ಕೊರೋನಾ ವಿರುದ್ಧ ಕ್ರಮ : ಸಚಿವರಿಗೆ ಮನವಿ ಸಲ್ಲಿಸಿದ ಕೊಡಗು ಅಲ್ಪಸಂಖ್ಯಾತ ಮುಖಂಡರು

No comments
ಮಡಿಕೇರಿ ಮಾ.22 (ಟೈಮ್ಸ್ ಆಫ್ ಕೂರ್ಗ್) : ಜಿಲ್ಲೆಯ ಕೊಂಡಂಗೇರಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರಿಗೆ ಕೊರೋನಾ ವೈರಸ್ ಸೋಂಕಿರುವುದರಿಂದ ಆ ಗ್ರಾಮಕ್ಕೆ ನಿರ್ಬಂಧ ಹೇರಲಾಗಿದ್ದು, ಸ್ಥಳೀಯ ನಿವಾಸಿಗಳಿಗೆ ಅಗತ್ಯ ವೈದ್ಯಕೀಯ ನೆರವು ಮತ್ತು ದಿನ ಬಳಕೆಯ ವಸ್ತುಗಳನ್ನು ಜಿಲ್ಲಾಡಳಿತದ ಮೂಲಕ ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಅಲ್ಪಸಂಖ್ಯಾತ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮಡಿಕೇರಿಗೆ ಆಗಮಿಸಿದ ಸಚಿವರನ್ನು ಭೇಟಿಯಾದ ಪ್ರಮುಖರು ಆಡಳಿತ ವ್ಯವಸ್ಥೆ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು ಬೆಂಬಲಿಸುವುದಾಗಿ ತಿಳಿಸಿದರು. ಕೊಂಡಂಗೇರಿ ಗ್ರಾಮದ ಜನ ಆತಂಕದಲ್ಲಿದ್ದು, ಜಿಲ್ಲಾಡಳಿತ ಅಗತ್ಯ ನೆರವನ್ನು ನೀಡಬೇಕು ಮತ್ತು ಮಾನಸಿಕ ಸ್ಥೈರ್ಯವನ್ನು ತುಂಬಬೇಕು ಎಂದು ಮನವಿ ಮಾಡಿದರು.

ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ನಿಗಾ ವಹಿಸಿ ವಿದೇಶಿಗರು ಹಾಗೂ ಹೊರ ರಾಜ್ಯಗಳ ಮಂದಿ ಕೊಡಗು ಜಿಲ್ಲೆಯನ್ನು ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕು. ನಿಲ್ದಾಣಗಳಲ್ಲೇ ಶಂಕಿತ ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆಗೆ ಒಳ ಪಡಿಸಬೇಕು. ಊರು, ಪರ ಊರುಗಳಿಗೆ ಪ್ರವೇಶಿಸಿದ ನಂತರ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದಕ್ಕಿಂತ ಮೊದಲೇ ಎಚ್ಚೆತ್ತುಕೊಳ್ಳುವುದು ಸೂಕ್ತವೆಂದು ಪ್ರಮುಖರು ಸಚಿವರ ಗಮನ ಸೆಳೆದರು.

ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್, ಪ್ರಧಾನ ಕಾರ್ಯದರ್ಶಿ ಕೆ.ಎಂ.ಭಾವ, ಜೆಡಿಎಸ್ ರಾಜ್ಯ ಉಪಾಧ್ಯಕ್ಷÀ ಎಂ.ಎಂ.ಷರೀಫ್, ಮಾನವ ಹಕ್ಕುಗಳ ಸಂಘಟನೆಯ ಕಾರ್ಯದರ್ಶಿ ಸೂಫಿ ಹಾಜಿ, ಸುಂಟಿಕೊಪ್ಪ ಗ್ರಾ.ಪಂ ಮಾಜಿ ಅಧ್ಯಕ್ಷ ಕರೀಮ್, ಎಂ.ಆಲಿ ಮತ್ತಿತರ ಪ್ರಮುಖರು ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.

No comments

Post a Comment