ಮಂಗಳೂರು: (TOC ದ.ಕ ) ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ವತಿಯಿಂದ ಅಲ್ಪಸಂಖ್ಯಾತ ಇಲಾಖೆಯ ವಿದ್ಯಾರ್ಥಿ ವೇತನದ ವಿಳಂಬ ನೀತಿಯ ವಿರುದ್ಧ ನಗರದ ಎ.ಬಿ ಶೆಟ್ಟಿ ವೃತ್ತದಿಂದ ಮೌಲಾನಾ ಆಝಾದ್ ಭವನ ಕಛೇರಿವರೆಗೆ ‘ಮೈನಾರಿಟಿ ಭವನ್ ಚಲೋ’ ಮೌಲಾನಾ ಆಝಾದ್ ಭವನ ಕಛೇರಿಗೆ ಮುತ್ತಿಗೆ ಹಾಕಲಾಯಿತು. ವಿದ್ಯಾರ್ಥಿಗಳು ಇಲಾಖೆಯ ಬೇಜವಾಬ್ದಾರಿತನದ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಫಯಾಝ್ ದೊಡ್ಡಮನೆ ಮಾತನಾಡಿ ‘ಸರ್ಕಾರದಿಂದ ಪ್ರತಿ ವರ್ಷ ನೀಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನಗಳು ಇನ್ನೂ ರಾಜ್ಯದ ಹಲವು ವಿದ್ಯಾರ್ಥಿಗಳಿಗೆ ಮಂಜೂರಾಗದೇ ಬಾಕಿಯಿದೆ. ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರವು ಎಲ್ಲ ವಿದ್ಯಾರ್ಥಿ ವೇತನವನ್ನು ಆನ್ಲೈನ್ ಸೇವೆ ಮಾಡಿ ಪ್ರಿ ಮೆಟ್ರಿಕ್ ವಿದ್ಯಾರ್ಥಿ ವೇತನ ಪಡೆಯುವ ವಿದ್ಯಾರ್ಥಿಗಳನ್ನು ಇನ್ನಷ್ಟು ಸಂಕಷ್ಟಕ್ಕೀಡು ಮಾಡಿದ್ದಲ್ಲದೆ, 2017-18 ಮತ್ತು 19 ನೇ ಸಾಲಿನ ಹಲವು ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನವನ್ನು ಬಾಕಿಯಿಟ್ಟಿರುವುದು ರಾಜ್ಯಾದ್ಯಂತ ವಿದ್ಯಾರ್ಥಿಗಳನ್ನು ವಂಚನೆ ಮಾಡುತ್ತಿದೆ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕುವ ಸಂದರ್ಭದಲ್ಲೂ ಹಲವು ತಾಂತ್ರಿಕ ದೋಷಗಳು ಎದುರಿಸಿತ್ತಿದ್ದು, ಅರ್ಜಿಯ ಪರಿಶೀಲನೆ ನಂತರ ವಿದ್ಯಾರ್ಥಿಗಳಿಗೆ ಸಿಗಬೇಕಾದ ವಿದ್ಯಾರ್ಥಿ ವೇತನದಲ್ಲೂ ಕೂಡ ವಿಳಂಬ ಮಾಡುತ್ತಿರುವುದು ಪ್ರತಿವರ್ಷ ಕಾಣಸಿಗುತ್ತಿದೆ. ಪ್ರತಿ ವರ್ಷದ ಡಿಸೆಂಬರ್ ಜನವರಿ ಒಳಗಡೆ ಬರಬೇಕಾದ ವಿದ್ಯಾರ್ಥಿವೇತನ ಹೊಸ ವರ್ಷ ಆರಂಭವಾದರೂ ಕೈಗೆ ಸಿಗದೇ ಇರುವುದು ಅಲ್ಪಸಂಖ್ಯಾತ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ವಿದ್ಯಾರ್ಥಿಗಳು ಅಲ್ಪಸಂಖ್ಯಾತ ಇಲಾಖೆಗಳಿಗೆ ಭೇಟಿ ನೀಡಿದಾಗ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳನ್ನು ಸರಿಯಾಗಿ ಸಹಕರಿಸುತ್ತಿಲ್ಲ, ತಾಂತ್ರಿಕ ದೋಷಗಳನ್ನು ಸರಿಪಡಿಸಲು ಅಧಿಕಾರಿಗಳು ವಿಳಂಬ ಮತ್ತು ಅಸಡ್ಡೆ ತೋರುತ್ತಿದ್ದಾರೆ. ವರ್ಷಗಳ ಅರ್ಜಿಗಳು ಇಲಾಖೆಯ ಕಛೇರಿಗಳಲ್ಲಿ ಮಂಜೂರಾಗದೆ ಬಾಕಿಯಾಗಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಪೊಲೀಸರ ಮತ್ತು ಕ್ಯಾಂಪಸ್ ಫ್ರಂಟ್ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು ಕಚೇರಿಯ ಒಳ ನುಗ್ಗದಂತೆ ತಡೆದರು, ಪ್ರತಿಭಟನಾಕಾರರು ಪಟ್ಟು ಬಿಡದೆ ಸ್ಥಳದಲ್ಲಿ ಕುಳಿತು ಘೋಷಣೆ ಕೂಗಿದರು ಕೊನೆಗೆ ಪೊಲೀಸರು ಮಧ್ಯಸ್ಥಿಕೆ ವಹಿಸಿ ಕ್ಯಾಂಪಸ್ ಫ್ರಂಟ್
ನಾಯಕರನ್ನು ಜಿಲ್ಲಾಧಿಕಾರಿ ಕಚೇರಿಗೆ ಕರೆದು ಮಾತುಕತೆ ನಡೆಸಿದರು. ಜಿಲ್ಲಾಧಿಕಾರಿ ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ದ.ಕ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಸಾದಿಕ್, ರಾಜ್ಯ ಸಮಿತಿ ಸದಸ್ಯ ಇಮ್ರಾನ್ ಪಿ.ಜೆ , ಆಸಿಫ್ , ಮಂಗಳೂರು ತಾಲೂಕು ಅಧ್ಯಕ್ಷ ಹಸನ್ ಸಿರಾಜ್, ಸವಾದ್, ಶಾಹಿದ್ ಹಾಗೂ ಶಫೀಕ್ ಮತ್ತಿತರು ಉಪಸ್ಥಿತರಿದ್ದರು. ಬೇಡಿಕೆಗಳು : 1. ಅರಿವು ವಿದ್ಯಾರ್ಥಿ ವೇತನ ಸಾಲ ಯೋಜನೆಯು ಶೀಘ್ರ ವಿದ್ಯಾರ್ಥಿಗಳಿಗೆ ವಿತರಿಸಬೇಕು. 2. ಕಳೆದ ಹಾಗೂ ಈ ಸಾಲಿನಲ್ಲಿ ಸಿಗಬೇಕಾದ ಅಲ್ಪಸಂಖ್ಯಾತ ಇಲಾಖೆಯ ವಿದ್ಯಾರ್ಥಿ ವೇತನಗಳನ್ನು ಶೀಘ್ರ ಮಂಜೂರುಗೊಳಿಸಬೇಕು. 3. ವಿದ್ಯಾರ್ಥಿ ವೇತನದ ಸರ್ವರ್ ತಾಂತ್ರಿಕವಾಗಿ ಕಳಪೆ ಗುಣಮಟ್ಟದಲ್ಲಿದ್ದು, ಶೀಘ್ರ ಅಭಿವೃದ್ಧಿಗೊಳಿಸಬೇಕು ಎರಡೆರಡು ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸುತ್ತಿರುವುದಕ್ಕೆ ತಕ್ಷಣಕ್ಕೆ ನಿಲ್ಲಿಸಬೇಕು ಅರ್ಜಿ ಸಲ್ಲಿಸಲು ಸರಳ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು. 4. ಈಗಾಗಲೇ ಕೇಂದ್ರ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಮಂಜೂರಾದ ವಿದ್ಯಾರ್ಥಿ ವೇತನದ ವರದಿಯನ್ನು ಬಿಡುಗಡೆಗೊಳಿಸಿದ್ದು, ರಾಜ್ಯದ ವತಿಯಿಂದ ವಿದ್ಯಾರ್ಥಿಗಳಿಗೆ ಬಿಡುಗಡೆಯಾದ ವರದಿಯನ್ನು ಶೀಘ್ರ ಬಿಡುಗಡೆಗೊಳಿಸಬೇಕು. 5. ವಿದ್ಯಾರ್ಥಿ ವೇತನ ವಿತರಣೆಯಲ್ಲಿ ನಡೆದ ಅವ್ಯವಸ್ಥೆಗೆ ಕಾರಣವಾದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದ ವಿರುದ್ಧ ಕ್ರಮ ಕೈಗೊಳ್ಳಬೇಕು.


No comments
Post a Comment