪಿಸುವುದು. ಮಲಗುವಾಗ ತಪ್ಪದೇ ಸೊಳ್ಳೆ ಪರದೆಗಳನ್ನು ಉಪಯೋಗಿಸುವುದು ಹಾಗೂ ಸೊಳ್ಳೆ ನಿರೋಧಕಗಳನ್ನು ಮತ್ತು ಬೇವಿನ ಸೊಪ್ಪಿನ ಹೊಗೆಯನ್ನು ಹಾಕುವುದು. ಬೇವಿನ ಮಿಶ್ರಣದ ಗೊಬ್ಬರವನ್ನು ಭತ್ತದ ಗದ್ದೆಗಳಲ್ಲಿ ಬಳಸುವುದರಿಂದ ಸೊಳ್ಳೆಗಳು ಉತ್ಪತ್ತಿಯಾಗುವುದನ್ನು ತಡೆಗಟ್ಟಬಹುದು. 

      ಯಾವುದೇ ಜ್ವರವಿರಲಿ ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳುವುದರೊಂದಿಗೆ ಈ ಎಲ್ಲಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಅವರು ಸಾರ್ವಜನಿಕರಲ್ಲಿ ಕೋರಿದ್ದಾರೆ.

      ಹೆಚ್ಚಿನ ಮಾಹಿತಿಗೆ ಆರೋಗ್ಯ ಸಹಾಯವಾಣಿ 104 ಅಥವಾ 08272-225443 ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಚಾರುಲತಾ ಸೋಮಲ್ ಅವರು ತಿಳಿಸಿದ್ದಾರೆ.

No comments

Post a Comment