ಸಿದ್ದಾಪುರ (web@timesofcoorg): ಎಸ್ ವೈ ಎಸ್ ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಮರ್ಹೂಂ ಸಿದ್ದಾಪುರ ಉಸ್ಮಾನ್ ಹಾಜಿಯವರ ಪ್ರಥಮ ವರ್ಷದ ಅನುಸ್ಮರಣೆ ಹಾಗೂ ಬೃಹತ್ ಪ್ರಾರ್ಥನಾ ಸಂಗಮ ಸಿದ್ದಾಪುರ ಮುನವ್ವಿರುಲ್ ಇಸ್ಲಾಂ ಮದ್ರಸ ಆವರಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಎಸ್.ವೈ.ಎಸ್ ಜಿಲ್ಲಾ ಸಮಿತಿಯ ವತಿಯಿಂದ ಉಸ್ಮಾನ್ ಹಾಜಿಯವರ ಜೀವನ ಚರಿತ್ರೆಯನ್ನು ಸ್ಮರಿಸುವ ಪುಸ್ತಕ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕೊಡಗು ಜಿಲ್ಲಾ ಉಪಖಾಝಿ ಶೈಖುನಾ ಎಂ.ಎಂ ಅಬ್ದುಲ್ಲಾ ಫೈಝಿ, ಮರ್ಹೂಂ ಉಸ್ಮಾನ್ ಹಾಜಿಯವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ, ತನ್ನ ಜೀವನವನ್ನೇ ಬಡವರಿಗಾಗಿ ಶೋಷಿತರಾಗಿ ಮುಡಿಪಾಗಿಟ್ಟ ಮಹಾನ್ ನಾಯಕರಾಗಿದ್ದರು ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ, ಪ್ರಖ್ಯಾತ ವಾಗ್ಮಿ ಮುಸ್ತಫ ಹುದವಿ ಆಕ್ಕೋಡ್ ಜೀವನವು ಸಾರ್ಥಕವಾಗಬೇಕಾದರೆ ಅವರವರ ಜೀವನದಲ್ಲಿ ಒಳಿತು, ಮಾನವೀಯತೆ, ಕರುಣೆಯು ಇರಬೇಕು. ಅಂತಹ ಎಲ್ಲಾ ಗುಣವನ್ನು ಹೊಂದಿದಂತಹ ಅಮರ ನಾಯಕರಾಗಿದ್ದರು ಉಸ್ಮಾನ್ ಹಾಜಿ ಎಂದು ಸ್ಮರಿಸಿದರು.
ಎಸ್ ವೈ ಎಸ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಕೊಡಗು ಸಮಸ್ತ ಸಂಯುಕ್ತ ಖಾಝಿ ಮುಹಮ್ಮದ್ ಜಮಲ್ಲುಲೈಲಿ ತಂಙಲ್ ರವರು ಪ್ರಾರ್ಥನೆಗೆ ನೇತೃತ್ವ ನೀಡಿ, ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.
25 ವರ್ಷಗಳ ಕಾಲ ಕೊಡಗು ಜಿಲ್ಲೆಯಲ್ಲಿ ಸಮಸ್ತ ಸಂಘಟನೆಯ ಮೂಲಕ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ರಂಗಗಳಲ್ಲಿ ಸೇವೆ ಸಲ್ಲಿಸಿ ಜಿಲ್ಲೆಯಿಂದ ನಿರ್ಗಮಿಸಿದ ಬಹು ಇಸ್ಮಾಯಿಲ್ ಉಸ್ತಾದ್ ರವರನ್ನು ಗೌರವಿಸಿ, ನೆನಪಿನ ಕಾಣಿಕೆ ಕೊಟ್ಟು ಬೀಳ್ಕೊಡಲಾಯಿತು. ಜೊತೆಯಾಗಿ ಜಮಲ್ಲುಲೈಲಿ ತಂಙಲ್, ಎಂ.ಎಂ ಅಬ್ದುಲ್ಲಾ ಫೈಝಿ ಹಾಗೂ ಮುಸ್ತಫಾ ಹುದವಿ ರವರು ಸಮಾಜಕ್ಕೆ ನೀಡಿದ ಸೇವೆಗಳನ್ನು ಪರಿಗಣಿಸಿ ಎಸ್ ವೈ ಎಸ್ ಜಿಲ್ಲಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಎಸ್ ವೈ ಎಸ್ ಜಿಲ್ಲಾಧ್ಯಕ್ಷರಾದ ಬಶೀರ್ ಹಾಜಿ ಗೋಣಿಕೊಪ್ಪ ವಹಿಸಿದ್ದರು. ಪ್ರಾರ್ಥನೆಯನ್ನು ಸ್ಥಳೀಯ ಮಸೀದಿ ಖತೀಬರಾದ ನೌಫಲ್ ಹುದವಿ ನೆರವೇರಿಸಿದರು. ಕಾರ್ಯಕ್ರಮದಲ್ಲಿ
ಅಬ್ದುರ್ರಹ್ಮಾನ್ ಮುಸ್ಲಿಯಾರ್ ಕೊಡಗು, ಮಾಜಿ ಶಾಸಕರಾದ ಕೆ.ಎಂ ಇಬ್ರಾಹಿಂ, ವಕ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಕೆ. ಎ ಯಾಕೂಬ್, ಸಿದ್ದಾಪುರ ಮುಸ್ಲಿಂ ಜಮಾಅತ್
ಅಧ್ಯಕ್ಷರಾದ ಮುಸ್ತಫ ಹಾಜಿ, ಪ್ರಧಾನ ಕಾರ್ಯದರ್ಶಿ ರವೂಫ್ ಹಾಜಿ, ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಿರಾಜುದ್ದೀನ್, ಕಾರ್ಯದರ್ಶಿ ಲತೀಫ್ ಹಾಜಿ ಬೆಂಗಳೂರು, SYS ಜಿಲ್ಲಾ ಕೋಶಾಧಿಕಾರಿ ಉಮರ್ ಫೈಝಿ ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು, ಕಾರ್ಯಕರ್ತರು ಮತ್ತು ಸಮಸ್ತಾಭಿಮಾನಿಗಳು ಭಾಗವಹಿಸಿದ್ದರು. ಎಸ್ ವೈ ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ ಸ್ವಾಗತಿಸಿದರು.
No comments
Post a Comment