ಜಿಲ್ಲಾಡಳಿತದಿಂದ ಫೋನ್ ಇನ್ ಕಾರ್ಯಕ್ರಮ : ಜಿಲ್ಲೆಯಲ್ಲಿ ಕುಡಿಯುವ ನೀರು, ರಸ್ತೆ ಸಂಪರ್ಕ ಹಾಗೂ ವಸತಿ ಯೋಜನೆ ಅನುಷ್ಠಾನಕ್ಕೆ ಮನವಿ

No comments
     ಮಡಿಕೇರಿ (Times Of Coorg):- ನಗರದ ಜಿಲ್ಲಾಧಿಕಾರಿ ಅವರ ಕಚೇರಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದಂತೆ 3 ನೇ ಫೋನ್ ಇನ್ ಕಾರ್ಯಕ್ರಮವು ಬುಧವಾರ ನಡೆಯಿತು.

      ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಗುಡೂರು ಭೀಮಸೇನಾ ಅವರ ಉಪಸ್ಥಿತಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಸುಮಾರು 11 ಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಲಾಯಿತು.

      ಜಿಲ್ಲೆಯಲ್ಲಿ ಗ್ರಾಮೀಣ ರಸ್ತೆ, ಕುಡಿಯುವ ನೀರು, ಚರಂಡಿ ನಿರ್ಮಾಣ, ವಸತಿ ಯೋಜನೆಗಳ ಅನುಷ್ಠಾನ ಮತ್ತಿತರ ಬಗ್ಗೆ ಸಾರ್ವಜನಿಕರು ಕರೆ ಮಾಡಿ ಗಮನ ಸೆಳೆದರು.

     ಕುಟ್ಟ ಗ್ರಾ.ಪಂ.ವ್ಯಾಪ್ತಿಯ ಮಂಚಳ್ಳಿ ಗ್ರಾಮದಲ್ಲಿ ಚರಂಡಿ ನಿರ್ಮಾಣ ಮಾಡಬೇಕೆಂದು ಅಲ್ಲಿನ ಸ್ಥಳೀಯರೊಬ್ಬರು ಮನವಿ ಮಾಡಿದರು. ಬಿಳುಗುಂದ ಗ್ರಾಮದ ರಾಮು ಅವರು ಕುಡಿಯುವ ನೀರು ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಕೋರಿದರು.

    ಪಾರಾಣೆಯ ಸ್ಥಳೀಯರೊಬ್ಬರು ಕರೆ ಮಾಡಿ, ಪಾರಾಣೆಗೆ ಸಂಪರ್ಕ ಕಲ್ಪಿಸುವ ರಸ್ತೆ ತುಂಬಾ ಹದಗೆಟ್ಟಿದ್ದು ಇದನ್ನು ಸರಿಪಡಿಸಬೇಕು. ಹಾಗೆಯೇ ಗರ್ವಾಲೆ ಗ್ರಾ.ಪಂ ವ್ಯಾಪ್ತಿಯ ಕಾವೇರಪ್ಪ ಅವರು, ಕೋಟೆಬೆಟ್ಟ ರಸ್ತೆ ಸರಿ ಪಡಿಸುವಂತಾಗಬೇಕು ಎಂದು ಅವರು ಮನವಿ ಮಾಡಿದರು. 

    ಕಣ್ಣಾಂಗಾಲ ಗ್ರಾಮದ ಸ್ಥಳೀಯರೊಬ್ಬರು ಕಡು ಬಡವರಿಗೆ ಜನತಾ ಮನೆ ನಿರ್ಮಿಸಿಕೊಡಲು ಮುಂದಾಗಬೇಕಿದೆ ಎಂದು ಅವರು ಮನವಿ ಕೋರೀದರು.
      ವೀರಾಜಪೇಟೆ ತಾಲೂಕು ಆಸ್ಪತ್ರೆಯಲ್ಲಿ ಹೊರ ಗುತ್ತಿಗೆ ಅಡಿ ಕರ್ತವ್ಯ ನಿರ್ವಹಿಸುತ್ತಿದ್ದು, 2 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಇದನ್ನು ಕೊಡಿಸುವಂತೆ ಸ್ಥಳೀಯರೊಬ್ಬರು ಗಮನ ಸೆಳೆದರು. 
      ಗರ್ವಾಲೆ ಗ್ರಾ.ಪಂ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದು ಇದನ್ನು ಕೂಡಲೆ ತೆರವುಗೊಳಿಸುವಂತಾಗಬೇಕು ಎಂದು ಗ್ರಾಮಸ್ಥರೊಬ್ಬರು ಮನವಿ ಮಾಡಿದರು. 
      ಜಿಲ್ಲೆಯ ಆಟೋ ಚಾಲಕರೊಬ್ಬರು ಲಾಕ್‍ಡೌನ್‍ನಿಂದಾಗಿ ಬದುಕು ಕಟ್ಟಿಕೊಳ್ಳುವುದು ಕಷ್ಟವಾಗಿದೆ. ಆದ್ದರಿಂದ ಹೆಚ್ಚಿನ ಆಹಾರ ಕಿಟ್ ಒದಗಿಸಬೇಕು ಎಂದು ಅವರು ಮನವಿ ಮಾಡಿದರು. ನಾಪೋಕ್ಲು ಭಾಗದ ಕೃಷಿಕರೊಬ್ಬರು ಕರೆ ಮಾಡಿ ಪಡಿತರ ತಲುಪಿಸುವಂತಾಗಬೇಕು ಎಂದು ಕೋರಿದರು.  
     ವೀರಾಜಪೇಟೆ ತಾಲೂಕಿನ ಬಿಳುಗುಂದ ಗ್ರಾ.ಪಂ ವ್ಯಾಪ್ತಿಯ ಕಾವೇರಪ್ಪ ಅವರು ಕರೆ ಮಾಡಿ, ಮೈಸೂರಿನ ಆಸ್ಪತ್ರೆಗೆ ತೆರಳುವಂತಾಗಲು ವಾಹನದ ಪಾಸ್ ವ್ಯವಸ್ಥೆ ಮಾಡಬೇಕೆಂದು ಕೋರಿದರು.
     ಹೀಗೆ ಸಾರ್ವಜನಿಕರಿಂದ ಹಲವು ಕರೆಗಳನ್ನು ಸ್ವೀಕರಿಸುವ ಸಂಧರ್ಭದಲ್ಲಿ ಮಾಹಿತಿ ನೀಡಿದ ಜಿ.ಪಂ.ಉಪ ಕಾರ್ಯದರ್ಶಿ ಗುಡೂರು ಭೀಮಸೇನ ಅವರು ಸದ್ಯ ಕೊಡಗು ಜಿಲ್ಲೆ ಹಸಿರು ವಲಯಕ್ಕೆ ಬಂದಿರುವುದರಿಂದ ಲಾಕ್‍ಡೌನ್‍ನ್ನು ಹಂತ ಹಂತವಾಗಿ ಸಡಿಲಗೊಳ್ಳುತ್ತಿದ್ದು, ಆ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು. 
     ರಸ್ತೆ, ಸೇತುವೆ, ತಡೆಗೋಡೆ, ಕುಡಿಯುವ ನೀರಿನ ಸಂಪರ್ಕ ಹಾಗೂ ವಸತಿ ಯೋಜನೆಗಳು ಸೇರಿದಂತೆ ಹಲವು ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ಗುಡೂರು ಭೀಮಸೇನ ಅವರು ತಿಳಿಸಿದರು. 
     ನೋಡಲ್ ಅಧಿಕಾರಿ ಶ್ರೀನಿವಾಸ್, ತಾಲೂಕು ಪಂಚಾಯಿತಿ ಇಒ ಲಕ್ಷ್ಮೀ, ಜಿ.ಪಂ.ಕಾರ್ಯಪಾಲಕ ಎಂಜಿನಿಯರ್ ಪ್ರಭು, ರೇವಣ್ಣನವರ್ ಇತರರು ಇದ್ದರು.

No comments

Post a Comment